ಅಧಿಕಾರ ಕಳೆದುಕೊಂಡ ಬಿಎಸ್‌ವೈ: ಕಣ್ಣೀರಿಟ್ಟ ಸಂಸದ ಪ್ರತಾಪ್ ಸಿಂಹ

ಬೆಂಗಳೂರು: 2014ರಲ್ಲಿ ನಾನು ತುಂಬಾ ಖುಷಿಯಾಗಿದ್ದೆ, ಈಗ ತುಂಬಾ ದುಃಖದಿಂದ ಕಣ್ಣೀರು ತಡ್ಕೊಳ್ಳಕ್ಕಾಗುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರು ಸುರಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಗದ್ಗದಿತರಾಗಿ ಮಾತನಾಡಿದ ಪ್ರತಾಪ್, 1995-96ರಲ್ಲಿ ವಾಜಪೇಯಿ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆಯಬೇಕಾಗಿ ಬಂದಾಗ ನಾನು ಅತ್ತಿದ್ದೆ. ಇದೀಗ 22 ವರ್ಷಗಳ ನಂತರ ಹಾಗನಿಸುತ್ತಿದೆ. ಅಧಿಕಾರ ಹೋಯ್ತು ಅಂತ ಬೇಸರ ಆಗ್ತಿಲ್ಲ. ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಅವರನ್ನು ಹತ್ತಿರದಿಂದ ನೋಡುವ ಅವರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿದೆ. ಎಲ್ಲರೂ ಅವರನ್ನು ಕೋಪಿಷ್ಠ ಅಂತ ಭಾವಿಸುತ್ತಾರೆ. ಅವರ ಕೋಪದ ಹಿಂದೆ ಸಾತ್ವಿಕ ಕಾರಣಗಳಿವೆ. ನಾನು ಹಲವಾರು ಪೊಲಿಟಿಷನ್ ಜತೆ ಮಾತನಾಡಿದ್ದೀನಿ. ಕೆಲವರ ಜತೆ ಪಾರ್ಟಿ ಕೂಡಾ ಮಾಡಿದ್ದೀನಿ. ಆದರೆ ಸದಾ ಜನರ ಬಗ್ಗೆ ಯೋಚಿಸುವಂತ ರಾಜಕಾರಣಿಯನ್ನು ನಾನು ನೋಡಿಲ್ಲ. ಮೋದಿಯವರನ್ನು ಬಿಟ್ಟರೆ ಯಡಿಯೂರಪ್ಪನವರು ಜನರ ಪರ ಯೋಚನೆ ಮಾಡುತ್ತಾರೆ. ಅವರ ಒಳ್ಳೆಯತನವನ್ನು ಯಾರೋ ದುರಪಯೋಗ ಪಡಿಸಿಕೊಂಡು ಕೆಟ್ಟ ನಡೆ ಆದರೇ ಹೊರತು ಅವರು ಒಳ್ಳೆಯವರು.
ರಾಜೀನಾಮೆ ಕೊಡುವ ನಿರ್ಧಾರ ಪ್ರಕಟಿಸುವ ಕ್ಷಣ ಮೊದಲು, ೨೮ಕ್ಕೆ ಇಪ್ಪತ್ತೆಂಟೂ ಸೀಟುಗಳನ್ನು ಮೋದಿಗೆ ಗೆದ್ದುಕೊಡೋಣ ಎಂದರಲ್ಲಾ ಬಿಎಸ್‌ವೈ, ಇಂಥ ಹೋರಾಟಗಾರನಿಗೆ ಅಧಿಕಾರ ಉಳಿಸಿಕೊಡಲಾಗಲಿಲ್ಲವಲ್ಲಾ ಎಂಬ ನೋವು ಕಣ್ಣೀರು ತರಿಸುತ್ತಿದೆ. ಛೆ!
— Pratap Simha (@mepratap) May 19, 2018
ಅವರು ರಾಜೀನಾಮೆ ನೀಡಿ ಹೊರಬಂದರೂ ಅಧಿಕಾರ ಕಳೆದುಕೊಂಡ ದುಃಖ ಅವರಲ್ಲಿರಲಿಲ್ಲ. ಅವಕಾಶ ಸಿಕ್ಕಿಯೂ ಕೊನೆ ಕ್ಷಣದಲ್ಲಿ ಹೀಗಾಯ್ತಲ್ಲಾ ಎಂಬ ಪಶ್ಚಾತಾಪ ಅವರಲ್ಲಿತ್ತು. ಒಳ್ಳೆಯದನ್ನು ಮಾಡುವ ಅವಕಾಶ ಕಳೆದುಕೊಂಡೆ ಎಂಬ ನೋವು ಅವರಲ್ಲಿ ನಾನು ಕಂಡೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದೀಗ ಪ್ರತಾಪ್ ಲೈವ್ ವಿಡಿಯೊವನ್ನು ತಮ್ಮ ಫೇಸ್ಬುಕ್ ಪುಟದಿಂದ ತೆಗೆದುಹಾಕಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.