ಶೇಕಡವಾರು ಮತ ಗಳಿಕೆಯಲ್ಲಿ ‘ಕೈ’ ಸಿಂಹಪಾಲು

7
ನಾಲ್ಕು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಕಮಲ ಪಾಳಯ; ಶೇ 11.51 ಮತ ಗಳಿಕೆ

ಶೇಕಡವಾರು ಮತ ಗಳಿಕೆಯಲ್ಲಿ ‘ಕೈ’ ಸಿಂಹಪಾಲು

Published:
Updated:

ಕೋಲಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿ ಪಾರುಪತ್ಯ ಮೆರೆದಿರುವ ‘ಕೈ’ ಪಾಳಯವು ಶೇಕಡವಾರು ಮತ ಗಳಿಕೆಯಲ್ಲೂ ಸಿಂಹಪಾಲು ಪಡೆದಿದೆ.

ಜಿಲ್ಲೆಯ ಆರು ಕ್ಷೇತ್ರಗಳಿಂದ 110 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಒಟ್ಟಾರೆ 9,86,930 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 748 ಮತಗಳು ತಿರಸ್ಕೃತವಾಗಿವೆ. 9,80,080 ಮತಗಳು ಮಾನ್ಯವಾಗಿವೆ. 6,103 ಮತದಾರರು ‘ನೋಟಾ’ (ಮೇಲ್ಕಂಡ ಯಾರೂ ಅಲ್ಲ) ಮತ ಚಲಾಯಿಸಿದ್ದರು.

ಒಟ್ಟಾರೆ ಶೇ 81.39 ಮತದಾನವಾಗಿದ್ದು, ಕಾಂಗ್ರೆಸ್‌ ಶೇ 43.29ರಷ್ಟು ಮತಗಳನ್ನು ಪಡೆದು ಮತ ಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಜಿಡಿಎಸ್‌ ಪಕ್ಷವು ಶೇ 35.64ರಷ್ಟು ಮತ ಗಳಿಸಿದೆ. ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆಯದೆ ಮೂರನೇ ಸ್ಥಾನಕ್ಕೆ ಕುಸಿದಿರುವ ಬಿಜೆಪಿಯ ಮತ ಗಳಿಕೆ ಪ್ರಮಾಣ ಕೇವಲ ಶೇ 11.51 ಇದೆ. ಇತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರ ಮತ ಗಳಿಕೆ ಪ್ರಮಾಣ ಶೇ 9.54ರಷ್ಟಿದ್ದು, ಹೆಚ್ಚು ಕಡಿಮೆ ಬಿಜೆಪಿಯ ಆಸುಪಾಸಿಗೆ ಬಂದಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿನ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಯ ಮತಗಳು ಸೇರಿದಂತೆ ಕೈ ಪಾಳಯವು ಒಟ್ಟಾರೆ ಆರು ಕ್ಷೇತ್ರಗಳಿಂದ 4,24,320 ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಜೆಡಿಎಸ್‌ ಪಕ್ಷವು 3,49,343 ಮತ್ತು ಬಿಜೆಪಿ 1,12,844 ಮತಗಳನ್ನು ಗಳಿಸಿದೆ. ಇತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು 93,573 ಮತಗಳನ್ನು ಗಳಿಸಿದ್ದಾರೆ.

ಮತಗಳೆಷ್ಟು?: ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್‌.ರಮೇಶ್‌ಕುಮಾರ್‌ ಜಿಲ್ಲೆಯಲ್ಲೇ ಅತಿ ಹೆಚ್ಚು 93,571 ಮತಗಳನ್ನು ಗಳಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ಮಾಲೂರಿನ ಕಾಂಗ್ರೆಸ್‌ ಅಭ್ಯರ್ಥಿ ಕೆ.ವೈ.ನಂಜೇಗೌಡ 75,677, ಮುಳಬಾಗಿಲಿನ ಎಚ್‌.ನಾಗೇಶ್‌ 74,213, ಬಂಗಾರಪೇಟೆಯ ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ 71,171, ಕೆಜಿಎಫ್‌ನ ಎಂ.ರೂಪಕಲಾ 71,151 ಮತ ಗಳಿಸಿ ಜಯಭೇರಿ ಸಾಧಿಸಿದ್ದಾರೆ. ಕೈ ಪಾಳಯದ ಅಭ್ಯರ್ಥಿಗಳ ಪೈಕಿ ತುಂಬಾ ಕಡಿಮೆ 38,537 ಮತ ಪಡೆದಿರುವ ಕೋಲಾರ ಕ್ಷೇತ್ರದ ಜಮೀರ್‌ ಪಾಷಾ ಪರಾಭವಗೊಂಡಿದ್ದಾರೆ.

ಏಕೈಕ ಅಭ್ಯರ್ಥಿ: ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ ಏಕೈಕ ಅಭ್ಯರ್ಥಿ ಕೆ.ಶ್ರೀನಿವಾಸಗೌಡರು ಕೋಲಾರ ಕ್ಷೇತ್ರದಲ್ಲಿ 82,788 ಮತ ಗಳಿಸಿದ್ದಾರೆ.

ಉಳಿದಂತೆ ಶ್ರೀನಿವಾಸಪುರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ 83,019, ಬಂಗಾರಪೇಟೆಯ ಎಂ.ಮಲ್ಲೇಶ್‌ಬಾಬು 49,300, ಮಾಲೂರಿನ ಕೆ.ಎಸ್‌.ಮಂಜುನಾಥ್‌ಗೌಡ 57,762 ಹಾಗೂ ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿ ಸಮೃದ್ಧಿ ಮಂಜುನಾಥ್‌ 67,498 ಮತ ಗಳಿಸಿದ್ದಾರೆ. ಕೆಜಿಎಫ್‌ ಅಭ್ಯರ್ಥಿ ಎಂ.ಭಕ್ತವತ್ಸಲಂ 8,976 ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಠೇವಣಿ ನಷ್ಟ

ಹೀನಾಯವಾಗಿ ಸೋತಿರುವ ಕಮಲ ಪಾಳಯದ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಶ್ರೀನಿವಾಸಪುರದಲ್ಲಿ ಡಾ.ವೇಣುಗೋಪಾಲ್‌ 4,208, ಕೋಲಾರದಲ್ಲಿ ಓಂಶಕ್ತಿ ಚಲಪತಿ 12,458, ಮಾಲೂರಿನಲ್ಲಿ ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ 23,889 ಹಾಗೂ ಮುಳಬಾಗಿಲು ಕ್ಷೇತ್ರದಲ್ಲಿ ಮಾಜಿ ಶಾಸಕ ಅಮರೇಶ್‌ 8,411 ಮತ ಪಡೆದಿದ್ದು, ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಕನಿಷ್ಠ ಠೇವಣಿ ಉಳಿಸಿಕೊಳ್ಳಲೂ ಆಗಿಲ್ಲ.

ಕೆಜಿಎಫ್‌ನಲ್ಲಿ ಎಸ್‌.ಅಶ್ವಿನಿ 30,324, ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ 33,554 ಮತ ಗಳಿಸಿ, ಠೇವಣಿ ಉಳಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry