ಮತದಾರರಿಗೆ ಅಭಿವೃದ್ಧಿ ಇಷ್ಟವಾಗಿಲ್ಲ: ತಂಗಡಗಿ

7
‘ನೊಂದ ಕಾರ್ಯಕರ್ತರಿಗೆ ಧೈರ್ಯ ಹೇಳುತ್ತೇನೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸುತ್ತೇನೆ’

ಮತದಾರರಿಗೆ ಅಭಿವೃದ್ಧಿ ಇಷ್ಟವಾಗಿಲ್ಲ: ತಂಗಡಗಿ

Published:
Updated:

ಕಾರಟಗಿ: ‘ಕನಕಗಿರಿ ವಿಧಾನಸಭಾ ಕ್ಷೇತ್ರದ ಜನರು ನೀಡಿದ ತೀರ್ಪಿಗೆ ಬದ್ಧ. ನಮ್ಮ ಕಾರ್ಯಕರ್ತರ ಶ್ರಮಕ್ಕೆ, 10 ವರ್ಷದವರೆಗೆ ಜನರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವೆ. ನಮ್ಮ ಕಾರ್ಯಕರ್ತರು ಧೈರ್ಯಗೆಡದೇ ಇರಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳು ಹ್ಯಾಟ್ರಿಕ್ ಗೆಲುವಿಗೆ ಸಹಕಾರಿಯಾಗಬೇಕಿತ್ತು. ಜನರು ಅಭಿವೃದ್ಧಿಯನ್ನು ಇಷ್ಟಪಟ್ಟಿಲ್ಲ ಎಂಬುದು ಫಲಿತಾಂಶ ನೋಡಿದಾಗ ಗೋಚರಿಸಿತು. ಮತಗಳ ಅಂತರ ನೋಡಿದರೆ ಇವಿಎಂ ಮತಯಂತ್ರ ಮತ್ತು ವಿವಿ ಪ್ಯಾಟ್‌ನ ದೋಷದ ಬಗ್ಗೆ ಸಂಶಯ ಮೂಡುತ್ತಿದೆ. ಕೆಲ ಮತಗಟ್ಟೆಗಳಲ್ಲಿ ಹೆಚ್ಚು ಮತಗಳು ಬರಬೇಕಾದಲ್ಲಿ ಸಾಕಷ್ಟು ಕಡಿಮೆ ಮತಗಳು ಬಂದಿರುವುದು ಸಂಶಯವನ್ನು ಇಮ್ಮಡಿಗೊಳಿಸಿದೆ’ ಎಂದರು.

‘ಮತ ಎಣಿಕೆ ಸಂದರ್ಭದಲ್ಲಿ ವಿವಿ ಪ್ಯಾಟ್‌ನಿಂದ ಬಂದಿರುವ ಚೀಟಿಗಳನ್ನು ತೋರಿಸಿ ಏಣಿಕೆ ಆರಂಭಿಸಬೇಕಾದ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದವರು ತಿಳಿಸಿದರು.

‘ಸೋಲಿನಿಂದಾಗಿ ಕಾರ್ಯಕರ್ತರು ಕಣ್ಣೀರಿಡುತ್ತಿದ್ದಾರೆ. ಅವರಿಗೆ ಧೈರ್ಯ ತುಂಬಿರುವೆ. ಮುಂದೆಯೂ ಕಾರ್ಯಕರ್ತರ ಹಿತ ಕಾಪಾಡುವ ಜೊತೆಗೆ ಅಭಿವೃದ್ಧಿಗೆ ಸಹಕಾರ ನೀಡುವೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೇ ಬಸವರಾಜ ದಡೇಸೂಗೂರು ಹೆಜ್ಜೆ ಇಡಲಿ’ ಎಂದು ಅವರು ಸಲಹೆ ನೀಡಿದರು.

ರಾಜ್ಯ ರಾಜಕೀಯದ ಬಗೆಗಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ತಂಗಡಗಿ, ‘ಪಕ್ಷದ ಹೈಕಮಾಂಡ ಸೂಕ್ತ ನಿರ್ಧಾರ ಕೈಗೊಳ್ಳುವುದು’ ಎಂದಷ್ಟೇ ಹೇಳಿದರು.

ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ವಿಶೇಷ ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಉದ್ಯಮಿ ಎನ್‌.ಮನ್ನೆಕೃಷ್ಣ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry