ಅಮಿತ್‌ ಶಾಗೆ ಕುಮಾರಸ್ವಾಮಿ ಚಾಟಿ

7
ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದ್ದು ಪವಿತ್ರವೇ?

ಅಮಿತ್‌ ಶಾಗೆ ಕುಮಾರಸ್ವಾಮಿ ಚಾಟಿ

Published:
Updated:
ಅಮಿತ್‌ ಶಾಗೆ ಕುಮಾರಸ್ವಾಮಿ ಚಾಟಿ

ಬೆಂಗಳೂರು: ‘ಬಿ.ಎಸ್.ಯಡಿಯೂರಪ್ಪನವರನ್ನು ಅಲ್ಪಾವಧಿಗೆ ಮುಖ್ಯಮಂತ್ರಿ ಮಾಡುವ ಮೂಲಕ, ಅವರು ಪ್ರತಿನಿಧಿಸುವ ಸಮುದಾಯಕ್ಕೇ ನೀವು ಅವಮಾನ ಮಾಡಿದ್ದೀರಿ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕುಟುಕಿದ್ದಾರೆ.

‘ಸರ್ಕಾರ ರಚಿಸಲು ಬಹುಮತ ಇಲ್ಲ ಎಂಬುದು ಗೊತ್ತಿದ್ದರೂ, ಆಳದ ಬಾವಿಗೆ ಮಕ್ಕಳನ್ನು ತಳ್ಳಿದಂತೆ ಯಡಿಯೂರಪ್ಪನವರನ್ನು ಮುಂದೆ ಬಿಟ್ಟು, ಕಡೆಗೆ ಅವರು ರಾಜೀನಾಮೆ ಕೊಡುವಂತೆ ಮಾಡಿದಿರಿ’ ಎಂದು ಟೀಕಿಸಿದ್ದಾರೆ.

‘ರಾಜ್ಯ ವಿಧಾನಸಭೆಯ ಚುನಾವಣಾ ಫಲಿತಾಂಶ ಬಂದ ಬಳಿಕ ಅಕ್ಷರಶಃ ಕಣ್ಮರೆಯಾಗಿದ್ದ ಶಾ ಒಂದು ವಾರ ಕಳೆದ ನಂತರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಅಪವಿತ್ರ ಎನ್ನುತ್ತಿದ್ದಾರೆ. ಹಾಗಾದರೆ ಪವಿತ್ರ ಮೈತ್ರಿ ಯಾವುದು ಹೇಳಿ’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಆಲೋಚನಾ ಲಹರಿಯೇ ಸಂಪೂರ್ಣ ಅವಿಶ್ವಾಸದಿಂದ ಕೂಡಿದೆ. ವಿಶ್ವಾಸ ಮತ ಯಾಚನೆಗೆ, ಪಕ್ಷದ ಚಿಹ್ನೆಯ ಮೇಲೆ ಆರಿಸಿ ಬಂದ ಶಾಸಕರನ್ನು ಖರೀದಿ ಮಾಡಲು ಮುಂದಾಗಿದ್ದು ಪವಿತ್ರವೇ’ ಎಂದೂ ಅವರು ಕೇಳಿದ್ದಾರೆ.

‘ಅತಿದೊಡ್ಡ ಪಕ್ಷ ಸರ್ಕಾರ ರಚಿಸಲು ಬಿಡಲಿಲ್ಲ ಎಂಬ ನಿಮ್ಮ ವಾದದಲ್ಲಿ ಹುರುಳಿಲ್ಲ. ಕೋಮುವಾದಿಗಳನ್ನು ದೂರವಿಡಲು ಜಾತ್ಯತೀತ ಧೋರಣೆಯ ಶಕ್ತಿಗಳು ಒಂದಾಗಿವೆ’ ಎಂದರು.

‘ಎಲ್ಲರ ಹಿತ ಕಾಪಾಡಲು ನಾವು ಈ ಸರ್ಕಾರ ರಚಿಸುತ್ತಿದ್ದೇವೆ. ನಮ್ಮ ಸರ್ಕಾರ ಸಂವಿಧಾನದ ಅಡಿಯಲ್ಲಿ ವಿಧಿಬದ್ಧವಾಗಿದೆ ಎಂಬುದನ್ನು ಮರೆಯಬೇಡಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry