ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದವರು ಕ್ವಾಲಿಫೈಯರ್‌ಗೆ

ಕೆಕೆಆರ್‌–ರಾಯಲ್ಸ್‌ ಹಣಾಹಣಿ; ಕರ್ನಾಟಕದ ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ
Last Updated 22 ಮೇ 2018, 20:16 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಈಡನ್ ಗಾರ್ಡನ್‌ನಲ್ಲಿ ಬುಧವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ನಾಲ್ವರು ಕನ್ನಡಿಗರು ಕ್ರಿಕೆಟ್ ಪ್ರೇಮಿಗಳ ಕೇಂದ್ರಬಿಂದುವಾಗಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿರುವ ಮುಧ್ಯಮವೇಗಿ ಪ್ರಸಿದ್ಧ ಕೃಷ್ಣ, ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ, ರಾಜಸ್ಥಾನ್ ರಾಯಲ್ಸ್‌ ತಂಡದ ’ಸ್ಪಿನ್ ಜೋಡಿ’ ಶ್ರೇಯಸ್ ಗೋಪಾಲ್ ಮತ್ತು  ಕೃಷ್ಣಪ್ಪ ಗೌತಮ್ ಅವರೇ ಆ ಕ್ರಿಕೆಟಿಗರು.

ಲೀಗ್ ಹಂತದ ಮಹತ್ವದ ಪಂದ್ಯದಲ್ಲಿ ಮಿಂಚಿದ್ದ ಪ್ರಸಿದ್ಧ ಕೃಷ್ಣ ಸನ್‌ರೈಸರ್ಸ್‌ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ್ದರು. ಅದೇ ಪಂದ್ಯದಲ್ಲಿ 45 ರನ್ ಸಿಡಿಸಿದ್ದ ರಾಬಿನ್ ಮಹತ್ವದ ಕಾಣಿಕೆ ನೀಡಿದ್ದರು.

ರಾಜಸ್ಥಾನ್ ರಾಯಲ್ಸ್‌ ತಂಡವು ಪ್ಲೇ ಆಫ್‌ ಹಂತ ಪ್ರವೇಶಿಸಲು ಲೆಗ್‌ಸ್ಪಿನ್ನರ್ ಶ್ರೇಯಸ್ ಮತ್ತು ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ಆಟ ಕಾರಣವಾಗಿತ್ತು. ಗೆಲ್ಲಲೇಬೇಕಾಗಿದ್ದ ಕೊನೆಯ ಪಂದ್ಯದಲ್ಲಿ ಶ್ರೇಯಸ್ ನಾಲ್ಕು ವಿಕೆಟ್ ಪಡೆದಿದ್ದರು.

ಇದೀಗ ಎರಡನೇ ಕ್ವಾಲಿಫೈಯರ್ ಪ್ರವೇಶಿಸಲು ಇವರು ತಮ್ಮ ತಂಡಗಳಿಗೆ ಏನು ಕಾಣಿಕೆ ನೀಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.

ಕೆಕೆಆರ್‌ಗೆ ತವರಿನ ಅಂಗಳ: ತಮಿಳುನಾಡಿನ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್  ನಾಯಕತ್ವದ ಕೆಕೆಆರ್ ತಂಡವು ಲೀಗ್ ಹಂತದಲ್ಲಿ ಮೂರನೇ ಸ್ಥಾನ ಪಡೆದಿತ್ತು. ತವರಿನ ಅಂಗಳದಲ್ಲಿ ಆಡುವ ಅವಕಾಶ ಗಿಟ್ಟಿಸಿದೆ. ಈ ಪಂದ್ಯದಲ್ಲಿ ಗೆದ್ದವರು 25ರಂದು ಇಲ್ಲಿಯೇ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ಎದುರು ಆಡಲಿದ್ದಾರೆ. ಸೋತವರು ನಿರ್ಗಮಿಸಲಿದ್ದಾರೆ. ತಂಡದ ಆಲ್‌ರೌಂಡರ್ ಸುನಿಲ್ ನಾರಾಯಣ್, ಯುವ ಆಟಗಾರ ಶುಭಮನ್ ಗಿಲ್, ದಿನೇಶ್, ರಾಬಿನ್ ಅವರು ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್‌ನಲ್ಲಿಯೂ ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ ತಮ್ಮ ತಂಡಕ್ಕೆ ಜಯದ ಕಾಣಿಕೆ ನೀಡಬಲ್ಲ ಸಮರ್ಥರು.

ರಾಜಸ್ಥಾನ್ ತಂಡವೂ ಪ್ರಶಸ್ತಿ ಗೆದ್ದು ಒಂದು ದಶಕವೇ ಕಳೆದುಹೋಗಿದೆ. ಮೊದಲ ಆವೃತ್ತಿಯಲ್ಲಿ ತಂಡವು ಚಾಂಪಿಯನ್ ಆಗಿತ್ತು. ಅದರ ನಂತರ ಹಲವು ಏಳುಬೀಳುಗಳನ್ನು ಕಂಡಿದೆ. 2013ರ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ತಂಡವು ಎರಡು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿತ್ತು. ಇದೇ ವರ್ಷ ಕಣಕ್ಕೆ ಮರಳಿದೆ.

ಇಡೀ ಟೂರ್ನಿಯಲ್ಲಿ ಅಜಿಂಕ್ಯ ಬಳಗವು ಸ್ಥಿರವಾಗಿ ಆಡಿಲ್ಲ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಹೆಚ್ಚು ವೈಫಲ್ಯ ಅನುಭವಿಸಿದೆ. ಉತ್ತಮವಾಗಿ ಆಡಿದ್ದ ಜೋಸ್ ಬಟ್ಲರ್ ಇಂಗ್ಲೆಂಡ್‌ಗೆ ಮರಳಿದ್ದಾರೆ. ಅದರಿಂದಾಗಿ ಅಜಿಂಕ್ಯ, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಶಾರ್ಟ್‌ ಅವರ ಮೇಲೆ ಬ್ಯಾಟಿಂಗ್ ವಿಭಾಗದ ಹೊಣೆ ಇದೆ. ಬೌಲಿಂಗ್‌ ವಿಭಾಗದಲ್ಲಿ ಜೋಫ್ರಾ ಆರ್ಚರ್, ಗೌತಮ್, ಶ್ರೇಯಸ್, ಈಶ್ ಸೋಧಿ ಮತ್ತು ಶ್ರೇಯಸ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರಾಗಿದ್ದಾರೆ. ‘ಸ್ಪರ್ಧಾತ್ಮಕ ಪಿಚ್‌’ನಲ್ಲಿ  ಗೆಲುವಿನ ದಾಖಲೆ ಬರೆಯಲು  ಎರಡೂ ತಂಡಗಳು ತುದಿಗಾಲಿನಲ್ಲಿ ನಿಂತಿರುವುದು ಕುತೂಹಲ ಕೆರಳಿಸಿದೆ.

ತಂಡಗಳು:

ಕೋಲ್ಕತ್ತ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್ (ನಾಯಕ), ಸುನಿಲ್ ನಾರಾಯಣ, ಆಂಡ್ರೆ ರಸೆಲ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ, ನಿತೀಶ್ ರಾಣಾ, ಪ್ರಸಿದ್ಧ ಕೃಷ್ಣ, ಶಿವಂ ಮಾವಿ, ಮಿಷೆಲ್ ಜಾನ್ಸನ್, ಶುಭಮನ್ ಗಿಲ್, ಆರ್. ವಿನಯಕುಮಾರ್, ರಿಂಕುಸಿಂಗ್, ಕ್ಯಾಮೆರಾನ್ ಡೆಲ್‌ಪೋರ್ಟ್, ಜೇವನ್ ಸೀರ್‌ಲೆಸ್‌, ಅಪೂರ್ವ ವಾಂಖೆಡೆ, ಇಶಾಂಕ್ ಜಗ್ಗಿ, ಟಾಮ್ ಕುರ್ರನ್.

ರಾಜಸ್ಥಾನ್ ರಾಯಲ್ಸ್: ಅಜಿಂಕ್ಯ ರಹಾನೆ (ನಾಯಕ), ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಡಿ ಆರ್ಚಿ ಶಾರ್ಟ್, ಕೃಷ್ಣಪ್ಪ ಗೌತಮ್, ಜೋಫ್ರಾ ಆರ್ಚರ್, ಧವಳ್ ಕುಲಕರ್ಣಿ, ಜಯದೇವ್ ಉನದ್ಕತ್, ಅಂಕಿತ್ ಶರ್ಮಾ, ಅನುರೀತ್ ಸಿಂಗ್, ಶ್ರೇಯಸ್ ಗೋಪಾಲ್, ಪ್ರಶಾಂತ್ ಚೋಪ್ರಾ, ಸುದೇಶ್ಣ್ ಮಿಥುನ್, ಬೆನ್ ಲಾಫ್ಲಿನ್, ಮಹಿಪಾಲ್ ಲೊಮರೊರ್, ಆರ್ಯಮನ್ ಬಿರ್ಲಾ, ಜತಿನ್ ಸಕ್ಸೆನಾ, ದುಷ್ಮಂತಾ ಚಾಮೀರಾ,  ಹೇನ್ರಿಚ್ ಕ್ಲಾಸನ್, ಈಶ್ ಸೋಧಿ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ಐಪಿಎಲ್‌ನಲ್ಲಿ ಉಭಯ ತಂಡಗಳ ಬಲಾಬಲ

ಕೆಕೆಆರ್
ಪಂದ್ಯಗಳು: 166
ಜಯ: 85
ಸೋಲು: 75
ಟೈ: 02
ರದ್ದು: 04

ಆರ್‌ಆರ್‌

ಪಂದ್ಯಗಳು: 116
ಜಯ: 59
ಸೋಲು:53
ಟೈ: 02
ರದ್ದು: 02


ಪಟ್ಟಿ 2
ಉಭಯ ತಂಡಗಳ ಮುಖಾಮುಖಿ
ಪಂದ್ಯಗಳು: 15
ಕೆಕಾರ್‌ಗೆ ಜಯ: 06
ಆರ್‌ಆರ್‌ಗೆ ಜಯ: 07
ಟೈ: 02

ಪಟ್ಟಿ 3

2018ರಲ್ಲಿ ಎರಡೂ ತಂಡಗಳ ಸಾಧನೆ

ತಂಡ;ಪಂದ್ಯ;ಜಯ;ಸೋಲು

ಕೆಕೆಆರ್;14;08;06

ಆರ್‌ಆರ್‌;14;07;07

ಪಟ್ಟಿ 4

ನಾಯಕರ ಬಲಾಬಲ

ದಿನೇಶ್ ಕಾರ್ತಿಕ್ (ಕೆಕೆಆರ್)

ಪಂದ್ಯ; 14

ಅಜೇಯ: 06

ರನ್; 438

ಶ್ರೇಷ್ಠ; 50

ಸ್ಟ್ರೈಕ್‌ರೇಟ್; 149.48

ಅರ್ಧಶತಕ: 01

ಬೌಂಡರಿ;44

ಸಿಕ್ಸರ್: 14


ಅಜಿಂಕ್ಯ ರಹಾನೆ (ಆರ್‌ಆರ್)

ಪಂದ್ಯ: 14

ಅಜೇಯ: 01

ರನ್: 324

ಶ್ರೇಷ್ಠ; 65*

ಸ್ಟ್ರೈಕ್‌ರೇಟ್: 119.11

ಅರ್ಧಶತಕ; 01

ಬೌಂಡರಿ; 35

ಸಿಕ್ಸರ್; 04

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT