ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

7

ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

Published:
Updated:
ಜಿಲ್ಲೆಯ ವಿವಿಧೆಡೆ ಗಾಳಿ ಮಳೆಗೆ ಅಪಾರ ನಷ್ಟ

ಉಚ್ಚಂಗಿದುರ್ಗ: ಹಿರೇಮೇಗಳಗೆರೆ ಪಂಚಾಯಿತಿ ವ್ಯಾಪ್ತಿಯ ನಾಗತಿಕಟ್ಟೆ ತಾಂಡಾದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ಮನೆ ಚಾವಣಿ ಶೀಟ್ ಹಾರಿ ಬಾಣಾಂತಿ ತಲೆ ಮೇಲೆ ಬಿದ್ದಿದೆ. ಬಾಣಂತಿ ಗಾಯಗೊಂಡಿದ್ದಾರೆ.

ಶಕುಂತಳಾ (23) ಗಾಯಗೊಂಡಿರುವ ಮಹಿಳೆ. ಬಿರುಗಾಳಿಗೆ ತಾಂಡಾದ ಮನೆಗಳ ಚಾವಣಿ ಶೀಟ್‌ಗಳು ಹಾರಿವೆ. ಯಶವಂತ ನಾಯ್ಕ ಎಂಬುವವರ ಮನೆ ಚಾವಣಿ ಶೀಟ್‌ ಹಾರುವಾಗ ಬಾಣಾಂತಿ ಶಕುಂತಳಾ ಅವರು ತಮ್ಮ 4 ತಿಂಗಳ ಅವಳಿ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡು ರಕ್ಷಿಸಿಕೊಂಡಿದ್ದಾರೆ. ಆಗ ಶೀಟ್‌ ತಲೆಮೇಲೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದಾರೆ.

ಉಚ್ಚಂಗಿದುರ್ಗ, ಬೇವಿನಹಳ್ಳಿ ದೊಡ್ಡ ತಾಂಡಾಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಇಬಿ ಸಿಬ್ಬಂದಿ ಗುರುವಾರ ಮುಂಜಾನೆಯಿಂದಲೇ ದುರಸ್ತಿ ಕಾರ್ಯ ಕೈಗೊಂಡು, ಗ್ರಾಮಗಳಿಗೆ ವಿದ್ಯುತ್‌ ಸರಬರಾಜಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ನಾಗತಿಕಟ್ಟೆ ಗಾಂಗ್ಯನಾಯ್ಕ ಎಂಬುವವರ ಮನೆಯ ಮೇಲೆ ಬೃಹತ್ ಜಾಲಿ ಮರ ಬಿದ್ದಿದ್ದು ಭಾರಿ ಹಾನಿ ತಪ್ಪಿದೆ. ವಿವಿಧ ಗ್ರಾಮಗಳಲ್ಲಿ ನೂರಾರು ಮರಗಳು ಬೇರು ಸಹಿತ ಉರುಳಿವೆ.

ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಪ್ಪ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿದರು.

‘ಬಿರುಗಾಳಿಗೆ ಮನೆಗೆ ಹಾನಿ ಆಗಿರುವುದು ಇದೇ ಮೊದಲಲ್ಲ, ಕಳೆದ ತಿಂಗಳು ಮನೆ ಚಾವಣಿ ಹಾರಿ ದ್ವಿಚಕ್ರ ವಾಹನದ ಮೇಲೆ ಬಿದ್ದಿತ್ತು. ಪರಿಹಾರಕ್ಕಾಗಿ ಅಲೆದರೂ ಪ್ರಯೋಜನವಾಗಿಲ್ಲ. ಮನೆಯಿಲ್ಲದೆ ಬೀದಿಗೆ ಬಂದಿದ್ದೇವೆ’ ಎಂದು

ಯಶವಂತ ನಾಯ್ಕ ಅಳಲು ತೋಡಿಕೊಂಡಿದ್ದಾರೆ.

ಹರಿಹರ ವರದಿ

ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಳೆ ಹಾಗೂ ಗಾಳಿಗೆ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಬೈಕ್‍ಗಳು ಜಖಂಗೊಂಡು ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೀಡಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ನಗರದಲ್ಲಿ ಬುಧವಾರ ಸಂಜೆ ಪ್ರಾರಂಭವಾದ ಭಾರಿ ಗಾಳಿ ಹಾಗೂ ಮಳೆಗೆ, ರೈಲ್ವೆ ನಿಲ್ದಾಣದ ಮುಂಭಾಗದ ವಾಹನ ನಿಲ್ದಾಣದ ಸಮೀಪದಲ್ಲಿದ್ದ ಭಾರಿ ಗಾತ್ರದ ನೀಲಗಿರಿ ಮರ ಪ್ರಯಾಣಿಕರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ವಾಹನಗಳ ಬಿಡಿ ಭಾಗಗಳು ಜಖಂಗೊಂಡು ಲಕ್ಷಾಂತರ ಮೌಲ್ಯನಷ್ಟವಾಗಿದೆ.

ಹರಪನಹಳ್ಳಿ ವರದಿ

ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿಗೆ 133 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 21 ವಿದ್ಯುತ್ ಪರಿವರ್ತಕಗಳು ವಿಫಲವಾಗಿವೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಎಇಇ ಭೀಮಪ್ಪ ತಿಳಿಸಿದ್ದಾರೆ.

ಹರಪನಹಳ್ಳಿ ವ್ಯಾಪ್ತಿಯಲ್ಲಿ 25 ವಿದ್ಯುತ್ ಕಂಬ, ಕಂಚಿಕೇರೆಯಲ್ಲಿ 6, ತೆಲಿಗಿಯಲ್ಲಿ 34, ನಜೀರ್‌ ನಗರದಲ್ಲಿ 19, ಅರಸೀಕೆರೆಯಲ್ಲಿ 10, ಉಚ್ಚಂಗಿ ದುರ್ಗದಲ್ಲಿ 22, ನೀಲಗುಂದದಲ್ಲಿ 15 ಕಂಬಗಳು ಮುರಿದು ಬಿದ್ದಿವೆ. 25 ಕೆವಿಎ, 63 ಕೆವಿಎ ಹಾಗೂ 100 ಕೆವಿಎ ಸಂಖ್ಯೆಯ 21 ವಿದ್ಯುತ್ ಪರಿವರ್ತಕಗಳು ವಿಫಲಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry