4
ಗದಗ, ಬಳ್ಳಾರಿ ಜಿಲ್ಲೆಯಲ್ಲಿ ಆಲಿಕಲ್ಲು ಮಳೆ: 60ಕ್ಕೂ ಹೆಚ್ಚು ಮನೆಗಳಿಗೆ ಹಾನಿ-–ಸಂಚಾರಕ್ಕೆ ಅಡ್ಡಿ

ಮರ ಬಿದ್ದು ಯುವತಿ, ಸಿಡಿಲು ಬಡಿದು ವ್ಯಕ್ತಿ ಸಾವು

Published:
Updated:
ಮರ ಬಿದ್ದು ಯುವತಿ, ಸಿಡಿಲು ಬಡಿದು ವ್ಯಕ್ತಿ ಸಾವು

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಮೈಸೂರು ನಗರದಲ್ಲಿ ಮರ ಬಿದ್ದು ಯುವತಿ ಹಾಗೂ ಹೊಸದುರ್ಗ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿದ್ದಾರೆ.

ಮೈಸೂರು ನಗರದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಆಟೊ ಮೇಲೆ ಮರ ಉರುಳಿ ಬಿದ್ದು ಚೆನ್ನೈನ ಸಾಫ್ಟ್‌ವೇರ್‌ ಎಂಜಿನಿಯರ್‌ ರೇವತಿ (25) ಮೃತಪಟ್ಟಿದ್ದಾರೆ. ಅವರ ಗೆಳತಿ ವಾಸವಿ ಗುಪ್ತಾ ಹಾಗೂ ಆಟೊ ಚಾಲಕ ಬಿ.ಟಿ.ರಾಜಣ್ಣ ಗಾಯಗೊಂಡಿದ್ದಾರೆ.

ವಾಸವಿ ಜೊತೆಗೆ ಆಟೊದಲ್ಲಿ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕೆಆರ್‌ಎಸ್ ರಸ್ತೆಯ ಇಎಸ್‌ಐ ಆಸ್ಪತ್ರೆ ಮುಂಭಾಗ ಈ ಘಟನೆ ನಡೆದಿದೆ. ವಾಸವಿ ಅವರ ತಲೆಗೆ ಪೆಟ್ಟು ಬಿದ್ದಿದೆ. ಪ್ರಾಜೆಕ್ಟ್‌ ಕೆಲಸದ ಮೇಲೆ ರೇವತಿ ಮೈಸೂರಿನ ಇನ್ಫೊಸಿಸ್‌ಗೆ ಬಂದಿದ್ದರು.

ಚೆನ್ನೈನಲ್ಲಿರುವ ಇನ್ಫೊಸಿಸ್‌ ಕಚೇರಿಯಲ್ಲಿ ಬುಧವಾರ ಉದ್ಯೋಗಕ್ಕೆ ಸೇರಬೇಕಿತ್ತು. ಕೆಲ ತಿಂಗಳ ಹಿಂದೆ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು.

ಹೊಸದುರ್ಗ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ತಿಪ್ಪೇಶ್‌ (40) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಅವರು ರಾತ್ರಿ 9.30ರ ಸುಮಾರಿನಲ್ಲಿ ಬಹಿರ್ದೆಸೆಗೆಂದು ಊರ ಹೊರಗೆ ಹೋದ ಸಂದರ್ಭದಲ್ಲಿ ಸಿಡಲು ಬಡಿದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಮತ್ತು ಕುಂದಗೋಳ ತಾಲ್ಲೂಕಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಂಗಳವಾರ ಸಂಜೆ ಗುಡುಗು–ಸಿಡಿಲು, ಬಿರುಗಾಳಿ ಸಹಿತ ಬಿರುಸಿನ ಮಳೆಯಾಗಿದೆ.

ಹುಬ್ಬಳ್ಳಿಯ ವಿದ್ಯಾನಗರ, ಹೊಸೂರು ಪ್ರದೇಶಗಳ ಕೆಲ ಅಂಗಡಿಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದರಿಂದ ಇಲ್ಲಿನ ನಿವಾಸಿಗಳು ಪರದಾಡಿದರು. ಹಲವೆಡೆ ವಿದ್ಯುತ್‌ ಕಂಬಗಳು, ಮರಗಳು ಬಿದ್ದಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು.

ಗದಗ, ಬಳ್ಳಾರಿ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 60ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೊಜನೂರ ಗ್ರಾಮವೊಂದರಲ್ಲಿಯೇ 45 ಮನೆಗಳು ಜಖಂಗೊಂಡಿವೆ. ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿದ್ದರಿಂದ ಮನೆಯ ಚಾವಣಿಗೆ ಹೊದಿಸಿದ ಸಿಮೆಂಟ್‌ ಶೀಟ್‌ಗಳು ಪುಡಿಪುಡಿಯಾಗಿವೆ. ಇನ್ನು ಕೆಲವೆಡೆ ತಗಡಿನ ಶೀಟ್‌ಗಳು ಹಾರಿಹೋಗಿ ಮನೆಯೊಳಗೆ ನೀರು ನುಗ್ಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಐದು ಮನೆಗಳಿಗೆ ಹಾನಿಯಾಗಿದ್ದು, 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ತಾಲ್ಲೂಕಿನ ಜಿ.ನಾಗಲಾಪುರ, ಗೊಲ್ಲರಹಳ್ಳಿ, ಡಣನಾಯಕನಕೆರೆ ಹಾಗೂ ತಿಮ್ಮಲಾಪುರ ಗ್ರಾಮಗಳ ಗೋಕಟ್ಟೆಗಳು ಭರ್ತಿಯಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ಸರಾಸರಿ 27 ಮಿಲಿ ಮೀಟರ್‌ ಮಳೆಯಾಗಿದ್ದು, ಗುಡುಗು ಸಿಡಿಲಿನೊಂದಿಗೆ ಅಬ್ಬರಿಸಿದ ವರ್ಷಧಾರೆ ಹಲವೆಡೆ ಹಾನಿಯನ್ನೂ ಉಂಟುಮಾಡಿತು. ಸುಮಾರು 670 ಎಕರೆ ಭತ್ತ, 7 ಎಕರೆ ಬಾಳೆ ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಹಾಗೂ ರಿಪ್ಪನ್‌ಪೇಟೆಗಳಲ್ಲಿ ಸುರಿದ ಮಳೆ ಗಾಳಿಗೆ ಮನೆ ಹಾಗೂ ಕಾರುಗಳಿಗೆ  ಹಾನಿಯಾಗಿದೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಲವೆಡೆ ಸೋಮವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಕಲ್ಲೂರು ರೋಡ್‌ನ ರವಿಕುಮಾರ ಜೊನ್ನಲ್‌ ಅವರ ತೋಟದಲ್ಲಿನ ನೂರಾರು ಬಾಳೆ ಗಿಡಗಳು ನೆಲಕ್ಕುರುಳಿವೆ.

ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಗಿಡಗಳು ಬಿರುಗಾಳಿಗೆ ತುತ್ತಾಗಿದ್ದರಿಂದ ಅಪಾರ ಹಾನಿ ಉಂಟಾಗಿದೆ. ತಾಲ್ಲೂಕಿನಾದ್ಯಂತ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.

ಗಾಯಾಳು ಸಾವು: ಸೇಡಂ ಪಟ್ಟಣದ ಮಹಾರಾಜ ಹೋಟೆಲ್ ಬಳಿ ಗೋಡೆ ಕುಸಿದು ಬಿದ್ದು ತೀವ್ರ ಗಾಯಗೊಂಡಿದ್ದ ಶರಣಪ್ಪ (50) ಚಿಕಿತ್ಸೆಗೆ ಸ್ಪಂದಿಸದೆ ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಮೃತಪಟ್ಟರು. ಇನ್ನುಳಿದ ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಸೇರಿದಂತೆ ವಿವಿಧೆಡೆ ಸೋಮವಾರ ರಾತ್ರಿ ಸತತ ಒಂದು ಗಂಟೆ ಮಳೆ ಸುರಿಯಿತು. ಕೆಲಕಾಲ ಆಲಿಕಲ್ಲು ಮಳೆಯೂ ಸುರಿಯಿತು. ಚರಂಡಿ ನೀರು ಮನೆಯೊಳಗೆ ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು.

**

ಹೊನ್ನಾಳಿಯಲ್ಲಿ 6 ಸೆಂ.ಮೀ ಮಳೆ

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಉಡುಪಿಯಲ್ಲಿ 6 ಸೆಂ.ಮೀ, ಹಾವೇರಿ, ಹೆಸರಘಟ್ಟ, ಮಧುಗಿರಿಯಲ್ಲಿ 5, ಚಿಂಚೋಳಿ, ಮಂಡ್ಯ, ತುಮಕೂರಿನಲ್ಲಿ 4, ತ್ಯಾಗರ್ತಿ, ಹಾವೇರಿಯಲ್ಲಿ 3, ಗದಗ, ಹುನಗುಂದ, ಆಗುಂಬೆ, ಶಿವಮೊಗ್ಗ, ಹುಂಚದಕಟ್ಟೆ, ಅರಸೀಕೆರೆಯಲ್ಲಿ 2, ಆನವಟ್ಟಿ, ಚಿತ್ರದುರ್ಗ, ವಿಜಯಪುರ, ಮಾಲೂರು, ಬೆಂಗಳೂರಿನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಕಲಬುರ್ಗಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry