7

ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಶಾಸಕರ ಖರೀದಿ ಪ್ರಕರಣ ತನಿಖೆಗೆ: ರಾಮಲಿಂಗಾರೆಡ್ಡಿ

Published:
Updated:
ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಶಾಸಕರ ಖರೀದಿ ಪ್ರಕರಣ ತನಿಖೆಗೆ: ರಾಮಲಿಂಗಾರೆಡ್ಡಿ

ಬೆಂಗಳೂರು: ‘ಆಪರೇಷನ್ ಕಮಲಕ್ಕೆ ಯತ್ನಿಸಿದ ಬಿಜೆಪಿ ನಾಯಕರ ಆಡಿಯೋ ಬಿಡುಗಡೆ ಆ ಪಕ್ಷದ ನಿಜಬಣ್ಣ ಬಯಲು ಮಾಡಿದೆ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಶಾಸಕರ ಖರೀದಿ ಯತ್ನ ಕುರಿತು ತನಿಖೆ ನಡೆಸುವಂತೆ ಮನವಿ ಮಾಡುತ್ತೇವೆ’ ಎಂದು ಮಾಜಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕೆಪಿಸಿಸಿ‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಆಪರೇಷನ್ ಕಮಲದ ಆಡಿಯೋ ನಕಲಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಜೆಪಿಯವರು ಏನು ಸತ್ಯ ಹರಿಶ್ಚಂದ್ರರಾ’ ಎಂದು ಪ್ರಶ್ನಿಸಿದರು.

‘2008 ರಿಂದ 2013 ರವರೆಗೆ ಅವರು ಏನು ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಗ ಕೊಳ್ಳೆ ಹೊಡೆದ ದುಡ್ಡಲ್ಲಿ ಈಗ ಶಾಸಕರ ಖರೀದಿ ಮಾಡಲು ಮುಂದಾಗಿದ್ದಾರಾ, ಅಥವಾ ದೆಹಲಿಯಿಂದ ಹಣ ಬರ್ತಾ ಇದೆಯಾ’ ಎಂದು‌ ಪ್ರಶ್ನಿಸಿದರು.

‘ಶಾಸಕರ ಖರೀದಿ ಕುರಿತು ಬಹಿರಂಗಗೊಂಡಿರುವ ಆಡಿಯೋ ನಕಲಿ ಅಲ್ಲ ಅಸಲಿ. ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಕೂಡಲೇ ತನಿಖೆ ನಡೆಸುವಂತೆ ಮನವಿ ಮಾಡುತ್ತೇನೆ. ಈ ಬಗ್ಗೆ ಪತ್ರವನ್ನೂ ಬರೆಯುತ್ತೇನೆ’ ಎಂದರು.

*

ವೀರಶೈವ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ ಬೇಡಿಕೆ : ಹೈಕಮಾಂಡ್ ನಿರ್ಧಾರ

'ವೀರಶೈವ ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಲಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ವೀರಶೈವ ಲಿಂಗಾಯತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬೇಡಿಕೆ ಕುರಿತು, ಬಿಜೆಪಿ ಬೆಂಬಲಿತ ಕೆಲ ಮಾಧ್ಯಮಗಳು ಸೃಷ್ಟಿಸಿರುವ ವದಂತಿಯಾಗಿದ್ದು ಯಾರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಲಿದ್ದಾರೆ’ ಎಂದರು.

"ವೀರಶೈವ ಲಿಂಗಾಯತ ಸಮುದಾಯದವರು ಬರೀ ಕಾಂಗ್ರೆಸ್‌ನಿಂದ ಮಾತ್ರ ಆಯ್ಕೆಯಾಗಿಲ್ಲ. ಇದೆಲ್ಲಾ ಬಿಜೆಪಿಯ ಪಿತೂರಿ. ಅವರು ಕೆಲ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಕೆಲ ವರ್ಗಗಳಿಗೆ ಟಿಕೆಟ್ ಅನ್ನೂ ನೀಡಿಲ್ಲ. ಆದರೆ ನಾವು ಎಲ್ಲಾ ಸಮುದಾಯಕ್ಕೂ ಆದ್ಯತೆ ನೀಡಿದ್ದೇವೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತೇವೆ‌. ಹಿರಿತನ ಸೇರಿದಂತೆ ಅರ್ಹತೆಯ ಮಾನದಂಡದ ಅನುಸಾರ ಪಕ್ಷದ ನಾಯಕರು ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದರು.

‘ಮೈತ್ರಿ ಸರ್ಕಾರ ರಚಿಸಲಿರುವ ಕಾಂಗ್ರೆಸ್ ಜೆಡಿಎಸ್ ನಾಯಕರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ ಎಂದು ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪಾಪ, ಅವರಿಗೆ ನಿದ್ದೆ ಬರುತ್ತಿಲ್ಲ. ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಮತ್ತೆ ಅಧಿಕಾರ ಸಿಕ್ಕರೆ, ಕೊಳ್ಳೆಹೊಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಆ ಅವಕಾಶ ತಪ್ಪಿದೆ ಎಂದು ಅವರಿಗೆ ನಿದ್ದೆ ಬರುತ್ತಿಲ್ಲ’ ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry