ವಿಧಾನಸೌಧ ನೌಕರರು–ಪೊಲೀಸರ ಕಿತ್ತಾಟ

7
ವಿಧಾನಸೌಧ ಸುತ್ತಮುತ್ತ ಭದ್ರತೆ ಸುಸೂತ್ರ

ವಿಧಾನಸೌಧ ನೌಕರರು–ಪೊಲೀಸರ ಕಿತ್ತಾಟ

Published:
Updated:
ವಿಧಾನಸೌಧ ನೌಕರರು–ಪೊಲೀಸರ ಕಿತ್ತಾಟ

ಬೆಂಗಳೂರು: ವಿಧಾನಸೌಧಕ್ಕೆ ಪ್ರವೇಶ ನಿರ್ಬಂಧಿಸಿದ್ದರಿಂದಾಗಿ ನೌಕರರು ಹಾಗೂ ಪೊಲೀಸರು ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡ ಸಣ್ಣ ಪ್ರಸಂಗ ಹೊರತುಪಡಿಸಿದರೆ, ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಅಧಿಕಾರ ಕೇಂದ್ರದ ಸುತ್ತಲೂ ಹಿಂದೆಂದೂ ಕಂಡರಿಯದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.   

ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರಿಂದಾಗಿ, ಡಿಜಿಪಿ ಉಸ್ತುವಾರಿಯಲ್ಲಿ ಶನಿವಾರ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ರಾಜಕೀಯ ಕಾರ್ಯಕರ್ತರು ಗದ್ದಲ ಮಾಡಬಹುದು ಎಂಬ ಕಾರಣಕ್ಕೆ, ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ವಿಧಾನಸೌಧ ಸುತ್ತಮುತ್ತ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ವಿಧಾನಸೌಧ ಮಾತ್ರವಲ್ಲದೆ, ಶಾಸಕರು ತಂಗಿದ್ದ ಮೂರು ಹೋಟೆಲ್‌ಗಳು ಹಾಗೂ ರಾಜಭವನ ಬಳಿಯೂ ಪೊಲೀಸ್ ಸರ್ಪಗಾವಲು ಇತ್ತು. ಅರೆಸೇನಾ ಪಡೆ ಸಿಬ್ಬಂದಿ ವಿಧಾನಸೌಧದ ಆವರಣದಲ್ಲಿ ಇಡೀ ದಿನ ಶಸ್ತ್ರಾಸ್ತ್ರ ಹಿಡಿದು ಗಸ್ತು ತಿರುಗುತ್ತಿದ್ದರು. ಪಾಸ್ ಇದ್ದವರಿಗೆ ಮಾತ್ರ ಒಳಗೆ ಬಿಡುತ್ತಿದ್ದ ಪೊಲೀಸರು, ಶಾಸಕರ ಆಪ್ತರೆಂದು ಹೇಳಿಕೊಂಡು ಬಂದಿದ್ದ ಕೆಲ ಕಾರ್ಯಕರ್ತರನ್ನೂ ಗೇಟ್‌ನಿಂದ ಹೊರಗೆ ಕಳುಹಿಸಿದರು.

ಪೊಲೀಸ್–ನೌಕರರ ಕಿತ್ತಾಟ: ಬೆಳಿಗ್ಗೆ 10 ಗಂಟೆಗೇ ಪೊಲೀಸರು ವಿಧಾನಸೌಧದ ಎಲ್ಲ ಗೇಟ್‌ಗಳನ್ನೂ ಬಂದ್ ಮಾಡಿದ್ದರು. ಆ ನಂತರ ಬಂದ ವಿಧಾನಸೌಧದ ನೌಕರರು, ತಮ್ಮನ್ನು ಒಳಬಿಡುವಂತೆ ಮನವಿ ಮಾಡಿದರು. ಪೊಲೀಸರು ಒಪ್ಪದಿದ್ದಾಗ ವಾಗ್ವಾದ ಶುರುವಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಏಕವಚನದಲ್ಲೇ ಬೈದಾಡಿಕೊಂಡರು.

‘ಕೆಲಸಕ್ಕೆ ತಡವಾಗಿ ಬಂದಿದ್ದಲ್ಲದೆ, ನಮಗೇ ಎದುರು ಮಾತಾಡ್ತೀಯಾ’ ಎಂದು ಎಎಸ್‌ಐವೊಬ್ಬರು ಮಹಿಳೆಗೆ ಹೇಳಿದರು. ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ತಿರುಗಿಬಿದ್ದ ಮಹಿಳೆ, ‘ನೀನ್ಯಾರೋ ಅದನ್ನೆಲ್ಲ ಮಾತಾಡೋಕೆ. ನಿನ್ನ ಕೆಲಸ ಗೇಟ್ ಕಾಯೋದು. ಅದನ್ನಷ್ಟೇ ಮಾಡು’ ಎಂದು ಗುಡುಗಿದರು.

ಆಗ ಮಧ್ಯ ಪ್ರವೇಶಿಸಿದ ಸಹ ಸಿಬ್ಬಂದಿ, ‘ಹೇಯ್.. ಸರಿಯಾಗಿ ಮಾತಾಡು. ಮಹಿಳೆ ಅಂತ ಸುಮ್ಮನಿದ್ರೆ, ಎಷ್ಟು ಮಾತಾಡ್ತೀಯಾ’ ಎಂದರು. ಆಗ ಎಲ್ಲ ನೌಕರರೂ ಒಟ್ಟಾಗಿ, ‘ಏನ್ ಮಾಡ್ತೀರೋ. ಬನ್ರೋ ನೋಡೇಬಿಡೋಣ. ಪೊಲೀಸರಾದರೆ, ನಿಮಗೆ ಕೋಡುಗಳಿದ್ದಾವ’ ಎಂದು ತರಾಟೆಗೆ ತೆಗೆದುಕೊಂಡರು.

ಹೀಗೆ, ಸುಮಾರು ಒಂದು ತಾಸು ಗದ್ದಲ ನಡೆಯಿತು. ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು, ‘ಗುರುತಿನ ಚೀಟಿ ಪರಿಶೀಲಿಸಿ ಒಳಗೆ ಬಿಡಿ’ ಎಂದು ಸಿಬ್ಬಂದಿಗೆ ಸೂಚಿಸಿದರು. ಆ ನಂತರ ಪರಸ್ಥಿತಿ ತಿಳಿಯಾಯಿತು.

‘ಪ್ರಜಾವಾಣಿ’ ಜತೆ ಮಾತನಾಡಿದ ನೌಕರರೊಬ್ಬರು, ‘ಎಲ್ಲ ನೌಕರರೂ ಶನಿವಾರ ಗುರುತಿನ ಚೀಟಿಯೊಂದಿಗೇ ಬರಬೇಕು ಎಂದು ಸೂಚನಾಫಲಕದಲ್ಲಿ ಶುಕ್ರವಾರವೇ ಹಾಕಿದ್ದರು. ಅಂತೆಯೇ ಗುರುತಿನ ಚೀಟಿಯೊಂದಿಗೆ ಬಂದೆವು. 10 ನಿಮಿಷ ತಡವಾಗಿದ್ದಕ್ಕೆ ಪೊಲೀಸರು ಒಳಗೆ ಬಿಡುತ್ತಿಲ್ಲ. ತಮಗೆ ಬೇಕಾದ ಇಲ್ಲಿನ ನೌಕರರನ್ನು ಗುರುತಿನ ಚೀಟಿ ಇಲ್ಲದಿದ್ದರೂ ಒಳಗೆ ಬಿಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆ

ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸುತ್ತಿದ್ದಂತೆಯೇ, ಜೆಡಿಎಸ್ ಕಾರ್ಯಕರ್ತರು ವಿಧಾನಸೌಧದ ಹಿಂಭಾಗದ ಪ್ರವೇಶದ್ವಾರದಲ್ಲಿ ಸಂಭ್ರಮಾಚರಣೆ ಶುರು ಮಾಡಿದರು.

‘ಕುಮಾರಸ್ವಾಮಿಗೆ ಜೈ ಡಿ.ಕೆ.ಶಿವಕುಮಾರ್‌ಗೆ ಜೈ. ಜೆಡಿಎಸ್– ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಪೊಲೀಸರು ಲಾಠಿಯಿಂದ ಬೆದರಿಸಿ, ಅವರನ್ನು ಚದುರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry