7
ಡಾ. ಶಿಮಂತೂರು ನಾರಾಯಣಶೆಟ್ಟಿ ಮಾದರಿ ಕಾರ್ಯ

ಕಲಾವಿದರ ನೆರವಿಗೆ ಪ್ರಶಸ್ತಿ ಹಣ

Published:
Updated:
ಕಲಾವಿದರ ನೆರವಿಗೆ ಪ್ರಶಸ್ತಿ ಹಣ

ಮಂಗಳೂರು: ಯಕ್ಷಗಾನ ಛಂದೋ ಬ್ರಹ್ಮರೆಂದೇ ಪ್ರಸಿದ್ಧರಾದ ಡಾ.ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ 2018ನೇ ಸಾಲಿನ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಹೊರಭಾಗದಲ್ಲಿರುವ ಅಡ್ಯಾರ್‌ ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ವತಿಯಿಂದ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಹಾರ, ಪ್ರಶಸ್ತಿ ಫಲಕ ಮತ್ತು  ₹ 1 ಲಕ್ಷ ನಗದು ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಶಿಮಂತೂರು ಅವರು, ಪ್ರಶಸ್ತಿಯ ಮೊತ್ತಕ್ಕೆ ₹ 1,008 ಸೇರಿಸಿ ಫೌಂಡೇಷನ್‌ಗೆ ಹಸ್ತಾಂತ ರಿಸಿದರು.

‘ಯಕ್ಷಗಾನ ಕ್ಷೇತ್ರದ ಬಡ ಕಲಾವಿದರಿಗೆ ಮನೆಗಳನ್ನು ಕಟ್ಟಿಕೊಡುವ ಮೂಲಕ, ಹಲವಾರು ಕಲಾವಿದರ ಚಿಕಿತ್ಸೆಗೆ ನೆರವಾಗುವ ಪಟ್ಲ ಫೌಂಡೇಷನ್‌ಗೆ ಪ್ರಶಸ್ತಿಯ ಮೊತ್ತವನ್ನು ನೀಡುತ್ತಿದ್ದೇನೆ. ತನ್ನೆಡೆಗೆ ಹರಿದುಬರುವ ಸಂಪತ್ತೆಲ್ಲವನ್ನೂ ಹಂಚುವುದೇ ಮನುಷ್ಯನ ಆದ್ಯತೆಯಾದಾಗ ಸುಂದರ ಸಮಾಜ ಸೃಷ್ಟಿ ಸಾಧ್ಯ’ ಎಂದು ಡಾ. ಶಿಮಂತೂರು ಅವರು ಈ ಸಂದರ್ಭದಲ್ಲಿ ಹೇಳಿದರು.

ಅಶಕ್ತ  100 ಕಲಾವಿದರಿಗೆ ಮನೆ ನಿರ್ಮಾಣವನ್ನು ಫೌಂಡೇಷನ್‌ ಕೈಗೆತ್ತಿಕೊಂಡಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಜೀವನವಿಡೀ ದುಡಿದ ಕಲಾವಿದರನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಗತಿಯಲ್ಲಿದೆ.

ಈಗಾಗಲೇ 60 ಮನೆಗಳ ರೂಪುರೇಷೆ ಸಿದ್ಧವಾಗಿದೆ ಎಂದು ಫೌಂಡೇಷನ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಹೇಳಿದರು.

ಕುರಿಯ ಗಣಪತಿ ಶಾಸ್ತ್ರಿ, ಆರ್ಗೋಡು ಮೋಹನದಾಸ ಶೆಣೈ, ಎಂ.ಕೆ. ರಮೇಶ್‌ ಆಚಾರ್ಯ, ಆನಂದ ಶೆಟ್ಟಿ ಐರಬೈಲು, ಕುತ್ತೊಟ್ಟು ವಾಸುಶೆಟ್ಟಿ, ಪಾರೆಕೋಡಿ ಗಣಪತಿ ಭಟ್‌, ಶೀಲಾ ಕೆ. ಶೆಟ್ಟಿ, ಮಹಾಲಕ್ಷ್ಮಿ ಡಿ. ರಾವ್‌ ಅವರಿಗೆ ಯಕ್ಷಧ್ರುವ ಕಲಾ ಗೌರವ ಅರ್ಪಿಸಲಾಯಿತು.

ದಿನವಿಡೀ ನಡೆದ ‘ಯಕ್ಷಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳ ಸಂಪುಟ ‘ಛಂದಸ್ಪತಿ’ ಮತ್ತು ‘ಪದ್ಮಾಂಶು’ ಬಿಡುಗಡೆ, ಕಲಾವಿದರ ಆರೋಗ್ಯ ತಪಾಸಣೆ ನಡೆಯಿತು. ವೃತ್ತಿಪರ, ಹವ್ಯಾಸಿ ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ತೆಂಕು ಮತ್ತು ಬಡಗಿನ ಹತ್ತು ಮಂದಿ ಕಲಾವಿದರಿಗೆ ತಲಾ ₹50 ಸಾವಿರ ನೆರವು, 8 ಮಂದಿ ಕಲಾವಿದರಿಗೆ ಗೃಹನಿರ್ಮಾಣ ನೆರವು ವಿತರಣೆ ಮಾಡಲಾಯಿತು. ₹ 20 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ವಿತರಿಸಲಾಯಿತು.

ಹಲವಾರು ಕಲಾಪ್ರದರ್ಶನಗಳು ದಿನಪೂರ್ತಿ ಜರುಗಿದವು. ಒಡಿಯೂರು ಗುರುದೇವಾನಂದ ಸ್ವಾಮೀಜಿ, ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ದರ್ಶನ್‌, ರಿಷಬ್‌ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry