ಬಂದ್ : ಬೆಳ್ತಂಗಡಿಯಲ್ಲಿ ವ್ಯವಹಾರ ಅಬಾಧಿತ

7
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ– ರೈತರ ಸಾಲಮನ್ನಾಕ್ಕೆ ಆಗ್ರಹ

ಬಂದ್ : ಬೆಳ್ತಂಗಡಿಯಲ್ಲಿ ವ್ಯವಹಾರ ಅಬಾಧಿತ

Published:
Updated:
ಬಂದ್ : ಬೆಳ್ತಂಗಡಿಯಲ್ಲಿ ವ್ಯವಹಾರ ಅಬಾಧಿತ

ಬೆಳ್ತಂಗಡಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಳಿತದ ರೈತ ವಿರೋಧಿ ನಿಲುವನ್ನು ಖಂಡಿಸಿ ಸೋಮವಾರ ಕರ್ನಾಟಕ ಬಂದ್ ಕರೆ ನೀಡಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗಿನಿಂದಲೇ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಓಡಾಟ ನಿರಂತರವಾಗಿತ್ತು. ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ನಡೆದಿತ್ತು. ವಾರದ ಸಂತೆಗೆ ಯಾವುದೇ ಅಡೆತಡೆ ಇರಲಿಲ್ಲ. ಸ್ವಂತ ವಾಹನದಲ್ಲಿ ಸಂಚರಿಸುವವರಿಗೆ ಯಾವುದೇ ಸಮಸ್ಯೆಗಳು ಆಗಿಲ್ಲ.

ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸಿದ್ದು ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ಓಡಾಟ ನಿರಂತರವಾಗಿತ್ತು. ಸರ್ಕಾರಿ ಹಾಗೂ ಖಾಸಗಿ ಕಚೇರಿಯ ಸಿಬ್ಬಂದಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಹೋಟೆಲ್, ದಿನಸಿ ಹಾಗೂ ಅಂಗಡಿ ಜನಸಂಖ್ಯೆ ಕಡಿಮೆ ಇತ್ತು.

ಗೊಂದಲದಲ್ಲಿ ಜನ: ಭಾನುವಾರದ ವರೆಗೂ ತಾಲ್ಲೂಕು ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿ ಅಧಿಕೃತ ಘೋಷಣೆ ಆಗಿರಲಿಲ್ಲ.  ಬಂದ್‍ಗೆ ಸಹಕಾರ ಭಾರತಿ ವತಿಯಿಂದ ಬೆಂಬಲ ಇತ್ತು. ಅಂಗಡಿ-ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರು.

ಆಟೊ ರಿಕ್ಷಾ, ಜೀಪು ಹಾಗೂ ಟೆಂಪೂಗಳ ಓಡಾಟ ಎಂದಿನಂತೆ ಇತ್ತು.  ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು.

ಬಿಗಿ ಬಂದೋಬಸ್ತು: ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪೋಲಿಸ್ ಇಲಾಖೆಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರನ್ನು ನಿಯೋಜಿಸಲಾಗಿತ್ತು.  ಬೆಳ್ತಂಗಡಿ-ಗುರುವಾಯನಕೆರೆ ರಾಷ್ಟ್ರೀಯ ಹೆದ್ದಾರಿಯ ಹಳೆಕೋಟೆ ಸಮೀಪ ರಸ್ತೆಯಲ್ಲಿ ಟೈರ್‍ಗೆ ಬೆಂಕಿ ಹಚ್ಚಲಾಗಿತ್ತು.

ಪ್ರತಿಭಟನೆ, ಧರಣಿ: ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಬಿಜೆಪಿ ರೈತ ಮೋರ್ಚಾದ ತಾಲ್ಲೂಕು ಘಟಕದ ವತಿಯಿಂದ ಶಾಸಕ ಹರೀಶ ಪೂಂಜ ನೇತೃತ್ವದಲ್ಲಿ ಧರಣಿ ಹಾಗೂ ಪ್ರತಿಭಟನೆ ನಡೆಯಿತು. ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಕಡಬ ಪೇಟೆ ರೈತರ ಬಂದ್‍ಗೆ ಬೆಂಬಲ

ಕಡಬ(ಉಪ್ಪಿನಂಗಡಿ):  ಚುನಾವಣೆಗೂ ಮುನ್ನ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿ ಆದ ಬಳಿಕ ವರಸೆ ಬದಲಾಯಿಸಿದ್ದಾರೆ ಎಂದು ಇವರ ನಡೆ ವಿರುದ್ದ ಬಿಜೆಪಿ ನೀಡಿದ್ದ ಸೋಮವಾರ ಸ್ವಯಂಪ್ರೇರಿತ ರಾಜ್ಯ ಬಂದ್ ಕರೆಗೆ ಕಡಬದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಪೇಟೆ ಬಂದ್ ಆಗಿರುವುದು ಕಂಡು ಬಂದಿದೆ.

ಪೇಟೆಯ ಎಲ್ಲಾ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ, ಹೋಟೇಲುಗಳನ್ನು ಮುಚ್ಚಿದ್ದರು. ಶಾಲಾ ಕಾಲೇಜುಗಳು, ಕಡಬ ನಾಡ ಕಛೇರಿ, ತಹಸೀಲ್ದಾರ್ ಕಚೇರಿ, ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕುಗಳು ಎಂದಿನಂತೆ ತೆರೆದಿದ್ದರೂ ಜನ ಸಂಚಾರ ತೀರಾ ವಿರಳತೆ ಇತ್ತು. ಏಕೈಕ ಸರ್ಕಾರಿ ಮದ್ಯದಂಗಡಿಯೂ ಬಂದ್ ಆಗಿತ್ತು. ಖಾಸಗಿ ಆಸ್ಪತ್ರೆ ಕಾರ್ಯಚರಿಸುತ್ತಿತ್ತು.

ಮಿಶ್ರ ಪ್ರತಿಕ್ರಿಯೆ: ಕಡಬ ತಾಲ್ಲೂಕು ವ್ಯಾಪ್ತಿಯ ಕೊಯಿಲ, ರಾಮಕುಂಜ, ಆತೂರು, ಆಲಂಕಾರು, ಮರ್ದಾಳ, ನೂಜಿಬಾಳ್ತಿಲ, ಕುಂತೂರು, ಮೊದಲಾದೆಡೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಉಪ್ಪಿನಂಗಡಿ ಸಹಜ: ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು, ಹೊಟೇಲ್ ವ್ಯವಹಾರ, ವ್ಯಾಪಾರ ಎಂದಿನಂತೆ ನಡೆಯುತ್ತಿದ್ದುದು ಕಂಡು ಬಂದಿದೆ. ಶಾಲಾ, ಕಾಲೇಜುಗಳು, ಬೇಂಕ್ ವ್ಯವಹಾರಗಳೂ ಮಾಮೂಲಿಯಾಗಿ ನಡೆಯುತ್ತಿತ್ತು. ವಾಹನ ಸಂಚಾರ, ಬಸ್ ಓಡಾಟ ಎಂದಿನಂತೆ ಇದ್ದು, ಬಂದ್ ಬೆಂಬಲ ವ್ಯಕ್ತವಾಗದೆ ಇದ್ದುದು ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry