7

ಸಜ್ಜನರ ಮೊಗದಲ್ಲಿ ನಗು, ಸತ್ಯದ ಕಮಲ ಶೀಘ್ರ ಅರಳಲಿವೆ: ಯಡಿಯೂರಪ್ಪ

Published:
Updated:
ಸಜ್ಜನರ ಮೊಗದಲ್ಲಿ ನಗು, ಸತ್ಯದ ಕಮಲ ಶೀಘ್ರ ಅರಳಲಿವೆ: ಯಡಿಯೂರಪ್ಪ

ಬೆಂಗಳೂರು: ‘ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ ಎಂದು ಹೆದರದಿರಿ. ನನ್ನ ಚಿಂತೆ ಬಿಡಿ. ಆ ಒಂದು ದಿನ ಬರುತ್ತದೆ. ‌ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಅರಳುತ್ತವೆ. ಬಿಜೆಪಿ ಮತ್ತೆ ಬರಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ಬೆಂಬಲಿಗರನ್ನು ಉದ್ದೇಶಿಸಿ ‘ನಿಮಗಾಗಿ ಬದುಕುವುದೇ ನನ್ನ ಬದುಕು!’ ಎಂಬ ಶೀರ್ಷಿಕೆಯಲ್ಲಿ ಸುದೀರ್ಘ ಬರಹವೊಂದನ್ನು ಬರೆದಿರುವ ಯಡಿಯೂರಪ್ಪ ಅದರ ಲಿಂಕ್ ಅನ್ನು ಟ್ವೀಟ್‌ನಲ್ಲಿ ನೀಡಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?: ‘ನಾನಿನ್ನೂ ದಣಿದಿಲ್ಲ. ದಣಿಯುವುದೂ ಇಲ್ಲ. ಧಣಿ ಎಂದು ನೀವು ಕರೆದ ಮೇಲೆ ನಿಮ್ಮ ಧ್ವನಿಯಾಗಿ ಇರುವುದೇ ನನ್ನ ಕಾಯಕ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಂಡಾಗ ನನಗೆ ಸಹಿಸಲಾಗಲಿಲ್ಲ. ರೈತರು ಗರ್ವದಿಂದ ‘ನಾನು ರೈತ’ ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರ್ಕಾರದ ಆಶಯವಾಗಿತ್ತು. ಈಗಲೂ ಹಾಗೇ ಇದೆ. ಖುದ್ದು ಕೆಲಸ ಮಾಡಲಾಗದೇ ಇದ್ದರೂ ವಿರೋಧಪಕ್ಷದಲ್ಲಿ ಕುಳಿತು ಮಾಡಿಸುತ್ತೇನೆ. ಏಕೆಂದರೆ, ನಾನು ನಿಮ್ಮವನು, ನಿಮ್ಮಲ್ಲಿ ಒಬ್ಬನು.‌

ಯಾವ ಜನ್ಮದ‌ ಪುಣ್ಯವೋ ಏನೋ, ನಿಮ್ಮಂಥ ಕಾರ್ಯಕರ್ತರು, ಬೆಂಬಲಿಗರನ್ನು, ಮನತುಂಬಿ ಹರಸುವ ಜನರನ್ನು ನಾನು ಪಡೆದಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪಾದಿಸಿದ್ದೇನೆ. ಗುಮಾಸ್ತನನ್ನು ನಾಯಕನನ್ನಾಗಿ ಮಾಡಿದವರು ನೀವು. ಈಗಲೂ ಅಷ್ಟೇ, ನೀವು ನನ್ನ ಕೈಬಿಟ್ಟಿಲ್ಲ. ಇನ್ನಷ್ಟು ಬಲಪಡಿಸಿದ್ದೀರಿ, ಗೆಲ್ಲಿಸಿದ್ದೀರಿ.‌ ಆದರೆ, ವಿರೋಧಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ತಂತ್ರ, ಕುತಂತ್ರಗಳಿಂದ ಸರ್ಕಾರ ರಚಿಸಲಾಗಲಿಲ್ಲ. ಆದರೇನಂತೆ? ನಾನು ಬದುಕಿರುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ‌‌. ರೈತರಿಗಾಗಿ ಶ್ರಮಿಸುತ್ತಲೇ ಇರುತ್ತೇನೆ‌.

‘ಕೆಲ ತಿಂಗಳು ಮನೆ ಬಿಟ್ಟು ಬಿಜೆಪಿ ಪರವಾಗಿ ಕೆಲಸ ಮಾಡಿ’ ಎಂದು ಪರಿವರ್ತನಾ ಯಾತ್ರೆಯಲ್ಲಿ ನಾನು ಕೊಟ್ಟ ಕರೆಗೆ, ನೀವೆಲ್ಲ ಬಂದಿದ್ದೀರ, ದುಡಿದಿದ್ದೀರ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದಬೇಡಿ. ನೀವು ಧೈರ್ಯದಿಂದ ಇದ್ದರೆ ನನ್ನ ಧೈರ್ಯ ನೂರ್ಮಡಿಯಾಗುತ್ತದೆ.

ಸದ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ. ಮೊದಲೇ ಹೇಳಿದಂತೆ ನಾನು ದಣಿದಿಲ್ಲ. ನಿಮಗಾಗಿ ಕೆಲಸ ಮಾಡುವುದೇ ನನ್ನ ಜೀವನದ ಧ್ಯೇಯ.’ ಎಂದು ಯಡಿಯೂರಪ್ಪ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry