ಶುಕ್ರವಾರ, ಫೆಬ್ರವರಿ 26, 2021
31 °C
ಕಮಲಕ್ಕೆ ಸಿಗುವುದೇ ಬಹುಮತ? ‘ಕೈ’ ಮೇಲಾಗುವುದೇ?

ಲಿಂಗಾಯತ ಶಾಸಕರ ಮೇಲೆ ಬಿಜೆಪಿ ಕಣ್ಣು; ಕಾಂಗ್ರೆಸ್‌ನ 8 ಶಾಸಕರನ್ನು ಸೆಳೆಯಲು ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಾಯತ ಶಾಸಕರ ಮೇಲೆ ಬಿಜೆಪಿ ಕಣ್ಣು; ಕಾಂಗ್ರೆಸ್‌ನ 8 ಶಾಸಕರನ್ನು ಸೆಳೆಯಲು ತಂತ್ರ

ಬೆಂಗಳೂರು: ಅತಂತ್ರ ವಿಧಾನಸಭೆ ರಚನೆಯಾಗಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಮಧ್ಯೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ, ಸದನದಲ್ಲಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾ ಬಲ ಹೊಂದಿಸುವಲ್ಲಿ ಸಫಲರಾಗುತ್ತಾರೆಯೇ? ಅವರ ‘ಕೈ’ ಮೇಲಾಗುವುದೇ?

ಈ ಪ್ರಶ್ನೆ ಕಾಂಗ್ರೆಸ್‌– ಜೆಡಿಎಸ್‌ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ‘ಆಮಿಷ’ ಸಿಕ್ಕಿಸಿದ ಗಾಳಕ್ಕೆ ಶಾಸಕರು ಸಿಕ್ಕಿಹಾಕಿಕೊಳ್ಳಬಹುದೆಂಬ ಆತಂಕ ಈ ಎರಡೂ ಪಕ್ಷಗಳಲ್ಲಿ ದಟ್ಟವಾಗಿದೆ. ಅದಕ್ಕೆ ಪೂರಕವಾಗಿ ನಡೆದ ಕೆಲವು ಬೆಳವಣಿಗೆಗಳು ಈ ಪಕ್ಷಗಳ ನಾಯಕರನ್ನು ತೀವ್ರ ಚಿಂತೆಗೀಡು ಮಾಡಿವೆ.

ಫಲಿತಾಂಶ ಪ್ರಕಟವಾದ ಕ್ಷಣದಿಂದ ’ಕೈ’ಗೆ ಸಿಗದೆ ಓಡಾಡುತ್ತಿರುವ ವಿಜಯನಗರ (ಹೊಸಪೇಟೆ) ಶಾಸಕ ಆನಂದ್‌ ಸಿಂಗ್‌, ಈಗಾಗಲೇ ಬಿಜೆಪಿ ಬೀಸಿದ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಸುದ್ದಿ ಬಲವಾಗಿದೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿದ ಆನಂದ್‌ ಸಿಂಗ್‌ ಆರಿಸಿ ಬಂದಿದ್ದರೂ, ರೆಡ್ಡಿ ಸಹೋದರರ ಜೊತೆಗಿನ ನಂಟು ಕಳೆದುಕೊಂಡಿಲ್ಲ. ರೆಡ್ಡಿ ಸಹೋದರರು ಸಿಂಗ್‌ ಅವರನ್ನು ಮತ್ತೆ ಬಿಜೆಪಿಯತ್ತ ಕರೆದುಕೊಂಡು ಬರಲು ಈಗಾಗಲೇ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಕಾಂಗ್ರೆಸ್‌– ಜೆಡಿಎಸ್‌ ಪಕ್ಷಗಳಲ್ಲಿ ಚುನಾಯಿತರಾದ ಕೆಲವು ಲಿಂಗಾಯತ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಆ ಪೈಕಿ, ಕೆಲವರು ಈಗಾಗಲೇ ಬಿಜೆಪಿ ತೆಕ್ಕೆಗೆ ಬರುವ ಬಗ್ಗೆಯೂ ಸೂಚನೆ ಲಭ್ಯವಾಗಿದೆ. ರಾಜಶೇಖರ ಬಿ ಪಾಟೀಲ (ಹುಮನಾಬಾದ್), ಪ್ರತಾಪಗೌಡ ಪಾಟೀಲ (ಮಸ್ಕಿ), ವೆಂಕಟರಾವ್‌ ನಾಡಗೌಡ (ಸಿಂಧನೂರ), ಬಿ.ನಾರಾಯಣರಾವ್‌ (ಬಸವಕಲ್ಯಾಣ), ಮಹಾಂತೇಶ ಕೌಜಲಗಿ (ಬೈಲಹೊಂಗಲ), ಅಮರೇಗೌಡ ಬಯ್ಯಾಪುರ (ಕುಷ್ಟಗಿ), ಡಿ.ಎಸ್‌.ಹೂಲಗೇರಿ (ಲಿಂಗಸುಗೂರ) ಅವರನ್ನು ಗುರಿ ಮಾಡಿ ಬಿಜೆಪಿ ಬಲೆ ಬೀಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ, ಸದ್ಯ ಕಾಂಗ್ರೆಸ್‌ ಜೊತೆ ಇರುವ ಇಬ್ಬರು ಪಕ್ಷೇತರರೂ (ಎಚ್‌.ನಾಗೇಶ್‌– ಮುಳಬಾಗಿಲು, ಆರ್.ಶಂಕರ್‌– ರಾಣೆಬೆನ್ನೂರು) ಬಿಜೆಪಿ ಕಡೆಗೆ ವಾಲುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

15 ದಿನಗಳ ಒಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನಿರ್ದೇಶನ ನೀಡಿರುವುದರಿಂದ ಸಂಖ್ಯಾ ಬಲ ಹೊಂದಿಸಿಕೊಳ್ಳುವ ಬಗ್ಗೆ ಬಿಜೆಪಿಯಲ್ಲಿ ಗೌಪ್ಯ ಸಭೆ ನಡೆದಿದೆ. ಪಕ್ಷದ ರಾಷ್ಟ್ರೀಯ ನಾಯಕರಾದ  ಜೆ.ಪಿ.ನಡ್ಡ, ಧರ್ಮೇಂದ್ರಪ್ರಧಾನ್, ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ಸದಾನಂದಗೌಡ, ಪಕ್ಷದ ಉಸ್ತುವಾರಿ ಮುರಳೀಧರರಾವ್ ಮತ್ತಿತರರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸರಳ ಬಹುಮತಕ್ಕೆ ಎಂಟು ಶಾಸಕರ ಅಗತ್ಯವಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಉದ್ದೇಶಿಸಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದೇ, ಇಲ್ಲವೇ ವಿಶ್ವಾಸ ಮತ ದಿನ ಕೆಲವು ಸದಸ್ಯರನ್ನು ಸದನಕ್ಕೆ ಬಾರದಂತೆ ಗೈರು ಹಾಜರು ಮಾಡಬೇಕೆ ಮತ್ತಿತರ ಸಾಧ್ಯಾಸಾಧ್ಯತೆಗಳ ಕುರಿತು ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ.

ಸಂಪರ್ಕದಲ್ಲಿರುವ ಶಾಸಕರನ್ನು ಗೌಪ್ಯವಾಗಿ ಸೆಳೆದುಕೊಂಡು ಹೊರ ರಾಜ್ಯದ ರೆಸಾರ್ಟ್‍ನಲ್ಲಿ ಇಡುವುದೇ, ಎಂಬ ಬಗ್ಗೆಯೂ ಮುಖಂಡರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತೆರೆಮರೆಯಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖರೊಬ್ಬರು ತಮ್ಮ ಜತೆ ಸುಮಾರು 10ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಬಹಿರಂಗಪಡಿಸದೆ ಬಹುಮತ ಸಾಬೀತುಪಡಿಸಬೇಕಾದ ದಿನಸದನಕ್ಕೆ ಕರೆತರಬೇಕೆ, ಇಲ್ವೆ ಅದಕ್ಕೂ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆ ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ.

ಶಾಸಕರನ್ನು ಸೆಳೆಯುವ ವಿಚಾರದಲ್ಲಿ ಬಹಿರಂಗವಾಗಿ ಹೇಳಿಕೆ ನೀಡದಂತೆ ಕಾರ್ಯಾಚರಣೆಗಿಳಿದಿರುವ ಬಿಜೆಪಿ ಪ್ರಮುಖರೊಬ್ಬರು ತಿಳಿಸಿದ್ದಾರೆ. ಎರಡೂ ಪಕ್ಷಗಳಿಂದ ಎಷ್ಟು ಶಾಸಕರು ಬರಲು ಸಾಧ್ಯವಿದೆಯೋ ಅಷ್ಟೂ ಮಂದಿಯನ್ನು ಕರೆತಂದು ಸರ್ಕಾರ ಉಳಿಸಿಕೊಳ್ಳಬೇಕು. ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳದೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕು. ಜವಾಬ್ದಾರಿ ವಹಿಸಿರುವವರು ಮಾತ್ರ ಕಾರ್ಯಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಹಿರಿಯ ಮುಖಂಡರು ಸಲಹೆ ಮಾಡಿದ್ದಾರೆ ಎಂದೂ ಹೇಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.