ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ: ಮುಂದಿನ ನಡೆ ಏನು?

Last Updated 17 ಮೇ 2018, 8:08 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ರಚನೆಗೆ ಬೇಕಾದ ಅಗತ್ಯ ಸ್ಥಾನಗಳು ಇಲ್ಲದಿದ್ದರೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಈ ನಡೆಯ ಹಿಂದಿನ ನಿಗೂಢ ಲೆಕ್ಕಾಚಾರವೇನು?

224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಸದನ ಆರಂಭವಾದ ದಿನ ಒಂದು ಸ್ಥಾನವನ್ನು ತ್ಯಜಿಸಬೇಕಾಗುತ್ತದೆ.

ಹೀಗಾದಲ್ಲಿ ಒಟ್ಟು ಸದಸ್ಯ ಬಲ 221ಕ್ಕೆ ಇಳಿಯಲಿದೆ. ಸರ್ಕಾರ ರಚಿಸಲು 111 ಸದಸ್ಯ ಬಲ ಬೇಕಾಗುತ್ತದೆ. ಉಳಿದ ಸಂಖ್ಯೆಯನ್ನು ಬಿಜೆಪಿ ಹೇಗೆ ಹೊಂದಿಸಲಿದೆ ಎಂಬ ಚರ್ಚೆ ನಡೆದಿದೆ.

ರಾಣೆಬೆನ್ನೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕರ್ನಾಟಕ ಪ್ರಜಾ ಜನತಾ ಪಕ್ಷದ ಆರ್. ಶಂಕರ್, ಬುಧವಾರ ಬೆಳಿಗ್ಗೆ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.

ಆಗ ಕಮಲ ಪಕ್ಷದ ಬಲ 105ಕ್ಕೆ ಏರಿತ್ತು. ಸಂಜೆ ಹೊತ್ತಿಗೆ ಏಕಾಏಕಿ ‘ಪಕ್ಷ ನಿಷ್ಠೆ’ ಬದಲಿಸಿದ ಶಂಕರ್‌, ಕೈ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲಿಗೆ ಬಿಜೆಪಿ ಬಲ 104ಕ್ಕೆ ಇಳಿದಿದೆ.

ಆಯ್ಕೆ 1: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸಲು 15 ದಿನಗಳ ನೀಡಿದ ಸಮಯವನ್ನು ಬಳಸಿಕೊಳ್ಳುವುದು. ಅಧಿಕಾರ ಹಿಡಿದ ನಂತರ ಸಚಿವ ಸ್ಥಾನ, ಆಯಕಟ್ಟಿನ ನಿಗಮ–ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಲು ಸಾಧ್ಯ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದು. ಹೀಗೆ ಮಾಡುವ ಮೂಲಕ ಬೇರೆ ಪಕ್ಷದಿಂದ ಆಯ್ಕೆಯಾದ ಲಿಂಗಾಯತ ಶಾಸಕರನ್ನು ಸೆಳೆಯುವುದು.

ಆಯ್ಕೆ 2: ಅನ್ಯ ಪಕ್ಷದ ಶಾಸಕರನ್ನು ಸೆಳೆಯಲಾಗದೇ ಇದ್ದರೆ ಬಹುಮತ ಸಾಬೀತುಪಡಿಸುವವರೆಗೆ ಎದುರಾಳಿ ಪಕ್ಷದ 15 ಶಾಸಕರು ಸದನದಿಂದ ಹೊರಗೆ ಉಳಿಯುವಂತೆ ನೋಡಿಕೊಳ್ಳುವುದು. ಹೀಗೆ ಮಾಡಿದಲ್ಲಿ, ಸದನದ ಒಟ್ಟು ಸದಸ್ಯ ಬಲ 206ಕ್ಕೆ ಇಳಿಯಲಿದೆ. ಆಗ ಬಹುಮತ ಸಾಬೀತಿಗೆ 104 ಸದಸ್ಯರ ಬಲ ಇದ್ದರೆ ಸಾಕು. ಅದು ಬಿಜೆಪಿ ಬಳಿ ಇರುವುದರಿಂದ ಬಹುಮತ ಸಾಬೀತು ಸಲೀಸು. ಅತ್ತ ಎದುರಾಳಿ ಒಟ್ಟು ಬಲ 102ಕ್ಕೆ ಕುಸಿಯಲಿದೆ. ಇದನ್ನು ಲಾಭಕರವಾಗಿ ಮಾಡಿಕೊಳ್ಳುವುದು ಸದ್ಯದ ತರ್ಕ.

ಆಯ್ಕೆ 3: ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ, ಸದನದೊಳಗೆ ರಾಜೀನಾಮೆ ನೀಡುವಂತೆ ನೋಡಿಕೊಳ್ಳುವುದು. ಹೀಗೆ 15 ಶಾಸಕರು ರಾಜೀನಾಮೆ ಕೊಟ್ಟರೆ, ಸದನದ ಸದಸ್ಯ ಬಲ ಕುಗ್ಗುತ್ತದೆ. ಸ್ಪೀಕರ್ ಆಯ್ಕೆ ಬಿಜೆಪಿ ಲೆಕ್ಕಾಚಾರದಂತೆ ನಡೆಯುವ ದಾರಿ ಕೂಡ ಸುಲಭವಾಗುತ್ತದೆ.

ಆದರೆ, ಇದು ಅತ್ಯಂತ ಕಷ್ಟದ ಹಾದಿಯಾಗಿದೆ. ಏಕೆಂದರೆ 2008ರಲ್ಲಿ ‘ಆಪರೇಶನ್ ಕಮಲ’ಕ್ಕೆ ಒಳಗಾಗಿ ಬಿಜೆಪಿ ಸೇರಿದವರು ದೊಡ್ಡಮಟ್ಟದ ಏಳಿಗೆ ಕಂಡಿಲ್ಲ. ಹೀಗಾಗಿ, ಅನೇಕರು ಬರುವುದಿಲ್ಲ ಎಂಬ ಲೆಕ್ಕಾಚಾರವೂ ನಡೆದಿದೆ. ಹಾಗಿದ್ದರೂ ಅಧಿಕಾರ ಹಿಡಿಯಲೇಬೇಕು ಎಂದು ತವಕಿಸಿರುವ ಯಡಿಯೂರಪ್ಪ ಈ ನಿಟ್ಟಿನಲ್ಲಿ ಶತಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT