3

ಪಕ್ಷದ 78 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು : ಎಂ.ಬಿ.ಪಾಟೀಲ

Published:
Updated:
ಪಕ್ಷದ 78 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು : ಎಂ.ಬಿ.ಪಾಟೀಲ

ಬೆಂಗಳೂರು: ‘ಪಕ್ಷದಲ್ಲಿ 78 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ ಎಲ್ಲರನ್ನೂ ಮಂತ್ರಿ ಮಾಡೋಕೆ ಆಗಲ್ಲ. ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,‘ಜಾತಿ, ಸಮುದಾಯ, ಹಿರಿತನ ಎಲ್ಲವನ್ನೂ ಹೈಕಮಾಂಡ್ ನೋಡುತ್ತದೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆಯ ಆಸೆಯೂ ಇದೆ’ ಎಂದರು.

‘ದಕ್ಷಿಣಕ್ಕೆ ಮುಖ್ಯಮಂತ್ರಿ ಇದ್ದಾರೆ, ಉತ್ತರಕ್ಕೆ ಡಿಸಿಎಂ ನೀಡಲಿ ಅನ್ನೋದು ಆಸೆ. ಪರಮೇಶ್ವರ ಅವರಿಗೆ ಡಿಸಿಎಂ ಕೊಟ್ಟರೆ, ಉತ್ತರ ಕರ್ನಾಟಕಕ್ಕೂ ಡಿಸಿಎಂ ಕೊಟ್ಟರೆ ಒಳ್ಳೆಯದು. ನಾವು ಸಿದ್ದರಾಮಯ್ಯ ಅವರ ಬಳಿ ವಿನಂತಿ ಮಾಡಿದ್ದೇವೆ. ನಿನ್ನೆ ನಮ್ಮ ಸಮುದಾಯದ ಶಾಸಕರು ಸಭೆ ನಡೆಸಿದ್ದೇವೆ’ ಎಂದರು.

‘ನಮ್ಮ‌ ಸಮುದಾಯದಿಂದ 16 ಮಂದಿ ಶಾಸಕರಿದ್ದೇವೆ. ನನಗೆ ಸಚಿವ ಸ್ಥಾನ ನೀಡಬೇಡಿ ಎಂದು ದೇವೇಗೌಡರು ಹೇಳಿಲ್ಲ. ನನಗೆ ಜಲಸಂಪನ್ಮೂಲ ಖಾತೆಯೇ ಬೇಕಿಂದಿಲ್ಲ. ಸಮ್ಮಿಶ್ರ ಸರ್ಕಾರ ಇರುವುದರಿಂದ ಖಾತೆಯ ಬಗ್ಗೆ ನಾಯಕರು ತೀರ್ಮಾನ ಮಾಡಬೇಕು’ ಎಂದರು.

‘ನಮ್ಮ ಸಮುದಾಯದ ಯಾರಿಗೇ ಆಗಲಿ ಡಿಸಿಎಂ ಸ್ಥಾನ ನೀಡಲಿ. ನಾನಾಗಬಹುದು, ಶಾಮನೂರು ಆಗಿರಬಹುದು. ಯಾರಿಗೆ ಬೇಕಾದರೂ ಕೊಡಲಿ, ನಾವು ಇಂಥವರಿಗೆ ಕೊಡಿ ಅಂತ ಹೇಳಿಲ್ಲ. ಶಾಮನೂರು ಅವರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರು ಇಲ್ಲ’ ಎಂದರು ಹೇಳಿದರು.

‘ಪ್ರತ್ಯೇಕ ಲಿಂಗಾಯತ ಧರ್ಮ‌ದ ಕೂಗು ರಾಜಕೀಯಕ್ಕೆ ಸಂಬಂಧಿಸಿಲ್ಲ. ಚುನಾವಣೆಯೇ ಬೇರೆ, ನಮ್ಮ‌ಅಸ್ಮಿತೆಯೇ ಬೇರೆ. ನಾನು ಎಲ್ಲಿಯೂ ಲಿಂಗಾಯತ ಅಂತ ಟ್ರಂಪ್ ಕಾರ್ಡ್ ಬಳಸಿಲ್ಲ’ ಎಂದರು.

‘ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮುಂದುವರಿಯಲಿದೆ. ಎಸ್‌.ಎಂ.ಜಾಮದಾರ ಜೊತೆ ಸೇರಿ ಹೋರಾಟ ಮುಂದುವರಿಸುತ್ತೇವೆ. ಚುನಾವಣೆ ಮುಗಿದರೂ ಅದು ನಿಲ್ಲಲ್ಲ, ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry