‘ಬಸವತತ್ವ ಅಳವಡಿಕೆಯೇ ಶ್ರೀಗಳಿಗೆ ನೀಡುವ ಗೌರವ’

7
ಡಾ.ಮಹಾಂತಶ್ರೀಗಳ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಯಡಿಯೂರಪ್ಪ

‘ಬಸವತತ್ವ ಅಳವಡಿಕೆಯೇ ಶ್ರೀಗಳಿಗೆ ನೀಡುವ ಗೌರವ’

Published:
Updated:
‘ಬಸವತತ್ವ ಅಳವಡಿಕೆಯೇ ಶ್ರೀಗಳಿಗೆ ನೀಡುವ ಗೌರವ’

ಇಳಕಲ್: ‘ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಸಂಕಲ್ಪ ಮಾಡಿ ಬಸವತತ್ವ ಅನುಸರಿಸಿದರೆ ಅದೇ, ಡಾ. ಮಹಾಂತ ಸ್ವಾಮೀಜಿ ಅವರಿಗೆ ಸಲ್ಲಿಸುವ ಗೌರವ’ ಎಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಸೋಮವಾರ ಇಲ್ಲಿಯ ವಿಜಯ ಮಹಾಂತ ಶಿವಯೋಗಿಗಳ ಕತೃ ಗದ್ದುಗೆ ಆವರಣದಲ್ಲಿ ಲಿಂಗೈಕ್ಯರಾದ ಮಹಾಂತ ಶ್ರೀಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಂದರ್ಭದಲ್ಲಿ ಗೌರವ ಸಲ್ಲಿಸಿ, ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಗುರುಮಹಾಂತ ಶ್ರೀಗಳಲ್ಲಿಯೇ ಡಾ.ಮಹಾಂತ ಶ್ರೀಗಳನ್ನು ಕಂಡು ಅವರ ಮಾರ್ಗದರ್ಶನ ಪಡೆಯೋಣ’ ಎಂದರು.

‘ಮಹಾಂತ ಜೋಳಿಗೆ ಹಿಡಿದು ಜನರ ಕೆಟ್ಟ ಚಟಗಳನ್ನು ಬೇಡಿದ ಡಾ.ಮಹಾಂತ ಶ್ರೀಗಳ ಸಾಮಾಜಿಕ ಕಾಳಜಿ ನಾಡಿನ ಮಠಾಧೀಶರ ಅನುಕರಣೆಗೆ ಯೋಗ್ಯ. ನಾಳೆಯಿಂದ ಮಠದಲ್ಲಿ ಅವರ ದರ್ಶನ ಸಿಗದೇ ಇರಬಹುದು. ಆದರೆ, ಅವರ ಚಿಂತನೆಗಳು, ಸಂದೇಶಗಳು ನಮ್ಮ ಜತೆಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೇ ಎಲ್ಲರೂ ಜೀವನ ನಡೆಸಬೇಕು.ಇದು ಶ್ರೀಗಳ ಆಪೇಕ್ಷೆ ಕೂಡ ಆಗಿತ್ತು’ ಎಂದರು.

ಗುರು ಮಹಾಂತ ಶ್ರೀಗಳು ಮಾತನಾಡಿ ‘ಹಿರಿಯ ಪೂಜ್ಯರು ಬಸವತತ್ವವನ್ನು ಕೇವಲ ನುಡಿಯಲ್ಲಿ ಅಲ್ಲ, ನಿತ್ಯವೂ ಆಚರಿಸಿದರು. ದುರ್ಗಮ ಹಾದಿಯಾದರೂ ಹಿಂಜರಿಯಲಿಲ್ಲ. ಅವರ ದಾರಿಯಲ್ಲಿ ಸಾಗುತ್ತೇನೆ. ಭಕ್ತರು ಸಹ ಪೂಜ್ಯರನ್ನು ಅನುಸರಿಸಬೇಕು. ನಾಡಿನ ಎಲ್ಲ ಪೂಜ್ಯರು ನನಗೆ ತಾಯಿ ಸ್ವರೂಪರಾಗಿದ್ದಾರೆ. ನಾನು ಕರುವಿದ್ದಂತೆ, ನಾಡಿನ ಎಲ್ಲ ಶ್ರೀಗಳು ಆಕಳಿದ್ದಂತೆ, ನನಗೆ ಹಾಲುಣಿಸಿ ಪೋಷಿಸಬೇಕು’ ಎಂದು ದುಃಖತಪ್ತರಾಗಿ ನುಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜ ತಿದ್ದುವ ಸಂದರ್ಭದಲ್ಲಿ ಎದುರಿಸಿದ ಶಕ್ತಿಗಳನ್ನು ಇಂದು ಮಹಾಂತ ಶ್ರೀಗಳು ಎದುರಿಸಿದರು. ಎದೆಗುಂದದೇ ಅದೇ ಮಾರ್ಗದಲ್ಲಿ ಸಾಗಿದರು. ಮಹಾಂತ ಜೋಳಿಗೆ ಹಿಡಿದು ಧನ, ಕನಕ ಬೇಡಲಿಲ್ಲ. ದುಶ್ಚಟಗಳನ್ನು ಬೇಡಿದರು’ ಎಂದು ಸ್ಮರಿಸಿದರು.

ಗದಗ ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಸಾವಿರಾರು ವಿರಕ್ತರು ಬಸವಣ್ಣನ ಹೆಸರು ಸುಮ್ಮನೇ ಹೇಳುತ್ತಿದ್ದರು. ಆದರೆ ಅಕ್ಷರಶಃ ಬಸವಣ್ಣನನ್ನು ಅನುಸರಿಸಿದರು ಇಳಕಲ್ ಶ್ರೀಗಳು ಮಾತ್ರ. ಎತ್ತು ಪೂಜಿಸಿ ಬಸವ ಜಯಂತಿ ಮಾಡುತ್ತಿದ್ದ ಅನೇಕ ವಿರಕ್ತರಿಗೆ ಬಸವತತ್ವವನ್ನು ಹೇಳಿಕೊಟ್ಟರು. ಬಸವಣ್ಣನನ್ನು ಅನುಸರಿಸಿದ ಮಹಾಂತಪ್ಪಗಳನ್ನು ಕೆಟ್ಟದಾಗಿ ಅವಹೇಳನ ಮಾಡಲಾಯಿತು. ಆದರೆ ಅವರು ವಂದನೆ, ನಿಂದನೆ ಎರಡು ಒಂದೇ ಎಂದು ತಿಳಿದಿದ್ದರು’ ಎಂದು ನೆನಪಿಸಿಕೊಂಡರು.

‘ಗುರು ಮಹಾಂತ ಶ್ರೀಗಳು ಜಂಗಮರಲ್ಲ ಅನ್ನುವ ಕಾರಣಕ್ಕೆ ಪಟ್ಟಾಧಿಕಾರದ ಸಂದರ್ಭದಲ್ಲಿ ಮಹಾಂತಪ್ಪಗಳಿಗೆ ಕಿರಿಕಿರಿಯಾಗಿದ್ದು ಕಂಡರೆ ಲಿಂಗಾಯತರಾದ ನಾವು ಇನ್ನೂ ಮಾನಸಿಕವಾಗಿ ಸಣ್ಣವರಾಗಿಯೇ ಇದ್ದೇವೆ. ಪಟ್ಟಾಧಿಕಾರ ಸಮಾರಂಭ ಪೊಲೀಸರ ಗನ್‌ನ ರಕ್ಷಣೆಯಲ್ಲಿ ನಡೆಯಿತು. ಬಹಳಷ್ಟು ಲಿಂಗಾಯತರು ಆಚಾರ ಹೇಳೊದರಲ್ಲಿ ಹೀರೊ, ಆಚರಣೆಯಲ್ಲಿ ಜಿರೋ. ಆದರೆ ಲಿಂಗೈಕ್ಯ ಮಹಾಂತ ಶ್ರೀಗಳು ಬಸವತತ್ವ ಆಚರಣೆಯಲ್ಲಿ ನಾಡಿನಲ್ಲಿಯೇ ದೊಡ್ಡ ಹೀರೋ’ ಎಂದು ಶ್ಲಾಘಿಸಿದರು.

‘ಗುರುತಾಯಿ’ ಎನ್ನುವ ಶಬ್ದ ಇದೆ. ಅಂದರೆ ಗುರುವೇ ಶಿಷ್ಯನಿಗೆ ತಾಯಿ ಸ್ವರೂಪಿ. ಆದರೆ ಈ ಮಠದಲ್ಲಿ ಶಿಷ್ಯ ಗುರುಮಹಾಂತರು ವೃದ್ಯಾಪ್ಯದಲ್ಲಿ ಗುರುವನ್ನು ಮಗುವಿನಂತೆ ಪೋಷಿಸಿ ತಾಯಿಯಾದರು. ಮಹಾಂತಪ್ಪಗಳು ಕೂಸಾಗಿದ್ದರು. ನಾಡಿನ ಶ್ರೇಷ್ಠ ಗುರು ಶಿಷ್ಯ ಪರಂಪರೆಯಲ್ಲಿ ಈ ಜೋಡಿಯೂ ದಾಖಲಾಯಿತು. ಬಸವತತ್ವ ಪ್ರಸಾರಕ್ಕಾಗಿ ಲಂಡನ್‌ಗೆ ಹೋದಾಗ ಮಹಾಂತ ಜೋಳಿಗೆಗೆ ಡಾಲರ್ ಹಾಕಲು ಮುಂದಾದ ಮಹಿಳೆಗೆ ಹಣ ಬೇಡ ತಾಯಿ ದುಶ್ಚಟ ಇದ್ದರೇ ಹಾಕು ಎಂದಿದ್ದರು ಮಹಾಂತ ಶ್ರೀಗಳು’ ಎಂದು ಗದುಗಿನ ಶ್ರೀಗಳು ಹೇಳಿದರು.

ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರು ಮಾತನಾಡಿ, ‘25 ವರ್ಷಗಳ ಹಿಂದೆ ಬೀದರ್‌ನಲ್ಲಿ ನಡೆದ ರಾಷ್ಟ್ರೀಯ ಬಸವ ತತ್ವ ಸಮಾವೇಶದಲ್ಲಿ ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್ ಹಾಕಿದ ಸವಾಲನ್ನು ಸ್ವೀಕರಿಸಿ, ಲಿಂಗಾಯತ ಮಠಗಳಿಗೆ ಲಂಬಾಣಿ ಮತ್ತು ದಲಿತರನ್ನು ಸ್ವಾಮಿಗಳನ್ನಾಗಿ ಮಾಡಿ ಬಸವತತ್ವವನ್ನು ಪಾಲಿಸಿದವರು ಮಹಾಂತಶ್ರೀಗಳು ಮಾತ್ರ’ ಎಂದು ಹೇಳಿದರು.

ಗೋವಿಂದ ಕಾರಜೋಳ ಮಾತನಾಡಿ, 'ಇಳಕಲ್ ಶ್ರೀಗಳು ಬಸವಣ್ಣನವರ ವಾರಸುದಾರರು. ಅವರು ಬಸವತತ್ವದ ಅನುಷ್ಠಾನಕ್ಕಾಗಿ ಮಾಡಿದ ಕೆಲಸಗಳಿಂದ ಇತಿಹಾಸದ ಪುಟಗಳಲ್ಲಿ ಉಲ್ಲೇಖನೀಯರಾಗಿ ಉಳಿಯಲಿದ್ದಾರೆ. ಬಸವ ತಂದೆ ಬಯಸಿದ ವರ್ಗ, ವರ್ಣ ರಹಿತ, ಶೋಷಣೆ ಮುಕ್ತ ಸಮಾಜ ಕಟ್ಟಲು ನಿರಂತರವಾಗಿ ಹೋರಾಟ ಮಾಡಿದರು. ಬಸವತತ್ವದ ಅನುಷ್ಠಾನಕ್ಕಾಗಿ ಹಪಾಹಪಿಸಿದರು. ಇಡೀ ನಾಡಿಗೆ ಮಾದರಿಯಾಗುವ ಪರಂಪರೆಯನ್ನು ಇಳಕಲ್ ಶ್ರೀಗಳು ಕಟ್ಟಿಕೊಟ್ಟಿದ್ದಾರೆ. ಗುರುಮಹಾಂತ ಶ್ರೀಗಳ ಮಾರ್ಗದರ್ಶನದಲ್ಲಿ ಬಸವಣ್ಣನವರ ತತ್ವದಂತೆ ನಡೆದು ಹಿರಿಯ ಶ್ರೀಗಳಿಗೆ ಗೌರವ ಸಲ್ಲಿಸೋಣ’ ಎಂದರು.

ಎಂ.ಬಿ. ಪಾಟೀಲ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆದಿರುವ ಹೋರಾಟದಲ್ಲಿ ಗಟ್ಟಿಯಾಗಿ ನಿಲ್ಲಬೇಕು ಎಂದು ಬಸವರಾಜ ಹೊರಟ್ಟಿ ಅವರಿಗೆ ಹಾಗೂ ನನಗೆ ಮಾರ್ಗದರ್ಶನ ಮಾಡಿದ್ದರು. ಸರ್ಕಾರ ನಿರ್ಣಯ ಮಾಡಿದಾಗ ಖುಷಿಪಟ್ಟಿದ್ದರು. ಅವರು ನೀಡಿದ ಮಹಾಂತ ಜೋಳಿಗೆ ಶ್ರೇಷ್ಠವಾದ ಪರಿಕಲ್ಪನೆ. ಅವರ ಕನಸನ್ನು ನನಸಾಗಿಸಲು ಅನುಯಾಯಿಗಳಾದ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ’ ಎಂದರು. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು, ಜಮಖಂಡಿ ಓಲೇಮಠದ ಶ್ರೀಗಳು, ಹುಲಸೂರಿನ ಶಿವಾನಂದ ಶ್ರೀಗಳು, ಪಾಂಡೋಮಟ್ಟಿಯ ಗುರುಬಸವ ಶ್ರೀಗಳು, ಕಲುಬುರ್ಗಿ ಸುಲಫಲ ಮಠದ ಸಾರಂಗಧರ ಶಿವಾಚಾರ್ಯರು, ಸಂಸದ ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ದೊಡ್ಡನಗೌಡ ಪಾಟೀಲ, ಡಿ.ಎಸ್. ಹೂಲಗೇರಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನುಡಿನಮನ ಸಲ್ಲಿಸಿದರು.

ಬೆಳಗಾವಿಯ ನಾಗನೂರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ರೆಡ್ಡಿ ಪೀಠದ ವೇಮನಾನಂದ ಸ್ವಾಮೀಜಿ, ಮುಂಡರಗಿಯ ನಿಜಗುಣ ಪ್ರಭು ಸ್ವಾಮೀಜಿ ಸೇರಿದಂತೆ ನೂರಾರು ಸ್ವಾಮಿಜಿಗಳು, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕರಾದ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.

ಗೊಂದಲ, ಗದ್ದಲ...ತಡವಾಗಿ ಬಂದ ಬಿಎಸ್‌ವೈ

ಯಡಿಯೂರಪ್ಪ ಅಂತ್ಯಕ್ರಿಯೆಗೆ ಬರುವುದು ವಿಳಂಬವಾಯಿತು. ಈ ವೇಳೆ ಕಲಬುರ್ಗಿಯ ಸುಲಫಲ ಮಠದ ಸಾರಂಗಧರ ಶಿವಾಚಾರ್ಯರು ‘ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಕಾಯಬಾರದು. ಅಂತ್ಯಸಂಸ್ಕಾರದ ಪ್ರಕ್ರಿಯೆ ಆರಂಭಿಸಬೇಕು’ ಎಂದು ಮೈಕ್ ಹಿಡಿದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕಾಶಪ್ಪನವರ ವೇದಿಕೆಯಿಂದ ಇಳಿದು ಪಾರ್ಥಿವ ಶರೀರದತ್ತ ನಡೆದರು. ಯಡಿಯೂರಪ್ಪ ಆಗಮಿಸುವ ಮುಂಚೆಯೇ ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ ಎಂದು ತಿಳಿದ ವೇದಿಕೆ ಮುಂದಿನ ಗುಂಪು ಸುಲಫಲ ಮಠದ ಶ್ರೀಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ಮೇಲಿದ್ದ ಗುರುಮಹಾಂತರು, ಚಿತ್ರದುರ್ಗ ಶರಣರು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಸಾಕಷ್ಟು ಮನವಿ ಮಾಡಿಕೊಂಡ ನಂತರ ಗದ್ದಲ ನಿಂತಿತು. ಮುಂದಿನ 15 ನಿಮಿಷಗಳಲ್ಲಿ ಯಡಿಯೂರಪ್ಪ ಬಂದರು. ಪೂಜ್ಯರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸಿದರು.

ಕೊನೆಯಲ್ಲಿ ಗುರು ಮಹಾಂತ ಶ್ರೀಗಳು ’ಅಜ್ಜರು ಲಿಂಗೈಕ್ಯರಾಗಿ 60 ಗಂಟೆಯಾಗಿದೆ. ಶರೀರ ಸೋರುತ್ತಿದೆ, ಅದಕ್ಕಾಗಿ ಅವಸರ ಮಾಡಿದ್ದಾರೆ. ಯಾರೂ ತಪ್ಪು ತಿಳಿಯಬಾರದು’ ಎಂದು ಮನವಿ ಮಾಡಿದರು. ತಡವಾಗಿ ಬಂದ ಕಾರಣ ಯಡಿಯೂರಪ್ಪ ನೆರೆದವರ ಕ್ಷಮೆ ಯಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry