ಸೋಮವಾರ, ಮಾರ್ಚ್ 1, 2021
23 °C
ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದರೆ ಮತದಾರರಿಗೆ ದ್ರೋಹ; ಸ್ಥಳೀಯರ ಅಭಿಪ್ರಾಯ

‘ಶಾಸಕ ಆನಂದ್ ಸಿಂಗ್‌ರನ್ನು ಹುಡುಕಿಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶಾಸಕ ಆನಂದ್ ಸಿಂಗ್‌ರನ್ನು ಹುಡುಕಿಕೊಡಿ’

ಹೊಸಪೇಟೆ: ಚುನಾವಣೆ ಫಲಿತಾಂಶ ಬಂದ ದಿನದ ರಾತ್ರಿಯಿಂದ ನಾಪತ್ತೆಯಾಗಿರುವ ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರು ಇದುವರೆಗೆ ಪತ್ತೆಯಾಗಿಲ್ಲ.

ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಮಾಹಿತಿ ಯಾರಿಗೂ ಇಲ್ಲ. ಇದರಿಂದಾಗಿ ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶಿವಯೋಗಿ ಅವರು ಶುಕ್ರವಾರ ಇಲ್ಲಿನ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಆನಂದ್‌ ಸಿಂಗ್‌ ಅವರು ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್‌ನ ರಾಜ್ಯಮಟ್ಟದ ನಾಯಕರಿಗಾಗಲಿ, ಜಿಲ್ಲಾಮಟ್ಟದ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಬಿಜೆಪಿಗೆ ಬಹುಮತದ ಕೊರತೆಯಾಗಿದ್ದು, ಆ ಪಕ್ಷದವರು ಅಪಹರಿಸಿರುವ ಶಂಕೆ ಇದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಹಿತದೃಷ್ಟಿಯಿಂದ ಅವರನ್ನು ಪತ್ತೆ ಹಚ್ಚಿ ಕೊಡಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕ್ಷೇತ್ರದಾದ್ಯಂತ ಇದೀಗ ಆನಂದ್‌ ಸಿಂಗ್‌ ಅವರ ಕುರಿತಾಗಿಯೇ ಗುಸು ಗುಸು ಚರ್ಚೆ ನಡೆಯುತ್ತಿದೆ. ಆನಂದ್‌ ಸಿಂಗ್‌ ಬಿಜೆಪಿ ಸೇರಲಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಕಾಂಗ್ರೆಸ್‌ನಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಕೆಲ ಸ್ಥಳೀಯರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಅವರು ಹೇಳಿದಿಷ್ಟು.

‘ಆನಂದ್‌ ಸಿಂಗ್‌ ಅವರು ಬಹಳ ಅಳೆದು, ತೂಗಿ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸಿ, ನಂತರ ಬಿಜೆಪಿ ತೊರೆದಿದ್ದರಿಂದ ಅವರ ವಿರುದ್ಧ ಕ್ಷೇತ್ರದಾದ್ಯಂತ ಸಾಕಷ್ಟು ಅಪಪ್ರಚಾರ ಮಾಡಲಾಗಿತ್ತು. ಅದರ ನಡುವೆಯೂ ಭಾರಿ ಮತಗಳಿಂದ ಗೆದ್ದಿದ್ದಾರೆ. ಹಾಗಾಗಿ ಅವರು ಬಿಜೆಪಿ ಸೇರುತ್ತಾರೆ ಎಂದು ನನಗನಿಸುವುದಿಲ್ಲ’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ ತಿಳಿಸಿದರು.

‘ಒಂದುವೇಳೆ ಯಾವುದೋ ಸ್ವಾರ್ಥಕ್ಕೆ ಆನಂದ್‌ ಸಿಂಗ್‌ ಬಿಜೆಪಿ ಸೇರಿದರೆ ಜನರ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಬಹಳ ವಿವೇಚನೆಯಿಂದ ನಡೆದುಕೊಳ್ಳಬೇಕು’ ಎಂದರು.

‘ಮೋದಿ ಸರ್ಕಾರದ ಕಿರುಕುಳಕ್ಕೆ ಹೆದರಿ ಆನಂದ್‌ ಸಿಂಗ್‌ ಎಲ್ಲಿಗಾದರೂ ಹೋಗಿರಬಹುದು. ಒಂದುವೇಳೆ ಅವರು ಬಿಜೆಪಿಗೆ ಹೋದರೆ ಕ್ಷೇತ್ರದ ಜನ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರು. ಒಂದು ಸಂಘಟನೆಯ ಸಂಚಾಲಕನಾಗಿ ಈ ವಿಷಯವನ್ನು ಅವರ ಕುಟುಂಬ ವರ್ಗದವರಿಗೆ ನೇರವಾಗಿ ಹೇಳಿದ್ದೇನೆ’ ಎಂದು ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಸಂಘಟನೆಯ ಹೈದರಾಬಾದ್‌ ಕರ್ನಾಟಕ ಸಂಚಾಲಕ ಕರಿಯಪ್ಪ ಗುಡಿಮನಿ ತಿಳಿಸಿದರು.

‘ಆನಂದ್‌ ಸಿಂಗ್‌ ಅವರು ಎರಡು ಸಲ ಬಿಜೆಪಿಯಿಂದ ಗೆದ್ದಿದ್ದಾರೆ. ಈ ಸಲ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಆದರೆ, ಅವರ ಗೆಲುವಿನ ಅಂತರ ಬಹಳ ಕಡಿಮೆ ಇದೆ. ಬಿಜೆಪಿಗೆ ಸೇರಿದರೆ ಅವರಿಗೆ ಮಂತ್ರಿ ಸ್ಥಾನ ಸಿಗಬಹುದು. ವಿಜಯನಗರವನ್ನು ಜಿಲ್ಲಾ ಕೇಂದ್ರ ಮಾಡಬಹುದು. ಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ’ ಎಂದು ಅಮರಾವತಿಯ ರಾಜು ಹೇಳಿದರು.

**

ಕೆ.ಪಿ.ಸಿ.ಸಿ. ಅಧ್ಯಕ್ಷರು, ನಾನು ಅನೇಕ ಸಲ ಆನಂದ್‌ ಸಿಂಗ್‌ ಸಂಪರ್ಕಕ್ಕೆ ಪ್ರಯತ್ನಿಸಿದರೂ ಸಿಕ್ಕಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು.–ಬಿ.ವಿ. ಶಿವಯೋಗಿ, ಅಧ್ಯಕ್ಷ, ಬಳ್ಳಾರಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌

**

ಕೆ.ಪಿ.ಸಿ.ಸಿ. ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಡಿ.ಕೆ. ಶಿವಕುಮಾರ ಅವರ ಸಂಪರ್ಕದಲ್ಲಿ ಆನಂದ್‌ ಸಿಂಗ್‌ ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾಳೆ ವಿಧಾನಸೌಧಕ್ಕೆ ಬರಬಹುದು.–ಮೊಹಮ್ಮದ್‌ ಇಮಾಮ್‌ ನಿಯಾಜಿ, ಅಧ್ಯಕ್ಷ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

**

ಒಂದುವೇಳೆ ಆನಂದ್‌ ಸಿಂಗ್‌ ಅವರು ಬಿಜೆಪಿಗೆ ಸೇರಿದರೆ ಜನರಿಗೆ ದ್ರೋಹ ಎಸಗಿದಂತಾಗುತ್ತದೆ. ಬರುವ ಚುನಾವಣೆಯಲ್ಲಿ ಖಂಡಿತವಾಗಿಯೂ ಜನ ಅವರನ್ನು ಸೋಲಿಸುತ್ತಾರೆ.–ದುರುಗಪ್ಪ ಪೂಜಾರ, ಸಂಚಾಲಕ, ಪ್ರಗತಿಪರ ಸಂಘಟನೆಗಳ ಒಕ್ಕೂಟ

**

ಆನಂದ್‌ ಸಿಂಗ್‌ ಕಾಂಗ್ರೆಸ್‌ ತೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಐ.ಟಿ., ಇ.ಡಿ.ಗೆ ಹೆದರಿ ಎಲ್ಲೋ ಸೂಕ್ತ ಸ್ಥಳದಲ್ಲಿ ರಕ್ಷಣೆ ಪಡೆದಿರಬಹುದು.–ಕರಿಯಪ್ಪ ಗುಡಿಮನಿ, ಸಂಚಾಲಕ, ಸಂವಿಧಾನ ಉಳಿವಿಗಾಗಿ ಕರ್ನಾಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.