ನಿರ್ವಹಣೆ ಕಾಣದ ಉದ್ಯಾನ

4
ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರಾಸಕ್ತಿ: ಸ್ಥಳೀಯರ ಆರೋಪ

ನಿರ್ವಹಣೆ ಕಾಣದ ಉದ್ಯಾನ

Published:
Updated:
ನಿರ್ವಹಣೆ ಕಾಣದ ಉದ್ಯಾನ

ಹಿರಿಯೂರು: ಪಟ್ಟಣದಲ್ಲಿ ಉದ್ಯಾನಗಳಿಗೆಂದು ಸಾಕಷ್ಟು ಜಾಗವನ್ನು ಮೀಸಲಿಟ್ಟಿದ್ದರೂ ಬೆರಳೆಣಿಕೆಯಷ್ಟು ಉದ್ಯಾನಗಳಿವೆ. ಖಾಲಿ ಜಾಗಗಳ ಸಮರ್ಪಕ ಉಪಯೋಗವಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

10–12 ವರ್ಷದಿಂದ ಈಚೆಗೆ ಪಟ್ಟಣದಲ್ಲಿ ಏನಿಲ್ಲವೆಂದರೂ 25ಕ್ಕೂ ಹೆಚ್ಚು ಹೊಸ ಬಡಾವಣೆಗಳಾಗಿವೆ. ನೂತನ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಸ್ವಲ್ಪ ಸ್ಥಳವನ್ನೂ ಬಿಡಲಾಗಿದೆ. ಬಡಾವಣೆ ಮಾಲೀಕರು ನಗರಸಭೆಯಲ್ಲಿ ಖಾತೆ ಮಾಡಿಸುವ ಮೊದಲು ರಸ್ತೆ, ಚರಂಡಿ ನಿರ್ಮಿಸಿ, ರಸ್ತೆ ಬದಿಯಲ್ಲಿ ಗಿಡ ನೆಟ್ಟು, ಉದ್ಯಾನಕ್ಕೆ ಮೀಸಲಿಟ್ಟ ಪ್ರದೇಶವನ್ನು ಅಭಿವೃದ್ಧಿಪಡಿಸಿಕೊಡಬೇಕೆಂಬ ನಿಯಮವಿದೆ. ಆದರೆ ಇಂತಹ ನಿಯಮಗಳು ನಗರಸಭೆಯ ಕಡತಗಳಲ್ಲಿ ಮಾತ್ರ ಉಳಿದಿವೆ ಎಂದು ಸಾರ್ವಜನಿಕರು ದೂರುತ್ತಾರೆ.

‘ನೆಹರೂ ಮೈದಾನದ ಅಂಚಿನಲ್ಲಿ ಹಳೆಯ ಉದ್ಯಾನವೊಂದಿದ್ದು, ಉದ್ಯಾನದ ಅಂಚಿಗೆ ನೆಟ್ಟಿದ್ದ ಗಿಡಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ನಗರಸಭೆಯ ಅಧಿಕಾರಿಗಳು ಉದ್ಯಾನಕ್ಕೆ ತಂತಿಬೇಲಿ ಅಳವಡಿಸಿ, ಮೂರು, ನಾಲ್ಕು ಕಲ್ಲು ಬೆಂಚುಗಳನ್ನು ಹಾಕಿದ್ದು, ಬಿಟ್ಟರೆ ಅದರ ನಿರ್ವಹಣೆಯತ್ತ ಗಮನಹರಿಸುತ್ತಿಲ್ಲ. ಇದರಿಂದ ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ’ ಎಂದು ಕುವೆಂಪು ಬಡಾವಣೆಯ ನಿವೃತ್ತ ಪ್ರಾಂಶುಪಾಲ ವೀರಭದ್ರಯ್ಯ ಹೇಳುತ್ತಾರೆ.

‘ಕುವೆಂಪು ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಹಾಳು ಕೊಂಪೆಯಂತಾಗಿತ್ತು. ಆರು ವರ್ಷದ ಹಿಂದೆ ಅಲ್ಲಿನ ನಿವಾಸಿಗಳು ಸಭೆ ನಡೆಸಿ, ಒಂದಿಷ್ಟು ಹಣ ಕೂಡಿಸಿ ಉದ್ಯಾನದ ಅಭಿವೃದ್ಧಿಗೆ ಮುಂದಾದರು. ಕೆಲವೇ ತಿಂಗಳಲ್ಲಿ ಸುಂದರವಾದ ಉದ್ಯಾನ ರೂಪುಗೊಂಡಿತು. ನಂತರ ನಗರಸಭೆಯವರು ತಂತಿಬೇಲಿ ಅಳವಡಿಸಿ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿದ ಕಾರಣ ಇಡೀ ಜಾಗ ಹಸಿರಿನಿಂದ ಕಂಗೊಳಿಸುತ್ತಿದೆ. ನಾಗರಿಕರು ನಗರಸಭೆ ಜತೆ ಕೈಜೋಡಿಸಿದಲ್ಲಿ ಉದ್ಯಾನಗಳ ಪಟ್ಟಣವನ್ನಾಗಿಸಬಹುದು’ ಎಂದು ಅವರು ಹೇಳುತ್ತಾರೆ.

‘ಆಯಾ ಬಡಾವಣೆಗಳಲ್ಲಿ ವಾಸಿಸುವವರು, ನಗರಸಭೆ ಮುಂದಾದರೆ ಅವಧಾನಿ ಬಡಾವಣೆ, ಶ್ರೀನಿವಾಸ ಬಡಾವಣೆ, ಆನಂದನಗರ, ಎಲ್ಐಸಿ ಬಡಾವಣೆ, ಜೋಸೆಫ್ ಬಡಾವಣೆ, ಜಯನಗರ, ಬಸವೇಶ್ವರನಗರ, ಬಿಲ್ಲಾಲ್ ನಗರ, ಸ್ವಾಮಿ ವಿವೇಕಾನಂದ ಬಡಾವಣೆ ಸೇರಿದಂತೆ ಹತ್ತಾರು ಕಡೆ ಸುಂದರ ಉದ್ಯಾನಗಳನ್ನು ಬೆಳೆಸಲು ಸಾಧ್ಯವಿದೆ’ ಎಂಬುದು ಅವರ ಅಭಿಪ್ರಾಯ.

2018–19 ನೇ ಸಾಲಿನ ನಗರಸಭೆಯ ಬಜೆಟ್‌ನಲ್ಲಿ ಉದ್ಯಾನಗಳ ನಿರ್ವಹಣೆಗೆ ಪ್ರತ್ಯೇಕ ಹಣವನ್ನು ಮೀಸಲಿರಿಸಿದ್ದೇವೆ. ಹೊಸದಾಗಿ ಬಡಾವಣೆ ನಿರ್ಮಿಸುವವರು ನಿಯಮಾನುಸಾರ ಅಭಿವೃದ್ಧಿ ಪಡಿಸುವಂತೆ ತಾಕೀತು ಮಾಡಿದ್ದೇವೆ. ಪುರಸಭೆ ಇದ್ದ ಹಿರಿಯೂರು ನಗರಸಭೆ ಆಗಿದೆ. ಆದರೆ ಸಿಬ್ಬಂದಿ ಮಾತ್ರ ಹೆಚ್ಚಿಲ್ಲ. ಹೀಗಾಗಿ ಸಿಬ್ಬಂದಿಯ ಕೊರತೆ ಇದೆ. ತಂತಿ ಬೇಲಿ ಹಾಕಿ, ಗಿಡ ನೆಟ್ಟು ಬಿಟ್ಟರೆ ಆಗದು. ಅದರ ನಿರ್ವಹಣೆಯನ್ನು ಸಮರ್ಪಕ ರೀತಿಯಲ್ಲಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾಗರಿಕರ ಸಹಕಾರ ಅತ್ಯಗತ್ಯ. ಶೀಘ್ರ ನಾಗರಿಕರ ಸಭೆ ನಡೆಸಿ ಶಾಶ್ವತ ಪರಿಹಾರ ರೂಪಿಸುತ್ತೇವೆ

– ರಮೇಶ್ ಎಸ್. ಸುಣಗಾರ್, ನಗರಸಭೆ ಆಯುಕ್ತ

– ಸುವರ್ಣಾ ಬಸವರಾಜ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry