ಗುರುವಾರ , ನವೆಂಬರ್ 14, 2019
26 °C

ಟಿಪ್ಪು ಜಯಂತಿ ಗಲಭೆ: ವರ್ತಿಕಾ ಕಟಿಯಾರ್‌ ಆರೋಪ ಮುಕ್ತ

Published:
Updated:
ವರ್ತಿಕಾ ಕಟಿಯಾರ್‌ ಆರೋಪ ಮುಕ್ತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2015ರ ಟಿಪ್ಪು ಜಯಂತಿ ವೇಳೆ ಗಲಭೆ ನಿಯಂತ್ರಣ ಮಾಡಲು ವಿಫಲರಾಗಿದ್ದರು ಎಂಬ ಆರೋಪದಿಂದ ವರ್ತಿಕಾ ಕಟಿಯಾರ್‌ ಈಗ ಮುಕ್ತಗೊಂಡಿದ್ದಾರೆ. ಗಲಭೆ ಸಂದರ್ಭದಲ್ಲಿ ವರ್ತಿಕಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಘಟನೆಯನ್ನು ಅಂದಿನ ಸಿದ್ದರಾಮಯ್ಯ ಸರ್ಕಾರವು ಮ್ಯಾಜಿಸ್ಟ್ರಿಯಲ್‌ ತನಿಖೆಗೆ ವಹಿಸಿತ್ತು. ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
ಎಸ್‌ಪಿ ಅವರನ್ನು ಕಾರ್ಯ ನಿರ್ವಾಹಕೇತರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಗೃಹ ಇಲಾಖೆ ಅವರನ್ನು ಆರೋಪ ಮುಕ್ತಗೊಳಿಸಿದೆ. ಅಲ್ಲದೇ ಹಿಂದಿನ ಸರ್ಕಾರವೇ ಇಲಾಖೆ ತನಿಖೆ ನಡೆಸದಿರಲು ತೀರ್ಮಾನಿಸಿತ್ತು ಎಂದು ಮೂಲಗಳು ತಿಳಿಸಿವೆ.

ಅಂದಿನ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ನೇತೃತ್ವದಲ್ಲಿ ನಡೆದ ಮ್ಯಾಜಿಸ್ಟ್ರಿಯಲ್‌ ತನಿಖೆಯು ಜಿಲ್ಲಾಮಟ್ಟದ ಅಧಿಕಾರಿಗಳ ಕರ್ತವ್ಯ ಲೋಪವೇ ಗಲಭೆಗೆ ಕಾರಣವೆಂದು ಬೊಟ್ಟು ಮಾಡಿತ್ತು. ಜತೆಗೆ, ದಕ್ಷಿಣ ವಲಯದ ಐಜಿಪಿ ಬಿ.ಕೆ.ಸಿಂಗ್ ಅವರು ಅಂದಿನ ಡಿಜಿಪಿ ಓಂಪ್ರಕಾಶ್‌ ಅವರಿಗೆ ಎಸ್‌ಪಿ
ವಿರುದ್ಧ ವರದಿ ನೀಡಿದ್ದರು. ಆ ವರದಿಯನ್ನು ಗೃಹ ಇಲಾಖೆಯು ಕೈಬಿಟ್ಟಿದ್ದು, ಏಪ್ರಿಲ್‌ 26ರಂದು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)