‘ನಿಫಾ’ ವೈರಸ್: ಗಡಿಭಾಗದಲ್ಲಿ ಕಟ್ಟೆಚ್ಚರ ಇಲ್ಲ

7

‘ನಿಫಾ’ ವೈರಸ್: ಗಡಿಭಾಗದಲ್ಲಿ ಕಟ್ಟೆಚ್ಚರ ಇಲ್ಲ

Published:
Updated:

ಗುಂಡ್ಲುಪೇಟೆ: ನೆರೆಯ ಕೇರಳ ರಾಜ್ಯದಲ್ಲಿ ‘ನಿಫಾ’ ವೈರಸ್‍ ಆತಂಕ ಸೃಷ್ಟಿಸಿದ್ದರೂ, ಗುಂಡ್ಲುಪೇಟೆ ತಾಲ್ಲೂಕಿನ ಗಡಿಭಾಗಗಳಲ್ಲಿ ಆರೋಗ್ಯ ಇಲಾಖೆ ಯಾವುದೇ ಕಟ್ಟೆಚ್ಚರ ವಹಿಸಿಲ್ಲ.

ತಾಲ್ಲೂಕಿನಲ್ಲಿ ಕೇರಳಕ್ಕೆ ಎರಡು ಕಡೆ ಸಂಪರ್ಕ ಇದೆ. ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಮದ್ದೂರು ಮೂಲೆಹೊಳೆಯ ಗಡಿಭಾಗ ಹಾಗೂ ಎನ್‍.ಎಚ್ 67ರಲ್ಲಿ ಬಂಡೀಪುರ ಮಾರ್ಗವಾಗಿ ಕೆಕ್ಕನಹಳ್ಳ ಮೂಲಕ ತಮಿಳುನಾಡಿನ ಗೂಡಲೂರು ಮಾರ್ಗವಾಗಿ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಎರಡೂ ಗಡಿಭಾಗಗಳಲ್ಲಿ ತಾಲ್ಲೂಕಿನ ಜನರು ನಿತ್ಯ ವ್ಯಾಪಾರ, ಕೂಲಿ ಇನ್ನಿತರೆ ಕಾರಣಗಳಿಂದ ಕೇರಳಕ್ಕೆ ಹೋಗಿ ಬರುತ್ತಾರೆ. ಅಲ್ಲದೆ, ಸಾಕಷ್ಟು ವಾಹನಗಳು ರಾಜ್ಯ ಪ್ರವೇಶಿಸುತ್ತವೆ. ಆದರೆ, ಇಲ್ಲಿ ‘ನಿಫಾ’ ವೈರಸ್ ತಪಾಸಣೆ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ತಗೆದುಕೊಂಡಿಲ್ಲ.

ಇತ್ತೀಚೆಗೆ ಬೆಂಗಳೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ತಮಿಳುನಾಡು ಮತ್ತು ಕೇರಳ ಗಡಿಭಾಗದ ಚೆಕ್ ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯವರು ಬೀಡುಬಿಟ್ಟಿದ್ದರು. ರಾಜ್ಯದಿಂದ ತಮಿಳುನಾಡು, ಕೇರಳಕ್ಕೆ ಹೋಗುವ ವಾಹನಗಳಲ್ಲಿರುವ ಜನರನ್ನು ತಪಾಸಣೆ ಮಾಡಿ ಕಳುಹಿಸಿದ್ದರು. ಜತೆಗೆ, ವಾಹನಗಳಿಗೂ ಔಷಧ ಸಿಂಪಡಿಸುತ್ತಿದ್ದರು.

ಕೇರಳದಲ್ಲಿ ಜೀವಕ್ಕೆ ಎರವಾಗಿರುವ ‘ನಿಫಾ’ ಕಂಡು ಬಂದಿದ್ದರೂ ರಾಜ್ಯದ ಗಡಿಭಾಗಗಳಲ್ಲಿ ಯಾವುದೇ ಕಟ್ಟೆಚ್ಚರ ವಹಿಸಿಲ್ಲ ಎಂದು ನಿತ್ಯ ಕೇರಳಕ್ಕೆ ವ್ಯಾಪಾರಕ್ಕಾಗಿ ಹೋಗಿಬರುವ ಬಸವಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೇರಳದ ಅನೇಕರು ತಾಲ್ಲೂಕಿನಲ್ಲಿ ಬೇಕರಿ, ಹೋಟೆಲ್‍ಗಳನ್ನು ನಡೆಸುತ್ತಿದ್ದು, ಅನೇಕ ಮಂದಿ ಅಲ್ಲಿಂದಲೇ ಇಲ್ಲಿಗೆ ಸಾಮಗ್ರಿಗಳನ್ನು ತರುತ್ತಾರೆ. ಇಲ್ಲಿಂದ ಕೇರಳಕ್ಕೆ ಜಾನುವಾರು ಸಾಗಣೆಯಾಗುತ್ತದೆ. ಅನೇಕರು ಜೀವನೋಪಾಯಕ್ಕಾಗಿ ಕೇರಳಕ್ಕೆ ಹೋಗಿ ಬರುತ್ತಾರೆ. ಆದರೆ, ವಾಪಸ್ ಬರುವಾಗ ಆರೋಗ್ಯವಂತರಾಗಿಯೇ ಬರುತ್ತೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ನಮ್ಮ ಚೆಕ್‍ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆಯವರು ಯಾವ ತಪಾಸಣೆಯನ್ನೂ ಮಾಡುತ್ತಿಲ್ಲ’ ಎಂದು ವ್ಯಾಪಾರಿ ಮುಬಾರಕ್ ಬೇಸರ ವ್ಯಕ್ತಪಡಿಸಿದರು.

-ಎಂ.ಮಲ್ಲೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry