ಸೋಮವಾರ, ಮಾರ್ಚ್ 8, 2021
19 °C

ಸರ್ಕಾರದ ಉಳಿವಿಗೆ ದಿನವಿಡೀ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರದ ಉಳಿವಿಗೆ ದಿನವಿಡೀ ಹೋರಾಟ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶುಕ್ರವಾರ ಅಷ್ಟೇನೂ ಸಂತಸದ ದಿನವಾಗಿರಲಿಲ್ಲ. ಎದೆ ಬಡಿತ ಹೆಚ್ಚಿಸಿದ ದಿನವಾಗಿ ಪರಿಣಮಿಸಿತ್ತು. ಗುರುವಾರ ಅವರ ಮುಖದಲ್ಲಿ ಕಂಡುಬಂದ ನಗೆ, ಶುಕ್ರವಾರ ಬೆಳಿಗ್ಗೆ ವೇಳೆಗೆ ಮಾಯವಾಗಿತ್ತು.

ಶನಿವಾರವೇ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದು ಅವರ ದುಗುಡಕ್ಕೆ ಕಾರಣವಾಗಿತ್ತು. ತಮ್ಮ ನೇತೃತ್ವದ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಅವರು ಏಕಾಂಗಿಯಾಗಿ ಓಡಾಟ ನಡೆಸಿ ಸರಣಿ ಸಭೆಗಳನ್ನು ಮಾಡಿದರು.

ನಾಳೆ ಏನಾಗುವುದೋ ಎಂಬ ಆತಂಕ ಅವರನ್ನು ಕಾಡಿದಂತಿತ್ತು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಗುರುವಾರ ಬೆಳಗ್ಗಿನ ಜಾವದವರೆಗೆ ವಿಚಾರಣೆ ನಡೆಸಿದ್ದರು. ಅದರ ಮಾಹಿತಿ ಆಧರಿಸಿ, ಕಾನೂನಿನ ಪ್ರಕಾರ ಯಾವ ಹೆಜ್ಜೆಗಳನ್ನು ಇಡಬೇಕು ಎಂಬ ಕುರಿತು ಶುಕ್ರವಾರ ಮುಂಜಾನೆ ಬಹಳ ಹೊತ್ತಿನವರೆಗೆ ಹಿರಿಯ ನಾಯಕರು ಮತ್ತು ಕಾನೂನು ಪರಿಣತರ ಜತೆ ಚರ್ಚೆ ನಡೆಸಿದರು.

ಬಳಿಕ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ನಡೆದ ಎರಡು– ಮೂರು ಸುತ್ತುಗಳ ಗೋಪ್ಯ ಸಭೆಗಳಲ್ಲಿ ಯಡಿಯೂರಪ್ಪ ಅವರ ಜತೆ ಪಕ್ಷದ ಮುಖಂಡರಾದ ಅನಂತ ಕುಮಾರ್‌, ಪ್ರಕಾಶ್‌ ಜಾವಡೇಕರ್‌, ಮುರಳೀಧರ ರಾವ್‌, ಶ್ರೀರಾಮುಲು ಇದ್ದರು.

ಬೆಳಿಗ್ಗೆ 8.30ಕ್ಕೆ ಮುಖ್ಯ ಕಾರ್ಯದರ್ಶಿ ಸಿ.ಎಸ್‌.ರತ್ನಪ್ರಭಾ ಮತ್ತು ಡಿಜಿಪಿ ನೀಲಮಣಿರಾಜು ಅವರನ್ನು ತಮ್ಮ ನಿವಾಸ ಧವಳಗಿರಿಗೆ ಕರೆಸಿಕೊಂಡರು. ಆಡಳಿತಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಮುಖ್ಯವಾಗಿ ರೈತರು– ನೇಕಾರರ ಸಾಲ ಮನ್ನಾ ಮತ್ತು ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ ಆದೇಶದ ಕಾರಣ, ತುರ್ತು ಸಂಪುಟ ಸಭೆ ನಡೆಸಿ ವಿಧಾನಸಭಾ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಸೆಳೆಯಲು ಅವರು ಲಿಂಗಾಯತ– ವೀರಶೈವ ಮತ್ತು ಇತರ ಮಠಗಳ ಕೆಲವು ಸ್ವಾಮೀಜಿಗಳಲ್ಲಿ ಮನವಿ ಮಾಡಿದರೆಂದೂ ಮೂಲಗಳು ಹೇಳಿವೆ.

ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ರಾತ್ರಿ ಪಕ್ಷದ ಶಾಸಕರ ಸಭೆ ನಡೆಸಿ, ಬಹುಮತ ಯಾಚನೆ ಯಶಸ್ವಿಯಾಗಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈ– ಎಚ್‌ಡಿಕೆ ಮುಖಾಮುಖಿ: ತಾಜ್‌ ವೆಸ್ಟ್‌ಎಂಡ್‌ನಲ್ಲಿ ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಬೆಳಿಗ್ಗೆ ಮುಖಾಮುಖಿಯಾದರೂ ಪರಸ್ಪರ ನೋಡದಂತೆ ತಮ್ಮ ದಾರಿ ಹಿಡಿದರು. ಯಡಿಯೂರಪ್ಪ ಪಕ್ಷದ ನಾಯಕರ ಜೊತೆ ಚರ್ಚಿಸಲು ಬಂದಿದ್ದರು.

ಅದೇ ಸಮಯದಲ್ಲಿ, ತಮ್ಮ ಪಕ್ಷದ ಶಾಸಕರೊಬ್ಬರ ಜತೆ ಚರ್ಚೆ ನಡೆಸಲು ಕುಮಾರಸ್ವಾಮಿ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಮುಖಾಮುಖಿಯಾದರೂ ಮಾತನಾಡಲಿಲ್ಲ ಎಂದು ಹೋಟೆಲ್‌ ಮೂಲಗಳು ತಿಳಿಸಿವೆ.

ಆಗ ಇಲ್ಲದ ವಿರೋಧ ಈಗೇಕೆ?’

ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ರಾಜ್ಯಪಾಲ ರಾಮೇಶ್ವರ ಠಾಕೂರ್‌ 2008ರಲ್ಲಿ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಿದಾಗ ವಿರೋಧ ವ್ಯಕ್ತವಾಗಿರಲಿಲ್ಲ. ಆಗ ಇಲ್ಲದ ವಿರೋಧ ಈಗೇಕೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಬೋಪಯ್ಯ ನೇಮಕವನ್ನು ಕಾಂಗ್ರೆಸ್‌ ವಿರೋಧಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಅವರಿಗೆ ಸದನವನ್ನು ಎದುರಿಸುವ ಧೈರ್ಯ ಇಲ್ಲ. ಹತಾಶೆಯಿಂದ ಈ ರೀತಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ವಕೀಲರಾಗಿರುವ ಬೋಪಯ್ಯ ಕಾನೂನನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರಲ್ಲಿ ವಿದ್ವತ್ತಿದೆ. ಸಂಸದೀಯ ನಡಾವಳಿಗಳು ಹಾಗೂ ಸದನದಲ್ಲಿ ಕಲಾಪ ನಡೆಸುವ ಬಗ್ಗೆಯೂ ಅನುಭವ ಇದೆ. ಕಾಂಗ್ರೆಸ್‌ ಮುಖಂಡರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿಯು ದೇಶದ 22 ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿದಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಒಂದೊಂದೇ ರಾಜ್ಯಗಳಲ್ಲಿ ಸೋಲುತ್ತಾ ಬಂದಿದೆ. ಹಿಟ್ಲರ್‌, ಗಡಾಫಿ ಅವರಂತೆ ಸರ್ವಾಧಿಕಾರಿಗಳಾಗಿ, ದುರಹಂಕಾರದಿಂದ ಮೆರೆದ ಕಾಂಗ್ರೆಸ್‌ ನಾಯಕರಿಗೆ ಜನ ಸರಿಯಾದ ದಾರಿ ತೋರಿಸಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.