ಯಡಿಯೂರಪ್ಪ ಮಹಾನ್‌ ಸುಳ್ಳುಗಾರ, ಭ್ರಷ್ಟ

7
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಯಡಿಯೂರಪ್ಪ ಮಹಾನ್‌ ಸುಳ್ಳುಗಾರ, ಭ್ರಷ್ಟ

Published:
Updated:
ಯಡಿಯೂರಪ್ಪ ಮಹಾನ್‌ ಸುಳ್ಳುಗಾರ, ಭ್ರಷ್ಟ

ಬೆಂಗಳೂರು: ‘ಬಿ.ಎಸ್‌.ಯಡಿಯೂರಪ್ಪ ಮಹಾನ್‌ ಸುಳ್ಳುಗಾರ. ಕರ್ನಾಟಕದ ರಾಜಕಾರಣದಲ್ಲಿ ಅವರಂತಹ ಢೋಂಗಿ ಹಾಗೂ ಭ್ರಷ್ಟ ಇನ್ನೊಬ್ಬರು ಸಿಗಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸದನದಲ್ಲಿ ಯಡಿಯೂರಪ್ಪ ಹೇಳಿರುವ ವಿಚಾರಗಳು ನೂರಕ್ಕೆ ನೂರು ಸುಳ್ಳು.  ಅವರು ನೀರಾವರಿ ಬಗ್ಗೆ, ರೈತರ ಬಗ್ಗೆ ಹಾಗೂ ಸಾಲ ಮನ್ನಾದ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಮುಖ್ಯಮಂತ್ರಿ ಆಗಿದ್ದಾಗ ಏನು ಮಾಡಿದ್ದರು. ನೀರಾವರಿಗೆ ಎಷ್ಟು ಹಣ ಖರ್ಚು ಮಾಡಿದ್ದರು’ ಎಂದು ಪ್ರಶ್ನಿಸಿದರು.

‘ಸದನದ ನಾಯಕನಿಗೆ ಮಾತನಾಡಲು ಅವಕಾಶ ನೀಡಿದ ಬಳಿಕ ವಿರೋಧಪಕ್ಷದ ನಾಯಕನಿಗೂ ಮಾತನಾಡಲು ಹಂಗಾಮಿ ಸ್ಪೀಕರ್‌ ಅವಕಾಶ ನೀಡಬೇಕಿತ್ತು. ನನಗೆ ಅವಕಾಶ ನೀಡದಿರುವುದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದು. ಅವರು ಪಕ್ಷಪಾತ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ’ ಎಂದರು.

‘ಬೋಪಯ್ಯ ಅವರೊಬ್ಬ ಕಳಂಕಿತ ವ್ಯಕ್ತಿ. ಸುಪ್ರಿಂ ಕೋರ್ಟ್‌ ಕೂಡಾ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಇದೇ ಕಾರಣಕ್ಕೆ’ ಎಂದರು.

‘ಯಡಿಯೂರಪ್ಪ ಅವರು ಆತ್ಮಸಾಕ್ಷಿ ಬಗ್ಗೆಯೂ ಮಾತನಾಡಿದರು. ಅವರು ನಮ್ಮ ಇಬ್ಬರು ಶಾಸಕರನ್ನು ಕರೆಸಿಕೊಂಡಿದ್ದು ನಿಜ ಅಲ್ಲವೇ. ನಮ್ಮ ಶಾಸಕರಿಗೆ ಹಣ ಹಾಗೂ ರಾಜಕೀಯ ಅಧಿಕಾರ ನೀಡುವ ಆಮಿಷ ಒಡ್ಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಯಾವುದೇ ಕಾರಣಕ್ಕೆ ಬೇರೆಯವರು ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ ಎಂದು ಸ್ವತಃ ಪ್ರಧಾನಿ ಹೇಳಿದ್ದಾರೆ. ಬಿಜೆಪಿ ಕೇವಲ 104 ಸಂಖ್ಯಾ ಬಲ ಇದ್ದಾಗ ಈ ಥರ ಹೇಳಿಕೆ ನೀಡುವುದೆಂದರೆ ಏನರ್ಥ’ ಎಂದು ಪ್ರಶ್ನಿಸಿದರು.

ಇತ್ತೀಚಿನ ಬೆಳವಣಿಗೆಗಳು ಹೊಸ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಘರ್ಷಣೆ ನಡೆಯುವುದಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆಗೆ, ‘ಹಾಗೆ ಹೇಳಲಾಗದು. ಬಿಜೆಪಿಗೆ ಸಂಖ್ಯಾ ಬಲ ಇಲ್ಲದೆಯೂ ಸರ್ಕಾರ ರಚನೆಗೆ ಅವಕಾಶ ನೀಡಿದ್ದನ್ನು ನಾವು ವಿರೋಧಿಸಿದ್ದೇವೆ ಅಷ್ಟೆ’ ಎಂದರು.

‘ರಾಜ್ಯಪಾಲರು ಬಹುಮತವಿದ್ದ ಪಕ್ಷಕ್ಕೆ ಆಹ್ವಾನ ನೀಡಬೇಕಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾರಣ. ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಅವಕಾಶ ಕೊಡುವ ಮೂಲಕ ಶಾಸಕರ ಖರೀದಿಗೆ ಉತ್ತೇಜನ ನೀಡಿದ್ದರು. ಕೇಂದ್ರದ ಮಂತ್ರಿಗಳ ಒತ್ತಾಯದ ಮೇರೆಗೆ ಅವರು ಹಾಗೆ ನಡೆದುಕೊಂಡಿದ್ದಾರೆ’ ಎಂದು ಹೇಳಿದರು. 

‘ಜನ ಬಿಜೆಪಿಗೆ ವಿರುದ್ಧ ಮತ ನೀಡಿದ್ದಾರೆ. ನಮ್ಮ ವಿರುದ್ಧ ಮತ ನೀಡುತ್ತಿದ್ದರೆ ಕೊಟ್ಟಿದ್ದರೆ ಬಿಜೆಪಿಗೆ 113 ಕೊಡಬೇಕಿತ್ತಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry