ಪರಿಷತ್‌ ಚುನಾವಣೆ: ಟಿಕೆಟ್‌ಗಾಗಿ ಪೈಪೋಟಿ

7

ಪರಿಷತ್‌ ಚುನಾವಣೆ: ಟಿಕೆಟ್‌ಗಾಗಿ ಪೈಪೋಟಿ

Published:
Updated:
ಪರಿಷತ್‌ ಚುನಾವಣೆ: ಟಿಕೆಟ್‌ಗಾಗಿ ಪೈಪೋಟಿ

ಬೆಂಗಳೂರು: ಜೂನ್‌ನಲ್ಲಿ ತೆರವಾಗಲಿರುವ ವಿಧಾನ ಪರಿಷತ್‌ನ 11 ಸ್ಥಾನಗಳ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಮೂರೂ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಪೈಪೋಟಿ ಆರಂಭಿಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ದೈವಾರ್ಷಿಕ ಚುನಾವಣೆಯ 11 ಸ್ಥಾನಗಳಲ್ಲಿ ವಿಧಾನಸಭೆಯಲ್ಲಿರುವ ಸಂಖ್ಯಾ ಬಲಕ್ಕೆ ಅನುಗುಣವಾಗಿ ಬಿಜೆಪಿ 5, ಕಾಂಗ್ರೆಸ್‌ 4 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಗೆಲ್ಲಬಹುದು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್‌ 78 ಮತ್ತು ಜೆಡಿಎಸ್‌ 37 ಸ್ಥಾನಗಳನ್ನು ಗೆದ್ದಿವೆ.

ಜೆಡಿಎಸ್‌ನ ಬಿ.ಎಂ.ಫಾರೂಕ್ ಮತ್ತು ಎಲ್‌.ಆರ್‌.ಶಿವರಾಮೇಗೌಡ ಅವರು ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ನಿಂದ ಹಾಲಿ ಸದಸ್ಯರಾಗಿರುವ ಎಂ.ಆರ್‌.ಸೀತಾರಾಂ, ಕೆ.ಗೋವಿಂದರಾಜ್‌ ಪುನರಾಯ್ಕೆ ಆಗುವ ಸಾಧ್ಯತೆ ಇದೆ. ಅಲ್ಲದೆ ರಾಣಿ ಸತೀಶ್‌, ವೀರಣ್ಣ ಮತ್ತಿಕಟ್ಟಿ, ಯು.ಬಿ.ವೆಂಕಟೇಶ್‌, ಸಿ.ಎಂ.ಇಬ್ರಾಹಿಂ ಅವರ ಹೆಸರುಗಳು ಕೇಳಿ ಬಂದಿವೆ.

ಬಿಜೆಪಿಯಿಂದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಶಿವಮೊಗ್ಗದ ಬಿಜೆಪಿ ನಾಯಕ ರುದ್ರೇಗೌಡ, ಡಿ.ಎಸ್‌.ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ, ರಘುನಾಥರಾವ್‌ ಮಲ್ಕಾಪುರೆ ಅವರ ಹೆಸರುಗಳು ಕೇಳಿ ಬಂದಿವೆ. ಮುಂದಿನ ವಾರ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜಂಟಿ ಕಾರ್ಯದರ್ಶಿ ಚುನಾವಣಾಧಿಕಾರಿ: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಚುನಾವಣಾಧಿಕಾರಿಯಾಗಿ ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎಸ್‌.ಕುಮಾರಸ್ವಾಮಿ ಅವರನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸಾಮಾನ್ಯವಾಗಿ ಸಚಿವಾಲಯ ಕಾರ್ಯದರ್ಶಿಯವರೇ ಚುನಾವಣೆ ನಡೆಸಬೇಕು. ಆದರೆ ಇದೇ ಮೊದಲ ಬಾರಿಗೆ, ಕಾರ್ಯದರ್ಶಿ ಇದ್ದರೂ ಅವರ ಬದಲಿಗೆ ಜಂಟಿ ಕಾರ್ಯದರ್ಶಿಯವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸಚಿವಾಲಯದಲ್ಲಿ ಕುಮಾರಸ್ವಾಮಿ ಅವರಿಗಿಂತ ಹಿರಿಯರಾದ ಮೂವರು ಜಂಟಿ ಕಾರ್ಯದರ್ಶಿಗಳು ಇದ್ದಾರೆ. ಅವರನ್ನು ನೇಮಕ ಮಾಡದೇ ಕಿರಿಯ ಜಂಟಿ ಕಾರ್ಯದರ್ಶಿಯವರನ್ನು ಆಯ್ಕೆ ಮಾಡಿರುವುದು ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.

ಪರಮೇಶ್ವರ ಅವರನ್ನು ಬೇಸ್ತು ಬೀಳಿಸಿದ ಸಭಾಪತಿ

ಬೆಂಗಳೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಗುರುವಾರ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಬಳಿ ಹೋದಾಗ ಅವರು, ‘ರಾಜೀನಾಮೆ ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದರಿಂದ ಪರಮೇಶ್ವರ ಕೆಲವು ಕ್ಷಣ ಗಲಿಬಿಲಿಗೊಂಡರು. ತಕ್ಷಣವೇ ಸಮಜಾಯಿಷಿ ನೀಡಿದ ಶಂಕರಮೂರ್ತಿ, ‘ಗಾಬರಿಗೊಳ್ಳಬೇಕಾಗಿಲ್ಲ. ವಿಧಾನ ಪರಿಷತ್‌ ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆ ಆಗಿ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಪರಿಷತ್‌ನ ಸ್ಥಾನ ಕಳೆದುಕೊಳ್ಳುತ್ತಾರೆ’ ಎಂದು ವಿಧಾನ ಪರಿಷತ್‌ ನಿಯಮಾವಳಿ ತೋರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry