ಫಲಿತಾಂಶದ ನಂತರ ಮುನ್ನಡೆಯ ಲೆಕ್ಕಾಚಾರ

7
ಮತಗಟ್ಟೆವಾರು ಮತಗಳ ಲಾಭ–ನಷ್ಟ ವಿಶ್ಲೇಷಣೆಗೆ ಮುಂದಾದ ಮುಖಂಡರು

ಫಲಿತಾಂಶದ ನಂತರ ಮುನ್ನಡೆಯ ಲೆಕ್ಕಾಚಾರ

Published:
Updated:

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಮತಗಳ ಲೆಕ್ಕಾಚಾರ ಮುಗಿದ ಬಳಿಕ ಈಗ ಹೊಸತೊಂದು ಲೆಕ್ಕಾಚಾರ ಶುರುವಾಗಿದೆ. ಯಾವ ಮತಗಟ್ಟೆಯಲ್ಲಿ ಎಷ್ಟು ಅಂತರ ಬಂತು ಎನ್ನುವ ಆಧಾರದ ಮೇಲೆ ಹೊಗಳಿಕೆ–ತೆಗಳಿಕೆಯ ಅಸ್ತ್ರ ಪ್ರಯೋಗ ನಡೆದಿದೆ.

ಪ್ರತಿ ಪಕ್ಷ ಹಾಗೂ ಅಭ್ಯರ್ಥಿಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಮುಖಂಡರನ್ನು ನಿಯೋಜಿಸಿಕೊಂಡಿರುತ್ತಾರೆ. ಕೊಡು–ಕೊಳ್ಳುವಿಕೆಯ ವ್ಯವಹಾರಗಳೆಲ್ಲವೂ ನಡೆಯುವುದು ಇವರ ಮೂಲಕವೇ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಹೀಗೆ ನೇತೃತ್ವ ವಹಿಸಿದವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಎಷ್ಟು ಮತ ಗಳಿಸಿಕೊಟ್ಟಿದ್ದಾರೆ. ಅಲ್ಲಿ ಎದುರಾಳಿಗೆ ಎಷ್ಟು ಮುನ್ನಡೆ ಆಗಿದೆ. ಅಥವಾ ತಮಗೆ ಎಷ್ಟು ಮುನ್ನಡೆ ಬಂದಿದೆ ಎನ್ನುವ ಲೆಕ್ಕಾಚಾರಗಳು ಈಗ ನಡೆಯುತ್ತಿವೆ.

ಅಭ್ಯರ್ಥಿಗಳು ಮತಗಟ್ಟೆವಾರು ಪಡೆದ ಮತಗಳ ಅಂಕಿ–ಅಂಶಗಳು ಈಗಾಗಲೇ ವ್ಯಾಟ್ಸಪ್‌ನಲ್ಲಿ ಹರಿದಾಡುತ್ತಿವೆ. ಇಂತಹ ಮತಗಟ್ಟೆಯಲ್ಲಿ ಜನರು ಈ ಅಭ್ಯರ್ಥಿಗೆ ಇಷ್ಟೇ ಮತ ಹಾಕಿದ್ದಾರೆ ಎನ್ನುವ ಲೆಕ್ಕ ಬೆರಳ ತುದಿಯಲ್ಲಿಯೇ ಇದೆ. ಹೀಗಾಗಿ ಗೆದ್ದ ಪಕ್ಷಗಳ ಮುಖಂಡರು ಎಲ್ಲಿ ಕಡಿಮೆ ಲೀಡ್ ಬಂದಿದೆಯೋ ಅಲ್ಲಿನ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸೋತವರೂ ಮತ್ತಷ್ಟು ಬೈಯ್ಯತೊಡಗಿದ್ದಾರೆ.

ಹೋಬಳಿ ಮಟ್ಟದಲ್ಲಿ ಬೆಟ್ಟಿಂಗ್‌: ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ಈ ಬಾರಿ ಅತ್ಯಂತ ತುರುಸಿನ ಚುನಾವಣೆ ನಡೆದಿದ್ದು, ಬೆಟ್ಟಿಂಗ್ ಸಹ ಅಷ್ಟೇ ಚುರುಕಾಗಿತ್ತು. ಇಂತಹ ಅಭ್ಯರ್ಥಿ ಇಂತಿಷ್ಟೇ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎನ್ನುವ ಲೆಕ್ಕಾಚಾರ ನಡೆದಿತ್ತು.

ಹೋಬಳಿ ಹಾಗೂ ಬೂತ್‌ ಮಟ್ಟದಲ್ಲಿಯೂ ಮತಗಳ ಮುನ್ನಡೆಯ ಲೆಕ್ಕಾಚಾರ ತೀವ್ರ ಕುತೂಹಲ ಕೆರಳಿಸಿತ್ತು. ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೋಬಳಿಗಳಲ್ಲಿ ಯಾರೂ ನಿರೀಕ್ಷೆ ಮಾಡದ ಪ್ರಮಾಣದಲ್ಲಿ ಜೆಡಿಎಸ್ ಪರ ಮತ ಚಲಾವಣೆ ಆಗಿದೆ. ಪ್ರತಿ ಹೋಬಳಿಯಲ್ಲಿಯೂ ಜೆಡಿಎಸ್‌ ಮತಗಳ ಮುನ್ನಡೆ ಸಾಧಿಸಿದೆ.

ಬಿಡದಿ ಹೋಬಳಿಯಲ್ಲಿಯೇ ಸುಮಾರು 15 ಸಾವಿರದಷ್ಟು ಮುನ್ನಡೆ ಬಂದಿದ್ದು, ಮಾಗಡಿ ಪಟ್ಟಣದಲ್ಲಿ 7ಸಾವಿರ ಹಾಗೂ ಕೂಟಗಲ್ ಹೋಬಳಿಯಲ್ಲಿ 6500 ಮತಗಳಿಂದ ಜೆಡಿಎಸ್ ಮುನ್ನಡೆ ಪಡೆದಿದೆ. ಇಲ್ಲಿ ಕಾಂಗ್ರೆಸ್ ಪರ ಮತಯಾಚನೆಯ ನೇತೃತ್ವ ವಹಿಸಿಕೊಂಡಿದ್ದ ಮುಖಂಡರು ಹಾಗೂ ಬೆಟ್ಟಿಂಗ್ ಕಟ್ಟಿಕೊಂಡಿದ್ದ ಕಾರ್ಯಕರ್ತರು ಪೆಚ್ಚುಮೊರೆ ಹಾಕಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry