ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟಗನಹಳ್ಳಿ: ನೀರಿಗಾಗಿ ನಿದ್ದೆಗೆಡುವ ಗ್ರಾಮಸ್ಥರು

ಬಂಟಗನಹಳ್ಳಿಯಲ್ಲಿ ಕುಡಿಯುವ ನೀರಿಗೆ ತೊಂದರೆ
Last Updated 17 ಮೇ 2018, 8:52 IST
ಅಕ್ಷರ ಗಾತ್ರ

ಕಡೂರು: ಬಯಲುಸೀಮೆಯ ಕಡೂರು ಭಾಗದಲ್ಲಿ ಬರಗಾಲದಿಂದ ಜನರು ತತ್ತರಿಸುವಂತಾಗಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿ ಜನರು ಪರಿತಪಿಸುತ್ತಿದ್ದಾರೆ. ತಾಲ್ಲೂಕಿನ ಕಾಮನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟಗನಹಳ್ಳಿಯಲ್ಲಿ ಕುಡಿಯುವ ನೀರು ಸಂಗ್ರಹಿಸುವ ಸಲುವಾಗಿ ಜನರು ರಾತ್ರಿ ನಿದ್ದೆಗೆಡಬೇಕಾದ ಪರಿಸ್ಥಿತಿ ಇದೆ.

ಬಂಟಗನಹಳ್ಳಿಯಲ್ಲಿ ಇರುವುದು ಒಂದೇ ಕೊಳವೆಬಾವಿ. ಅದರಲ್ಲಿಯೂ ಅಲ್ಪ ಪ್ರಮಾಣದ ನೀರಿದೆ. ಗ್ರಾಮದ ಜನರ ನೀರಿನ ಬೇಡಿಕೆಯನ್ನು ಪೂರೈಸುವಷ್ಟು ಶಕ್ತಿ ಅದಕ್ಕಿಲ್ಲ. ಪಂಪ್ ಚಾಲನೆ ಮಾಡಿದರೆ ಅದರಿಂದ ನೀರು ಬರುವುದು ಒಂದೆರಡು ಗಂಟೆಗಳು ಮಾತ್ರ. ನೀರಿನ ಒತ್ತಡ ಕಡಿಮೆ ಇರುವುದರಿಂದ ಊರಿನ ಎಲ್ಲ ನಲ್ಲಿಗಳಿಗೂ ಇದರಿಂದ ನೀರು ಪೂರೈಸುವುದು ಕಷ್ಟಸಾಧ್ಯ. ಈ ಕಾರಣದಿಂದ ಊರಿನ ಒಂದು ನಿರ್ದಿಷ್ಟ ಜಾಗದಲ್ಲಿ ಒಂದು ಪೈಪ್ ವ್ಯವಸ್ಥೆ ಮಾಡಿದ್ದು, ಜನರೆಲ್ಲರೂ ಅಲ್ಲಿಗೇ ಬಂದು ನೀರು ಹಿಡಿದುಕೊಳ್ಳಬೇಕು.

ತ್ರೀ-ಫೇಸ್ ವಿದ್ಯುತ್ ಇದ್ದಾಗ ಮಾತ್ರ ಕೊಳವೆಬಾವಿಗಳು ಚಾಲನೆಯಾಗುತ್ತವೆ. ಆದರೆ, ತ್ರೀ-ಫೇಸ್ ವಿದ್ಯುತ್ ಸರಬರಾಜು ಆಗುವ ಸಮಯ ಯಾವುದೆಂದು ಯಾರಿಗೂ ನಿರ್ದಿಷ್ಟವಾಗಿ ತಿಳಿದಿರುವುದಿಲ್ಲ. ಬಂಟಗನಹಳ್ಳಿ
ಯಲ್ಲೂ ಇದೇ ಪರಿಸ್ಥಿತಿ ಇರುವುದರಿಂದ ಹಗಲೋ ರಾತ್ರಿಯೋ ತ್ರೀ ಫೇಸ್‌ ಇದ್ದಾಗ ಪಂಪ್‌ ಚಾಲನೆಗೊಳ್ಳುತ್ತದೆ. ಆಗ ಜನರು ನೀರು ಹಿಡಿಯಲು ಮುಗಿಬೀಳುತ್ತಾರೆ. ಸೈಕಲ್‌, ಬೈಕ್‌ಗಳ ಮೇಲೆ ಮೂರ್ನಾಲ್ಕು ಕೊಡಗಳನ್ನಿಟ್ಟುಕೊಂಡು ಬಂದು ನೀರು ಹಿಡಿಯಲು ಹರಸಾಹಸ ಪಡುತ್ತಾರೆ. ಕಡಿಮೆ ನೀರು ಮತ್ತು ಕೆಲವೇ ಗಂಟೆಗಳಷ್ಟು ಕಾಲ ನೀರು ಬರುವುದರಿಂದ ಜನರ ನಡುವೆ ನೀರಿಗಾಗಿ ಕೆಲವು ಬಾರಿ ಚಕಮಕಿಯೂ ನಡೆದ ಉದಾಹರಣೆಗಳಿವೆ.

‘ಬಹುತೇಕ ರಾತ್ರಿ ವೇಳೆಯೇ ತ್ರೀ-ಫೇಸ್ ವಿದ್ಯುತ್ ನೀಡುವುದರಿಂದ ನೀರು ಹಿಡಿದುಕೊಳ್ಳಲು ರಾತ್ರಿ ವೇಳೆ ಜನರು ನಿದ್ದೆ ಮಾಡದೆ ಕಾಯುವ ಪರಿಸ್ಥಿತಿ ಇದೆ. ಇದು ನಮಗೆ ಅನಿವಾರ್ಯ ಕೂಡ ಹೌದು. ನಿದ್ರಿಸಿದರೆ ಮತ್ತೇ ನೀರು ಸಿಗುವುದು ಅನುಮಾನ. ಈಗಿರುವ ಕೊಳವೆಬಾವಿ ಏನಾದರೂ ಕೈ ಕೊಟ್ಟರೆ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗುತ್ತದೆ. ಆದ್ದರಿಂದ, ಸಂಬಂಧಿಸಿದವರು ಈ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಬಂಟಗನಹಳ್ಳಿ ಗ್ರಾಮಸ್ಥರು ಒತ್ತಾಯಿಸುತ್ತಾರೆ.

**
ಕ್ರಮದ ಭರವಸೆ

ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೇ ಕಂಡುಬಂದರೂ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ 35 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಡಗಲು, ಅಂತರಘಟ್ಟೆ ಮುಂತಾದೆಡೆ ಇದ್ದ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋಗಿರುವ ತೊಂದರೆಯನ್ನು ಪರಿಹರಿಸಲಾಗಿದೆ. ಬಂಟಗನಹಳ್ಳಿಯಲ್ಲಿನ ನೀರಿನ ಸಮಸ್ಯೆ ಕುರಿತು ಪರಿಶೀಲಿಸಿ, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಡಾ.ದೇವರಾಜನಾಯ್ಕ ತಿಳಿಸಿದರು.

ಬಾಲು ಮಚ್ಚೇರಿ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT