ಡಿಸಿಎಂ ಹುದ್ದೆಗೆ ಲಿಂಗಾಯತ ಶಾಸಕರ ಪಟ್ಟು

7

ಡಿಸಿಎಂ ಹುದ್ದೆಗೆ ಲಿಂಗಾಯತ ಶಾಸಕರ ಪಟ್ಟು

Published:
Updated:

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 16 ಲಿಂಗಾಯತ ಶಾಸಕರು ಪಟ್ಟು ಹಿಡಿದಿದ್ದಾರೆ.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಸಭೆ ಸೇರಿದ ಶಾಸಕರು, ಸಭೆಯ ಬಳಿಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಎರಡು ಡಿಸಿಎಂ ಹುದ್ದೆ ಇದ್ದರೆ ಅದರಲ್ಲಿ ಒಂದನ್ನು ಲಿಂಗಾಯತರಿಗೆ ಅಥವಾ ಒಂದೇ ಹುದ್ದೆ ಇದ್ದರೆ ಅದೂ ಲಿಂಗಾಯತರಿಗೇ ನೀಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪೈಪೋಟಿ:ಡಿಸಿಎಂ ಹುದ್ದೆ ಒಂದು ಅಥವಾ ಎರಡು ಇರುತ್ತದೆಯೋ ಎಂಬ ಗೊಂದಲ ಮಧ್ಯೆಯೇ, ಈ ಹುದ್ದೆಗಾಗಿ ಲಿಂಗಾಯತರಲ್ಲಿ ಭಾರಿ ಪೈಪೋಟಿ ನಡೆದಿದೆ.

ಲಿಂಗಾಯತರ ಪೈಕಿ ಕೆಲವರು ಮತ್ತು ಬಹುತೇಕ ವೀರಶೈವ ಲಿಂಗಾಯತ ಶಾಸಕರು ತಮ್ಮ ಸಮುದಾಯದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಆದರೆ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರು, ತಮಗೆ ಈ ಹುದ್ದೆ ನೀಡಬೇಕು ಎಂಬ ಹಟಕ್ಕೆ ಕುಳಿತಿದ್ದಾರೆ.

2013ರಲ್ಲೇ ಪಾಟೀಲರು ಈ ಹುದ್ದೆ ಬಯಸಿದ್ದರು. ಆದರೆ, ಪಕ್ಷದ ಹೈಕಮಾಂಡ್ ಡಿಸಿಎಂ ಹುದ್ದೆ ನೀಡುವುದಿಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ ಅವರು ಜಲಸಂಪನ್ಮೂಲ ಸಚಿವ ಖಾತೆಗೆ ತೃಪ್ತಿ ಪಟ್ಟುಕೊಂಡಿದ್ದರು. ಇದೀಗ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಪಾಟೀಲರಿಗೆ ವಿರೋಧ:

‘ಪಾಟೀಲರಿಗೆ ಡಿಸಿಎಂ ಹುದ್ದೆಯಲ್ಲ, ಸಚಿವ ಸ್ಥಾನವನ್ನೂ ನೀಡಬಾರದು’ ಎಂದು ವಿಜಯಪುರ ಜಿಲ್ಲೆ ಪ್ರತಿನಿಧಿಸುವ ಶಿವಾನಂದ ಪಾಟೀಲ (ಬಸವನಬಾಗೇವಾಡಿ), ಯಶವಂತರಾಯ ಗೌಡ ಪಾಟೀಲ(ಇಂಡಿ) ಒತ್ತಾಯಿಸಿದ್ದಾರೆ ಎಂದು ಗೊತ್ತಾಗಿದೆ.

‘ಹಿಂದೆ ಸಚಿವರಾಗಿದ್ದಾಗ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಮ್ಮ ಪಟಾಲಂನ್ನು ಮಾತ್ರ ಸುತ್ತ ಇಟ್ಟುಕೊಂಡು ಸಾಕಿದರು. ಈಗಲೂ ಅದನ್ನೇ ಮುಂದುವರಿಸುತ್ತಾರೆ. ಅವರಿಗೆ ಸಚಿವ ಸ್ಥಾನಕೊಟ್ಟರೆ ಸಹಿಸುವುದಿಲ್ಲ’ ಎಂದು ಈ ಶಾಸಕರು, ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಿಷ್ಠುರವಾಗಿಯೇ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಿವಾನಂದ ಪಾಟೀಲ, ಯಶವಂತರಾಯ ಅವರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

 

ಸತೀಶ್‌ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ: ಆಗ್ರಹ

ಬೆಂಗಳೂರು: ‘ಸತೀಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಹಾಗೂ ನಮ್ಮ ಸಮುದಾಯದ ಐದು ಜನರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಆಗ್ರಹಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಪಡೆ ಅಧ್ಯಕ್ಷ ಕೆ.ನಾರಾಯಣಸ್ವಾಮಿ, ‘ರಾಜ್ಯದಲ್ಲಿ ಇದುವರೆಗೂ ನಮ್ಮ ಸಮಾಜಕ್ಕೆ ಸೂಕ್ತವಾದ ಸ್ಥಾನಮಾನ ಸಿಕ್ಕಿಲ್ಲ. ನಮಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ವೀರಶೈವ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ: ಒತ್ತಾಯ

ಬೆಂಗಳೂರು: ‘ವೀರಶೈವ ಲಿಂಗಾಯತ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಕ್ಕೂಟ ಆಗ್ರಹಿಸಿದೆ.

‘ವೀರಶೈವ ಲಿಂಗಾಯತ ಸಮುದಾಯದವರು ರಾಜ್ಯದಲ್ಲಿ 1.5 ಕೋಟಿ ಜನರು ಇದ್ದಾರೆ. ಈ ಬಾರಿ ಚುನಾವಣೆಯಲ್ಲಿ ನಮ್ಮ ಸಮುದಾಯದ 60 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಿದ್ದು ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಮೈತ್ರಿ ಸರ್ಕಾರ ಆರು ತಿಂಗಳು ಕೂಡ ನಡೆಯದಂತೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ದಿಂಡೂರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry