ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷಗಳಿಂದ ಬಿಜೆಪಿ ಪ್ರಾಬಲ್ಯ

ವಿಧಾನ ಪರಿಷತ್‌ನ ಈಶಾನ್ಯ ಪದವೀಧರರ ಮತಕ್ಷೇತ್ರ
Last Updated 29 ಮೇ 2018, 8:36 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನ ಪರಿಷತ್‌ನ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಕಾವು ಹೆಚ್ಚುತ್ತಿದೆ. ಜೂನ್‌ 8ರಂದು ಮತದಾನ ನಡೆಯಲಿದ್ದು, ಪದವೀಧರ ಮತದಾರರ ಒಲವುಗಳಿಸಲು ಅಭ್ಯರ್ಥಿಗಳು ಬೆವರು ಸುರಿಸುತ್ತಿದ್ದಾರೆ.

ಈ ಕ್ಷೇತ್ರ ರಚನೆಯಾಗಿದ್ದು 1988ರಲ್ಲಿ. ಮೊದಲ ಚುನಾವಣೆಯಲ್ಲಿ ಕಲಬುರ್ಗಿಯ ಡಾ.ಎಂ.ಆರ್‌. ತಂಗಾ ಆಯ್ಕೆಯಾದರು. ಅವರು ಹ್ಯಾಟ್ರಿಕ್‌ ಸಾಧನೆಯನ್ನೂ ಮಾಡಿದರು. 2005ರಲ್ಲಿ ನಿಧನರಾದರು. 2006ರಲ್ಲಿ ರಾಯಚೂರು ಜಿಲ್ಲೆಯ ಮನೋಹರ ಮಸ್ಕಿ, 2012ರಲ್ಲಿ ಕಲಬುರ್ಗಿಯ ಅಮರನಾಥ ಪಾಟೀಲ ಅವರು ಆಯ್ಕೆಯಾದರು.

ಈ ಮೂವರೂ ಬಿಜೆಪಿಯವರು. 30 ವರ್ಷಗಳಿಂದ ಈ ಕ್ಷೇತ್ರದ ಮೇಲೆ ಬಿಜೆಪಿ ಬಿಗಿ ಹಿಡಿತ ಸಾಧಿಸಿದೆ. ಹೈದರಾಬಾದ್‌ ಕರ್ನಾಟಕ ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದು ಕರೆಸಿಕೊಳ್ಳುತ್ತಿದ್ದರೂ ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಹಿಂದಿನ ಐದು ಚುನಾವಣೆಗಳಲ್ಲಿ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ.

ದಿವಂಗತ ಡಾ.ಎಂ.ಆರ್‌. ತಂಗಾ ಅವರು ಅಲ್ಪಸಂಖ್ಯಾತ ಜೈನ ಸಮುದಾಯದವರು. ಆನಂತರ ಆಯ್ಕೆಗೊಂಡ ಇಬ್ಬರು ಲಿಂಗಾಯತರು. ಪ್ರಸಕ್ತ ಕಣದಲ್ಲಿರುವ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ಸಹ ಲಿಂಗಾಯತರು.

ಸದ್ಯ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಅಮರನಾಥ ಪಾಟೀಲ ಅವರ ಬದಲು ಬಿಜೆಪಿಯು ಕೆ.ಬಿ. ಶ್ರೀನಿವಾಸ್‌ ಅವರಿಗೆ ಟಿಕೆಟ್‌ ನೀಡಿದೆ. ಕೆ.ಬಿ. ಶ್ರಿನಿವಾಸ್‌ ಅವರು ಶಾಸಕ ಬಿ. ಶ್ರೀರಾಮುಲು ಅವರಿಗೆ ಆಪ್ತರು. ಕೆ.ಬಿ.ಶ್ರೀನಿವಾಸ್‌ ಅವರ ಪತ್ನಿ ರಾಣಿ ಸಂಯುಕ್ತಾ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷೆ.

ಬೀದರ್‌ ಜಿಲ್ಲೆ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಚಂದ್ರಶೇಖರ ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಜೆಡಿಎಸ್‌ ಬಳ್ಳಾರಿಯ ಪ್ರತಾಪ್‌ ರೆಡ್ಡಿ ಅವರಿಗೆ ಮಣೆ ಹಾಕಿದೆ.

ಮೂರೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಹಿಂದೆಯೇ ಟಿಕೆಟ್‌ ಘೋಷಣೆಯಾಗಿದ್ದರಿಂದ ಎಲ್ಲರೂ ಸಾಕಷ್ಟು ಮುಂಚಿತವಾಗಿಯೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ವಾಟಾಳ್‌ ಪ್ರವೇಶ: ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಇಲ್ಲಿ ಸ್ಪರ್ಧಿಸಿದ್ದಾರೆ. ಆದರೆ, ಅವರ ಪ್ರಚಾರದ ‘ಅಬ್ಬರ’ ಇನ್ನೂ ಕಂಡುಬಂದಿಲ್ಲ.

ಜೆಡಿಎಸ್‌ ಟಿಕೆಟ್‌ ಆಂಕಾಕ್ಷಿಯಾಗಿದ್ದ ರಾಯಚೂರಿನ ಹೋರಾಟಗಾರ ಡಾ.ರಜಾಕ್‌ ಉಸ್ತಾದ್‌ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ನಿಂಗಯ್ಯ ಶಂಕ್ರಯ್ಯ ಮಠ, ಮಣೂರೆ ಅಶೋಕ ಕುಮಾರ್, ರಮೇಶ್ ಶಾಸ್ತ್ರಿ, ರಾಹುಲ್ ಬಸವಣ್ಣಪ್ಪ, ಎಲ್.ಪಿ.ಸುಭಾಶ್ಚಂದ್ರ (ಎಲ್ಲರೂ ಪಕ್ಷೇತರ) ಅವರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಟ್ಟು ಮತದಾರರಲ್ಲಿ ಕಲಬುರ್ಗಿ ಜಿಲ್ಲೆಯವರು ಶೇ 25ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಸಂಖ್ಯೆ ನಿರ್ಣಾಯಕ ಪಾತ್ರವಹಿಸುವಷ್ಟು ಇದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಕಲಬುರ್ಗಿಯವರಿಗೆ ಆದ್ಯತೆ ನೀಡಿಲ್ಲ ಎಂಬ ಅಸಮಾಧಾನವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT