ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತೋದ್ಧಾರ ಹೇಗೆ?

Last Updated 27 ಮೇ 2018, 19:30 IST
ಅಕ್ಷರ ಗಾತ್ರ

‘ದಲಿತ’ ಎಂಬ ಪದ ಈಚೆಗೆ ಬಹಳಷ್ಟು ಚರ್ಚೆಗೊಳಗಾಗುತ್ತಿದೆ. ಅದರಲ್ಲೂ ಚುನಾವಣೆಯ ನಂತರ ಈ ಚರ್ಚೆ ಬಿರುಸು ಪಡೆದುಕೊಂಡಿದೆ. ದಲಿತ ವರ್ಗದ ವ್ಯಕ್ತಿಯೊಬ್ಬರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ: ‘ಒಬ್ಬ ದಲಿತನನ್ನು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಮಾಡುವುದರಿಂದ ದಲಿತರ ಅಷ್ಟೂ ಸಮಸ್ಯೆಗಳು ಬಗೆಹರಿಯುತ್ತವೆಯೇ?’

ಮಲ ಹೊರುವುದಕ್ಕಾಗಿ ಒಂದು ಸಮುದಾಯವನ್ನೇ ಮೀಸಲಿಟ್ಟಿರುವ ದೇಶ ನಮ್ಮದು. ಶತಶತಮಾನಗಳಿಂದ ದಲಿತರು ಜಾಡಮಾಲಿಗಳಾಗಿಯೇ ಉಳಿದಿದ್ದಾರೆ. ಈಗಲೂ ಶೌಚಗುಂಡಿಗೆ ಇಳಿದು ಸಾಯುವವರನ್ನು ನಾವು ನೋಡಬಹುದಾಗಿದೆ. ತಂತ್ರಜ್ಞಾನದಲ್ಲಿ ನಮ್ಮ ದೇಶ ಎಷ್ಟೇ ಮುಂದು
ವರಿದಿದ್ದರೂ ತನ್ನೊಡಲಲ್ಲಿರುವ ಜಾತಿ, ವರ್ಣಭೇದ ವ್ಯವಸ್ಥೆಯಿಂದ ಹೊರಬರದಿದ್ದರೆ ಈ ದೇಶದ ಉನ್ನತಿಗೆ ಅರ್ಥವಿರುವುದಿಲ್ಲ.

ವರ್ಷದ ಹಿಂದೆ ಸಮಾಜ ಕಲ್ಯಾಣ ಇಲಾಖೆಯು ಅಂಬೇಡ್ಕರ್ ಕುರಿತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಬೆಂಗಳೂರಿನಲ್ಲಿ ಏರ್ಪಡಿಸಿತ್ತು. ಜಾಗತಿಕ ಮಟ್ಟದ ಲೇಖಕರು, ಕವಿಗಳು, ವಿಚಾರವಾದಿಗಳು, ಚಿಂತಕರು, ಬುದ್ಧಿಜೀವಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಅವರ ತತ್ವ, ಕನಸು, ಆಶಯಗಳ ಬಗ್ಗೆ ಮಾತನಾಡಲಾಯಿತು. ಹಿಂದುಳಿದ ವರ್ಗಗಳ ಅಭ್ಯುದಯ ಕುರಿತು ಗಂಟೆಗಟ್ಟಲೆ ಮಾತಾಡಿದ್ದಾಯಿತು. ಅದರಿಂದ ದಲಿತರಿಗೆ, ಹಿಂದುಳಿದವರಿಗೆ ಆದ ಪ್ರಯೋಜನವಾದರೂ ಏನು?

ಕೇವಲ ಭಾಷಣ, ಸಂವಾದಗಳಿಂದ ದಲಿತರ ಸಮಾಜೋ- ಸಾಂಸ್ಕೃತಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಉಪನ್ಯಾಸಗಳಿಂದ ದಲಿತರ ಅಭ್ಯುದಯ ಸಾಧ್ಯವಾಗದು. ಆ ಕಾರ್ಯಕ್ರಮಕ್ಕೆ ವ್ಯಯಿಸಿದ್ದ ಹಣವನ್ನು ದಲಿತರ ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸಿದ್ದರೆ ಕೆಲವರಿಗಾದರೂ ಅನುಕೂಲವಾಗುತ್ತಿತ್ತು.

‘ದಲಿತರಿಗೆ ಉನ್ನತ ಹುದ್ದೆ, ಪದವಿಗಳು ದೊರೆತಾಗ ಮಾತ್ರ ದಲಿತರ ಅಭ್ಯುದಯ ಸಾಧ್ಯ’ ಎಂಬುದು ಕೆಲವರ ಗೊಡ್ಡು ವಾದ. ಅವರ ವಾದವನ್ನು ಒಪ್ಪುವುದಾದರೆ ಈಗ ದಲಿತ ವ್ಯಕ್ತಿಯೊಬ್ಬ ದೇಶದ ರಾಷ್ಟ್ರಪತಿಯಾಗಿದ್ದಾರೆ. ಇದರಿಂದ ಭಾರತದಲ್ಲಿನ ದಲಿತರ ಸ್ಥಿತಿಗತಿ ಎಷ್ಟರಮಟ್ಟಿಗೆ ಸುಧಾರಿಸಿದೆ? ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಬಡಬಡಿಸುವವರಿಗೆ, ಭಾರತದಲ್ಲಿ ಇಂದಿಗೂ ಒಂದು ನಿರ್ದಿಷ್ಟ ಸಮುದಾಯವನ್ನು ಮಲ ಹೋರುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುವ ಕ್ರೂರ ಪದ್ಧತಿ ಇದೆ ಎಂದು ಏಕೆ ಅರ್ಥ ಆಗುತ್ತಿಲ್ಲ?

ಎಲ್ಲಿಯವರೆಗೆ ಜಾತಿ ಜಾಡ್ಯದ ಬೇರುಗಳು ನಾಶವಾಗುವುದಿಲ್ಲವೋ ಅಲ್ಲಿಯವರೆಗೂ ದಲಿತರ ಉದ್ಧಾರ ಸಾಧ್ಯವಿಲ್ಲ. ನಮ್ಮ ಮನಸ್ಸುಗಳಲ್ಲಿರುವ ಜಾತಿ ಬೀಜವನ್ನು ಕಿತ್ತೆಸೆದು, ಮನೆಗಳಲ್ಲಿನ ಭೇದವನ್ನು ನಿರ್ಮೂಲನೆಗೊಳಿಸಿದಾಗ ಮಾತ್ರ ಭಾರತೀಯ ಸಮಾಜ ಅಭಿವೃದ್ಧಿಯ ನೈಜ ಪಥದಲ್ಲಿ ಸಾಗಲು ಸಾಧ್ಯ. ಇವೆಲ್ಲವನ್ನೂ ಸಾಕಾರಗೊಳಿಸಲು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕ್ರಾಂತಿಯಾಗಬೇಕಿದೆ. ನಮ್ಮ ಇಡೀ ಶಿಕ್ಷಣ ಪದ್ಧತಿಯನ್ನು ಬದಲಿಸಬೇಕು. ಈ ಬದಲಾವಣೆಯನ್ನು ತರುವವರು ಯಾರು?

-ಅಜಯ್ ರಾಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT