ಬಿಜೆಪಿ ನಾಯಕರಿಂದ ಕರೆ ಬಂದಿಲ್ಲ ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ

7

ಬಿಜೆಪಿ ನಾಯಕರಿಂದ ಕರೆ ಬಂದಿಲ್ಲ ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ

Published:
Updated:
ಬಿಜೆಪಿ ನಾಯಕರಿಂದ ಕರೆ ಬಂದಿಲ್ಲ ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ

ಯಲ್ಲಾಪುರ: ತಮ್ಮ ಕುಟುಂಬದವರಿಗೆ ಯಾವುದೇ ಆಮಿಷವೊಡ್ಡುವ ಕರೆ ಬಿಜೆಪಿ ನಾಯಕರಿಂದ ಬಂದಿಲ್ಲ ಎಂದು ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಹಾಕಿದ್ದು, ಈ ವಿಷಯವಾಗಿ ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಆಡಿಯೊ ನಕಲಿ ಎಂದು ಹೇಳಿದ್ದಾರೆ.

‘ಶಾಸಕ ಶಿವರಾಮ ಹೆಬ್ಬಾರ ಅವರ ಪತ್ನಿ ವನಜಾಕ್ಷಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಬಿಜೆಪಿಯ ಕೆಲವು ನಾಯಕರು ಹೆಬ್ಬಾರ ಅವರಿಗೆ ₹100 ಕೋಟಿ ಹಾಗೂ ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ’ ಎಂಬ ಸುದ್ದಿ ದೃಶ್ಯಮಾಧ್ಯಮದಲ್ಲಿ ಪ್ರಸಾರವಾಗಿ ಕ್ಷೇತ್ರದಾದ್ಯಂತ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

‘ನನ್ನ ಪತ್ನಿಗೆ ಬಿಜೆಪಿಯವರು ಆಮಿಷ ನೀಡಿದ್ದಾರೆ ಎನ್ನುವ ಆಡಿಯೊ ಟೇಪ್ ಬಿಡುಗಡೆ ವಿಷಯ ಸದನದಲ್ಲಿ ನನಗೆ ತಡವಾಗಿ ತಿಳಿಯಿತು. ಅದರಲ್ಲಿ ಇರುವುದು ನನ್ನ ಹೆಂಡತಿಯ ಧ್ವನಿ ಅಲ್ಲ. ನನ್ನ ಹೆಂಡತಿಗೆ ಅಂತಹ ಯಾವ ದೂರವಾಣಿ ಕರೆಯೂ ಬಂದಿಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಹಬ್ಬಿಸುತ್ತಿದ್ದಾರೆ.

ಟೇಪ್‍ ಅನ್ನು ಯಾರೇ ಬಿಡುಗಡೆ ಮಾಡಿದ್ದರೂ ಅದಕ್ಕೆ ನನ್ನ ಧಿಕ್ಕಾರ. ಜನಸೇವೆ ಮಾಡಲು ಈ ಭಾಗದ ಜನತೆ ಮತ್ತೊಂದು ಅವಕಾಶ ನೀಡಿದ್ದಾರೆ. ಈ ಆಡಿಯೊ ಟೇಪ್‌ ನಕಲಿ.ಇದನ್ನು ಖಂಡಿಸುತ್ತೇನೆ’ ಎಂದು ಬರೆದಿದ್ದಾರೆ.

ಆಡಿಯೊ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿತ್ತು. ‘ಶಿವರಾಮ ಹೆಬ್ಬಾರ ಖಂಡಿತವಾಗಿಯೂ ಬಿಜೆಪಿಗೆ ಬರುತ್ತಾರೆ ಕಾದು ನೋಡಿ’ ಎಂದು ಕೆಲವರು ಪೋಸ್ಟ್ ಮಾಡಿದರೆ, ‘ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಜಿಗಿಯುವುದಿಲ್ಲ’ ಎಂದು ಮತ್ತೆ ಹಲವರು ಪೋಸ್ಟ್ ಹಾಕಿದ್ದರು. ಈಗ ಹೆಬ್ಬಾರ ಅವರೇ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry