ಮಂಗಳವಾರ, ಮಾರ್ಚ್ 2, 2021
27 °C
ಗರಿಗೆದರಿದ ಕೃಷಿ ಚಟುವಟಿಕೆ: 64,530 ಹೆಕ್ಟೆರ್ ಬಿತ್ತನೆ ಗುರಿ

ಮುಂಗಾರು ಬಿತ್ತನೆಗೆ ರೈತರ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಗಾರು ಬಿತ್ತನೆಗೆ ರೈತರ ಸಿದ್ಧತೆ

ಸೇಡಂ: ತಾಲ್ಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವ ಜೊತೆಗೆ ಕೃಷಿ ಪರಿಕರಗಳ ತಯಾರಿಯಲ್ಲಿ ನಿರತರಾಗಿದ್ದಾರೆ.

ಈ ತಿಂಗಳಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದ್ದು, ಭೂಮಿ ಉಳುಮೆಗೆ ಹದ ಬಂದಿದೆ. ರೈತರು ಬಿತ್ತನೆಗೆ ಬೇಕಾದ ಕುಂಟೆ, ಪಲಗಾ, ಕೂರಿಗೆ, ನೊಗ, ಬುಕ್ಕಾ ಸಿದ್ಧತೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮದಲ್ಲಿರುವ ಬಡಿಗೇರ ಬಳಿ ತೆರಳಿ ಪರಿಕರ ದುರಸ್ತಿ ಮಾಡಿಸುತ್ತಿದ್ದಾರೆ. ಕೂರಿಗೆಗೆ ಹೊಂಬಲು, ಪಲಗಾಗಳನ್ನು ಕಮ್ಮಾರರ ಬಳಿ ತೆರಳಿ ಮೊನಚು ಮಾಡಿಸುತ್ತಿದ್ದಾರೆ. ಎರಡು ವಾರದಲ್ಲಿ ಉತ್ತಮ ಮಳೆಯಾದರೆ ಬಿತ್ತನೆ ಮಾಡಲಿದ್ದಾರೆ.

‘ಈ ತಿಂಗಳು ಮಳೆ ಬಂದಾಗ ಗಳೆ (ಕುಂಟೆ) ಹೊಡೆದರೆ ಹೊಲ ಸಮತಟ್ಟಾಗಿ, ಭೂಮಿಯ ಆಳದಲ್ಲಿ ಬೀಜ ಬೀಳುತ್ತವೆ. ಅಲ್ಲದೆ ಜೇಕು, ಕಾಂಗ್ರೆಸ್ ಸೇರಿದಂತೆ ಕಳೆ ನಾಶವಾಗುತ್ತದೆ. ಬೆಳೆಯ ಜೊತೆಗೆ ಅದು ಬೆಳೆಯುವುದಿಲ್ಲ’ ಎಂದು ರೈತ ಶರಣಯ್ಯಸ್ವಾಮಿ ಬಟಗೇರಾ ಹೇಳುತ್ತಾರೆ.

‘ತಾಲ್ಲೂಕಿನಾದ್ಯಂತ ಸುಮಾರು 64,530 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, 86,451 ಟನ್ ಉತ್ಪಾದನೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ ಸುಮಾರು 1,785 ಹೆಕ್ಟರ್, ಬೆಳೆ ಕಾಳುಗಳಾದ ತೊಗರಿ, ಹುರಳಿ, ಉದ್ದು, ಹೆಸರು, ಅಲಸಂದಿ, ಅವರೆ, ಮುತ್ತಗಿ ಒಳಗೊಂಡಂತೆ 49,625 ಹೆಕ್ಟರ್, ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಗುರೆಳ್ಳು, ಸೋಯಾಬಿನ್ 1870 ಹೆಕ್ಟರ್ ಹಾಗೂ ವಾಣಿಜ್ಯ ಬೆಳೆ ಹತ್ತಿ ಮತ್ತು ಕಬ್ಬು 400 ಹೆಕ್ಟರ್ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆಯ ಸಿದ್ಧಪಡಿಸಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೈ. ಹಂಪಣ್ಣ ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತೆ ಕೆಲ ರೈತರು ಮಾತ್ರ ನೀರಾವರಿ ಬೇಸಾಯವನ್ನು ಅವಲಂಬಿಸಿದ್ದಾರೆ. ಒಣಬೇಸಾಯವನ್ನೇ ಹೆಚ್ಚು ರೈತರು ಹೊಂದಿದ್ದು, ಮಳೆಯಾಶ್ರಿತ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ತಾಲ್ಲೂಕಿನ ಮುಧೋಳ, ಬಟಗೇರಾ, ಮದನಾ, ಕಾನಗಡ್ಡಾ, ಕೋಲ್ಕುಂದಾ ಸೇರಿದಂತೆ ವಿವಿಧ ತಾಂಡಾಗಳ ರೈತರು ನೀರಾವರಿ ಬೆಳೆಗಳನ್ನು ಬೆಳೆಯುತ್ತಾರೆ.

**

ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಬಿತ್ತನೆಗೆ ಅನುಕೂಲವಾಗಲಿದೆ

- ವೈ.ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ

ಅವಿನಾಶ ಎಸ್. ಬೋರಂಚಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.