ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಕ್‌, ಅಪೂರ್ವಾ ಸೆಮಿಗೆ

50ಕೆ ಟೆನಿಸ್‌ ಟೂರ್ನಿ: ಎಡವಿದ ಶಾಹುಲ್‌ ಅನ್ವರ್‌, ಖುಷಿ
Last Updated 23 ಮೇ 2018, 19:22 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಎರಡನೇ ಶ್ರೇಯಾಂಕದ ಆಟಗಾರ ಅಲೋಕ್‌ ಆರಾಧ್ಯ 7–5, 7–5ರಲ್ಲಿ ಮಹಾರಾಷ್ಟ್ರದ ಕೈವಲ್ಯ ವಾಮನ್‌ರಾವ್‌ ಅವರನ್ನು ಮಣಿ
ಸುವ ಮೂಲಕ ಬುಧವಾರ ಪುರುಷರ 50ಕೆ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಶ್ರಯದಲ್ಲಿ ಜಿಲ್ಲಾ ಟೆನಿಸ್‌ ಸಂಸ್ಥೆ ಹಮ್ಮಿಕೊಂಡಿರುವ ಟೂರ್ನಿಯ ಮೂರನೇ ದಿನದ ಪಂದ್ಯದ ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಅಲೋಕ್‌ ನಾಲ್ಕು ಗೇಮ್‌ಗಳಲ್ಲಿ ಗೆದ್ದಿದ್ದಾಗ, ಎದುರಾಳಿಗೆ ಒಂದು ಗೇಮ್‌ನಲ್ಲಿ ಮಾತ್ರ ಜಯ ಲಭಿಸಿತ್ತು. ನಂತರ ಕೈವಲ್ಯ ಹಾಗೂ ಅಲೋಕ್‌ ಕ್ರಮವಾಗಿ ಎರಡು ಹಾಗೂ ಒಂದು ಗೇಮ್‌ಗಳನ್ನು ಗೆದ್ದುಕೊಂಡರು.

ಚೇತರಿಸಿಕೊಂಡ ಕೈವಲ್ಯ 5–5ರಲ್ಲಿ ಸಮಬಲ ಸಾಧಿಸಿದರು. ನಂತರ ಚುರುಕಿನ ಆಟವಾಡಿದ ಅವರು ಮೊದಲ ಸೆಟ್‌ ಗೆದ್ದರು.

ಎರಡನೇ ಸೆಟ್‌ನ ಆರಂಭದ ಗೇಮ್‌ಗಳಲ್ಲಿ ಇಬ್ಬರೂ ತಲಾ ಒಂದೊಂದನ್ನು ಗೆದ್ದರು. 5–5ರವರೆಗೂ ಸಮಬಲ ಇತ್ತು. ನಂತರ ಮತ್ತೆ ಉತ್ತಮ ಆಟವಾಡಿದ ಅಲೋಕ್‌ ಮೇಲುಗೈ ಸಾಧಿಸಿದರು.

ಮಹಿಳೆಯರ ವಿಭಾಗದ ಅಗ್ರಶ್ರೇಯಾಂಕದ ಆಟಗಾರ್ತಿ, ರಾಜ್ಯದ ಅಪೂರ್ವಾ ಎಸ್‌. 6–3, 3–6, 7–6 (7–2)ರಲ್ಲಿ ಆತಿಥೇಯರಾದ ಖುಷಿ ಸಂತೋಷ್‌ ಖಂಡೋಜಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.

ಅಪೂರ್ವಾ ಮೊದಲ ಸೆಟ್‌ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು. ತಿರುಗೇಟು ನೀಡಿದ  ಖುಷಿ 6–3ರಲ್ಲಿ ಎರಡನೇ ಸೆಟ್‌ ಗೆದ್ದುಕೊಂಡರು. ತೀವ್ರ ಪೈಪೋಟಿ ನೀಡಿದ ಇಬ್ಬರೂ 3ನೇ ಸೆಟ್‌ನಲ್ಲಿ 6–6ರಲ್ಲಿ ಸಮಬಲ ಸಾಧಿಸಿದರು.

‘ಟೈ–ಬ್ರೇಕರ್‌’ನಲ್ಲಿ ತಾಳ್ಮೆ ಕಳೆದುಕೊಂಡ ಖುಷಿ ಚೆಂಡನ್ನು ನೆಟ್‌ಗೆ ಹೊಡೆದು ಪಾಯಿಂಟ್‌ ಕಳೆದುಕೊಂಡರು.ಭುಜದ ನೋವಿನಿಂದ ಬಳಲುತ್ತಿದ್ದರೂ ಅಪೂರ್ವಾ ಛಲದ ಆಟವಾಡಿ 7–2 ಪಾಯಿಂಟ್‌ ಗಳಿಸಿ ಗೆದ್ದರು.

ಶಾಹುಲ್‌ಗೆ ಸೋಲು: ರಾಜ್ಯದ ಅಗ್ರ ಶೇಯಾಂಕದ ಆಟಗಾರ ಶಾಹುಲ್‌ ಅನ್ವರ್‌ ಟೂರ್ನಿಯ ಐದನೇ ಶ್ರೇಯಾಂಕದ ಆಟಗಾರ, ತೆಲಂಗಾಣದ ವಿ. ಹೇಮಂತ ಕುಮಾರ್‌ ವಿರುದ್ಧ 6–4, 3–6, 2–6ರಲ್ಲಿ ಸೋತರು.

ಅಮರ್‌ಗೆ ಅದೃಷ್ಟ ಪರೀಕ್ಷೆ: ರಾಜ್ಯದ ಅಮರ್‌ ಟಿ. ಧರಿಯಣ್ಣವರ್‌ 6–2, 6–1ರಲ್ಲಿ ನೇರ ಸೆಟ್‌ಗಳಿಂದ 6ನೇ ಶ್ರೇಯಾಂಕದ ಆಟಗಾರ, ಒಡಿಶಾದ ಆದಿತ್ಯ ಸಾತಪಥಿ ಅವರನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಪ್ರವೇಶಿಸಿದರು.

ಫಲಿತಾಂಶ

ಪುರುಷರ ವಿಭಾಗ: ತಮಿಳುನಾಡಿನ ವಿಮಲ್‌ರಾಜ್‌ ಜಯಚಂದ್ರನ್‌ಗೆ 3–6, 7–5, 6–4ರಲ್ಲಿ ತೆಲಂಗಾಣದ ರೋಹಿತ್‌ ಕೃಷ್ಣಾ ವಿರುದ್ಧ ಜಯ; ಡಬಲ್ಸ್‌: ಶಾಹುಲ್‌ ಅನ್ವರ್‌ (ಕರ್ನಾಟಕ)– ಉಮೇರ್‌ ಶೇಖ್‌ (ಆಂಧ್ರಪ್ರದೇಶ) 6–2, 7–5ರಲ್ಲಿ ರಾಜ್ಯದ ದೇವ್‌ ಸಿನ್ಹಾ– ಮನಸ್‌ ಗಿರೀಶ್‌ ದೀಪ್‌ಶೇಟ್‌ ಅವರನ್ನು; ಎ. ದೀಪಕ್‌ (ಕರ್ನಾಟಕ)– ಸಾಹಿಲ್‌ ಕಿಶೋರ್‌ (ಮಹಾರಾಷ್ಟ್ರ) 6–4, 6–4ರಲ್ಲಿ ವಿನಯ್‌ ಟಿ.– ಕೃತಿಕ್‌ ಎಂ. (ಕರ್ನಾಟಕ) ಅವರನ್ನು; ಕೈವಲ್ಯ ವಾಮನ್‌ರಾವ್‌ (ಮಹಾರಾಷ್ಟ್ರ)– ವಿಮಲ್‌ರಾಜ್‌ 6–3, 6–3ರಲ್ಲಿ ಹೇಮಂತ್‌ ವಿ.– ರೋಹಿತ್‌ ಕೃಷ್ಣ (ತೆಲಂಗಾಣ) ಅವರನ್ನು; ಅಲೋಕ್‌ ಆರಾಧ್ಯ– ರಿಭವ್‌ ರವಿಕಿರಣ್‌ (ಕರ್ನಾಟಕ) 6–1, 6–4ರಲ್ಲಿ ತರುಣ್‌ ಕುಮಾರ್‌ವೇಲು– ಲಕ್ಷ್ಮಣ ರಾಜ್‌ (ತಮಿಳುನಾಡು) ಅವರನ್ನು ಮಣಿಸಿ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದರು.

ಮಹಿಳೆಯರ ಸಿಂಗಲ್ಸ್‌: ರಾಜ್ಯದ ನಿಕಿಟಾ ಪಿಂಟೊಗೆ 6–2, 6–4ರಲ್ಲಿ ತಮಿಳುನಾಡಿನ ಚಾರಣ್ಯ ಶ್ರೀಕೃಷ್ಣನ್‌ ವಿರುದ್ಧ; ತಮಿಳುನಾಡಿನ ಬಿಪಾಷಾ 6–1, 6–1ರಲ್ಲಿ ತಮ್ಮದೇ ರಾಜ್ಯದ ಲಾವಣ್ಯ ಶ್ರೀಕೃಷ್ಣನ್‌ ಎದುರು; ತಮಿಳುನಾಡಿನ ವೈಶಾಲಿ ಪಂಜೇಶ್‌ಗೆ 6–3, 6–3ರಲ್ಲಿ ರಾಜ್ಯದ ನಿಕಿತಾ ತೇರದಾಳ ಎದುರು ಜಯ.

ಮಿಕ್ಸ್‌ಡ್‌ ಡಬಲ್ಸ್‌: ಪಂಜೇಶ್‌ ವೈಶಾಲಿ (ತಮಿಳುನಾಡು)– ಉಮೇರ್‌ ಶೇಖ್‌ಗೆ (ಆಂಧ್ರಪ್ರದೇಶ್‌) 8–5ರಲ್ಲಿ ಚಾಂದನಿ ಮುರುಳಿ– ಲಕ್ಷ್ಮಣ್‌ ರಾಜ್‌ (ತಮಿಳುನಾಡು) ವಿರುದ್ಧ; ಖುಷಿ ಸಂತೋಷ್‌– ರಿಭವ್‌ ರವಿಕಿರಣ್‌ಗೆ (ಕರ್ನಾಟಕ) 8–1ರಲ್ಲಿ ಲಾವಣ್ಯ ಶ್ರೀಕೃಷ್ಣನ್‌ (ತಮಿಳುನಾಡು)– ವಿನಯ ಟಿ. ಕುಂಬಾರ (ಕರ್ನಾಟಕ) ವಿರುದ್ಧ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT