ಮಂಗಳವಾರ, ಮಾರ್ಚ್ 2, 2021
29 °C
ಇಂದಿನಿಂದ ಥಾಮಸ್‌ ಮತ್ತು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ

ಚಿನ್ನದ ಕನಸಿನಲ್ಲಿ ಭಾರತ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನದ ಕನಸಿನಲ್ಲಿ ಭಾರತ ತಂಡ

ಬ್ಯಾಂಕಾಕ್‌, ಥಾಯ್ಲೆಂಡ್‌: ಭಾರತದ ಪುರುಷರ ಮತ್ತು ಮಹಿಳಾ ತಂಡದವರು ಭಾನುವಾರದಿಂದ ನಡೆಯುವ ಥಾಮಸ್‌ ಮತ್ತು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಚಿನ್ನ ಗೆಲ್ಲುವ ಕನಸು ಕಾಣುತ್ತಿದ್ದಾರೆ.

ಉಬರ್‌ ಕಪ್‌ನಲ್ಲಿ ಕಣಕ್ಕಿಳಿಯುವ ಮಹಿಳಾ ತಂಡವನ್ನು ಸೈನಾ ನೆಹ್ವಾಲ್‌ ಮುನ್ನಡೆಸಲಿದ್ದಾರೆ. ಥಾಮಸ್‌ ಕಪ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಅವರು ‍ಪುರುಷರ ತಂಡದ ಸಾರಥ್ಯ ವಹಿಸಲಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪಿ.ವಿ.ಸಿಂಧು, ನಾಲ್ಕನೇ ಸ್ಥಾನ ಹೊಂದಿರುವ ಕಿದಂಬಿ ಶ್ರೀಕಾಂತ್‌ ಮತ್ತು ಡಬಲ್ಸ್‌ ವಿಭಾಗದ ಜೋಡಿ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಈ ಟೂರ್ನಿಗಳಲ್ಲಿ ಆಡುತ್ತಿಲ್ಲ. ಹೀಗಾಗಿ ತಂಡದಲ್ಲಿ ಸ್ಥಾನ ಗಳಿಸಿರುವ ಯುವ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಉಬರ್‌ ಕಪ್‌ನ ಹಿಂದಿನ ಎರಡು ಆವೃತ್ತಿಗಳಲ್ಲಿ ಮಹಿಳಾ ತಂಡದವರು ಕಂಚಿನ ಸಾಧನೆ ಮಾಡಿದ್ದರು. ಈ ಬಾರಿ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಜಪಾನ್‌ ತಂಡಗಳೂ ಇದೇ ಗುಂಪಿನಲ್ಲಿವೆ.

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಹೀಗಾಗಿ ಭಾರತ ತಂಡ ಎಲ್ಲಾ ಪಂದ್ಯಗಳಲ್ಲೂ ಗುಣಮಟ್ಟದ ಆಟ ಆಡುವುದು ಅಗತ್ಯ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸೈನಾ, ಸಿಂಗಲ್ಸ್‌ ವಿಭಾಗದಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ.

ವೈಷ್ಣವಿ ರೆಡ್ಡಿ ಜಕ್ಕಾ, ವಿಶ್ವ ರ‍್ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಸಾಯಿಕೃಷ್ಣ ಪ್ರಿಯ, ಅನುರಾ ಪ್ರಭು ದೇಸಾಯಿ ಮತ್ತು ವೈಷ್ಣವಿ ಭಾಲೆ ಅವರು ಜಪಾನ್‌ ಮತ್ತು ಕೆನಡಾ ತಂಡಗಳ ಆಟಗಾರ್ತಿಯರ ವಿರುದ್ಧ ಛಲದಿಂದ ಹೋರಾಡಬೇಕಿದೆ.

ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಪ್ರಜಕ್ತಾ ಸಾವಂತ್‌, ಸನ್ಯೋಗಿತಾ ಘೋರ್ಪಡೆ, ಪೂರ್ವಿಶಾ ಎಸ್‌ ರಾಮ್‌ ಮತ್ತು ಮೇಘನಾ ಜಕ್ಕಂಪುಡಿ ಅವರೂ ಮಿಂಚಬೇಕಿದೆ.

ಪುರುಷರ ತಂಡದವರು ಥಾಮಸ್‌ ಕಪ್‌ನಲ್ಲಿ ಇದುವರೆಗೂ ಪದಕ ಗೆದ್ದಿಲ್ಲ. ಈ ಕೊರಗು ದೂರವಾಗಬೇಕಾದರೆ ಪ್ರಣಯ್‌ ಸೇರಿದಂತೆ ತಂಡದಲ್ಲಿರುವ ಎಲ್ಲರೂ ಗುಣಮಟ್ಟದ ಸಾಮರ್ಥ್ಯ ತೋರಬೇಕು.

ಪ್ರಣಯ್‌, ಸಿಂಗಪುರ ಓಪನ್‌ ಚಾಂಪಿಯನ್‌ ಬಿ.ಸಾಯಿ ಪ್ರಣೀತ್‌, ಸ್ವಿಸ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಸಮೀರ್‌ ವರ್ಮಾ ಮತ್ತು ಲಕ್ಷ್ಯ ಸೇನ್‌ ಅವರು ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಮನು ಅತ್ರಿ ಮತ್ತು ಬಿ. ಸುಮೀತ್‌ ರೆಡ್ಡಿ ಅವರ ಮೇಲೂ ಭರವಸೆ ಇಡಬಹುದಾಗಿದೆ. ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಶ್ಲೋಕ್‌ ಅವರು ಪರಿಣಾಮಕಾರಿ ಆಟ ಆಡಿದರೆ ಭಾರತದ ಪದಕದ ಹಾದಿ ಸುಗಮವಾಗಲಿದೆ.

ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಫ್ರಾನ್ಸ್‌, ಆಸ್ಟ್ರೇಲಿಯಾ ಮತ್ತು ಚೀನಾ ತಂಡಗಳೂ ಇದೇ ಗುಂಪಿನಲ್ಲಿ ಆಡಲಿವೆ.

*

‘ಎ’ ಗುಂಪಿನಲ್ಲಿರುವ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿ ಆಟ ಆಡಬೇಕಿದೆ.

-ಸಾಯಿ ಪ್ರಣೀತ್‌, ಭಾರತದ ಆಟಗಾರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.