ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಬಂಧನಕ್ಕೆ ‘ಸುಪ್ರೀಂ’ ತಡೆ

7

ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಬಂಧನಕ್ಕೆ ‘ಸುಪ್ರೀಂ’ ತಡೆ

Published:
Updated:
ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿ ಬಂಧನಕ್ಕೆ ‘ಸುಪ್ರೀಂ’ ತಡೆ

ನವದೆಹಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989ರ (ಎಸ್‌ಸಿ/ಎಸ್‌ಟಿ ಕಾಯ್ದೆ) ಅಡಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರ ಬಂಧನಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

‘ಭೂಮಾತಾ ಬ್ರಿಗೇಡ್’ ಸಂಘಟನೆ ಸಂಸ್ಥಾಪಕಿ ಆಗಿರುವ ತೃಪ್ತಿ, ತಮ್ಮ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿ ಬಾಂಬೆ ಹೈಕೋರ್ಟ್ ಏಪ್ರಿಲ್ 23ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಎಂ.ಎಂ. ಶಾಂತನಗೌಡರ್ ಅವರ ನ್ಯಾಯಪೀಠ, ಈ ಸಂಬಂಧ ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

‘ಕಾರಿನಲ್ಲಿ ಬಂದ ತೃಪ್ತಿ ಹಾಗೂ ಇನ್ನೂ ಮೂವರು, ನನ್ನ ಕಾರಿಗೆ ಅಡ್ಡಗಟ್ಟಿ ಸ್ಯಾಮ್‌ಸಂಗ್ ಮೊಬೈಲ್, ಚಿನ್ನದ ಸರ, ₹27 ಸಾವಿರ ಹಣ ಕಿತ್ತುಕೊಂಡರು. ಬಳಿಕ ಕಬ್ಬಿಣದ ಸರಳುಗಳಿಂದನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ವಿಜಯ್ ಮಕಸಾರೆ ಅವರು ದೂರು ಸಲ್ಲಿಸಿದ್ದರು.

ತೃಪ್ತಿ ಹಾಗೂ ಇತರರು ಮಹರ್ ಸಮುದಾಯದವನಾದ ನನ್ನ ಜಾತಿ ನಿಂದನೆ ಮಾಡಿದರು ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದರು. ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

‘ದೂರುದಾರ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದರಿಂದ ಎಸ್‌ಸಿ/ಎಸ್‌ಟಿ ಸಮಯದಾಯಕ್ಕೆ ಸೇರಿದವರು ಎಂದು ಪರಿಗಣಿಸಲಾಗದು. ಪ್ರಕರಣ ನಡೆದ 10 ದಿನಗಳ ಬಳಿಕ ಈ ಅಪ್ಪಟ ಸುಳ್ಳು ದೂರು ದಾಖಲಿಸಲಾಗಿದೆ’ ಎಂದು  ತೃಪ್ತಿ ವಾದಿಸಿದ್ದರು.

ಈ ಕಾಯ್ದೆ ಅಡಿಯಲ್ಲಿ ದೂರು ದಾಖಲಾದರೆ ವಿಚಾರಣೆ ನಡೆಸದೆ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿತ್ತು.

ಆದರೆ, ಈ ತೀರ್ಪಿನಿಂದಾಗಿ ಕಾಯ್ದೆ ದುರ್ಬಲವಾಗಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳು ಉತ್ತರ ಭಾರತದಲ್ಲಿ ಪ್ರತಿಭಟನೆ ನಡೆಸಿದ್ದವು. ತೀರ್ಪನ್ನು ಪುನರ್‌ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry