ಆಗ ಕಾಶಪ್ಪನವರ, ಈಗ ನ್ಯಾಮಗೌಡ!

7
ರಸ್ತೆ ಅಪಘಾತವೆಂಬ ಹೆಮ್ಮಾರಿಗೆ ಬಲಿಯಾದ ಜಿಲ್ಲೆಯ ಇಬ್ಬರು ಶಾಸಕರು

ಆಗ ಕಾಶಪ್ಪನವರ, ಈಗ ನ್ಯಾಮಗೌಡ!

Published:
Updated:
ಆಗ ಕಾಶಪ್ಪನವರ, ಈಗ ನ್ಯಾಮಗೌಡ!

ಬಾಗಲಕೋಟೆ: ರಸ್ತೆ ಅಪಘಾತವೆಂಬ ಹೆಮ್ಮಾರಿಗೆ ಜಿಲ್ಲೆಯಲ್ಲಿ ಬಲಿಯಾದ ಶಾಸಕರಲ್ಲಿ ಸಿದ್ದು ನ್ಯಾಮಗೌಡ ಎರಡನೆ

ಯವರು. 15 ವರ್ಷಗಳ ಹಿಂದೆ ಹುನಗುಂದ ಶಾಸಕ ಎಸ್‌.ಆರ್‌.ಕಾಶಪ್ಪನವರ ಅಪಘಾತಕ್ಕೆ ಬಲಿಯಾಗಿದ್ದರು. ಶಾಸಕರಾಗಿದ್ದ ವೇಳೆ ನಡೆದ ಅಪಘಾತಗಳಲ್ಲಿ ಬಾಗಲಕೋಟೆಯ ಬಿ.ಟಿ.ಮುರನಾಳ ಕಾಲು ಕಳೆದುಕೊಂಡರೆ, ಎಚ್.ವೈ.ಮೇಟಿ ಹಾಗೂ ಶ್ರೀಕಾಂತ ಕುಲಕರ್ಣಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

2003ರ ಜೂನ್‌ 26ರಂದು ಹುನಗುಂದ ಶಾಸಕ ಎಸ್.ಆರ್.ಕಾಶಪ್ಪನವರ ಕೂಡ್ಲಿಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದರು. ಕಾಶಪ್ಪನವರ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೊ ಕಾರು ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಕಾಶಪ್ಪನವರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು.

ಅಪಘಾತದಿಂದ ಪಾರಾದವರು: ಬಾಗಲಕೋಟೆ ಕ್ಷೇತ್ರದ ಮೊದಲ ಶಾಸಕ ಬಿ.ಟಿ.ಮುರನಾಳ ಕೂಡ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ನಗರದ ಸಮೀಪವೇ ಅವರು ಪ್ರಯಾಣಿಸುತ್ತಿದ್ದ ಜೀಪು ಅಪಘಾತಕ್ಕೀಡಾಗಿತ್ತು. 2005ರಲ್ಲಿ ಗುಳೇದಗುಡ್ಡ ಶಾಸಕರಾಗಿದ್ದ ಎಚ್.ವೈ.ಮೇಟಿ ಬೆಳಗಲ್‌ ಕ್ರಾಸ್‌ ಬಳಿ ನಡೆದ ಅಪಘಾತದಲ್ಲಿ ತೀವ್ರ ಗಾಯ

ಗೊಂಡು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಒಂದು ತಿಂಗಳು ಕಾಲ ಚಿಕಿತ್ಸೆ ಪಡೆದಿದ್ದರು.

ಜಮಖಂಡಿ ಶಾಸಕರಾಗಿದ್ದ ವೇಳೆ ಶ್ರೀಕಾಂತ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಎದುರಿಗೆ ಬಂದ ಬೈಕ್ ಸವಾರಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಸಿ.ಡಿಗೆ ಗುದ್ದಿತ್ತು. ಆಗ ಕುಲಕರ್ಣಿ ತೀವ್ರ ಗಾಯಗೊಂಡಿದ್ದರು. ತಲೆಗೆ ಪೆಟ್ಟು ಬಿದ್ದು ಒಂದು ವಾರ ಪ್ರಜ್ಞಾಹೀನರಾಗಿದ್ದರು. ಮುಂದೆ 3 ತಿಂಗಳು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

2008ರಲ್ಲಿ ಬಾದಾಮಿ ಶಾಸಕರಾಗಿದ್ದ ಎಂ.ಕೆ.ಪಟ್ಟಣಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ದಾವಣಗೆರೆ ಬಳಿ ಅಪಘಾತಕ್ಕೀಡಾಗಿತ್ತು. ಆಗ ಪಟ್ಟಣಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಪತ್ನಿ ಶಾಂತಾಬಾಯಿ ಅವರ ಕಾಲು ಮುರಿದಿತ್ತು. ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದ ಜನವರಿ 26ರಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಪ್ರಯಾಣಿಸುತ್ತಿದ್ದ ಕಾರು ಅಮೀನಗಡ ಬಳಿ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗೆ ಡಿಕ್ಕಿ ಹೊಡೆದು ಕಾರು ಜಖಂಗೊಂಡಿತ್ತು. ಕಳೆದ ವರ್ಷ ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಇದ್ದ ಕಾರು ಕೆರೂರ ಬಳಿ ಉರುಳಿಬಿದ್ದಿತ್ತು.

ಇನ್ನೂ ಮರೆಯಾಗದ ಕಹಿ: ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿ ವಾಹನ ಪ್ರಯಾಣಿಕರ ಪಾಲಿಗೆ ಹೆಮ್ಮಾರಿಯಾ

ಗಿಯೇ ಪರಿಣಮಿಸಿದೆ. 15 ದಿನಗಳ ಹಿಂದಷ್ಟೇ ತಾಲ್ಲೂಕಿನ ಸಂಗಮ ಕ್ರಾಸ್‌ನಲ್ಲಿ ಲಾರಿ–ಜೀಪ್ ನಡುವೆ ಅಪಘಾತ ಸಂಭವಿಸಿ, ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಡಿವೈಎಸ್‌ಪಿ ಬಾಳೇಗೌಡ ಸೇರಿದಂತೆ ಮೂವರು ಸಾವಿಗೀಡಾ

ಗಿದ್ದರು. ಈ ಘಟನೆ ಮರೆಯಾಗುವ ಮುನ್ನವೇ ನ್ಯಾಮಗೌಡ ಅವರನ್ನು ಜವರಾಯ ಬರಸೆಳೆದಿದ್ದಾನೆ.

ಜಿಲ್ಲಾಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ..

ಸಿದ್ದು ನ್ಯಾಮಗೌಡ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಲ್ಲಿನ ನವನಗರದ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹಾಜರಿದ್ದರು. ಶವಾಗಾರದ ಹೊರಗೆ ನೆರೆದಿದ್ದ ದೊಡ್ಡ ಸಂಖ್ಯೆಯ ಬೆಂಬಲಿಗರು ಕಂಬನಿ ಮಿಡಿದರು. ನಂತರ ಆ್ಯಂಬುಲೆನ್ಸ್‌ನಲ್ಲಿ ಜಮಖಂಡಿಗೆ ಶವ ಕೊಂಡೊಯ್ಯಲಾಯಿತು.

ಸರ್ಕಾರಿ ಗೌರವ ಸಲ್ಲಿಕೆ: ಸಿದ್ದು ನ್ಯಾಮಗೌಡ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನಡೆಯಲಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ನಿಖರ ಕಾರಣ ಗೊತ್ತಾಗಬೇಕಿದೆ: ‘ಅಪಘಾತದ ನಿಖರ ಕಾರಣದ ಬಗ್ಗೆ ಕಾರು ಚಾಲಕ ಪರಮಾನಂದ ಅಂಬಿ ಬಳಿ ಮಾಹಿತಿ ಪಡೆಯಬೇಕಿದೆ. ಅವರು ಪ್ರಜ್ಞಾಹೀನರಾಗಿದ್ದು ಚಿಕಿತ್ಸೆಗೆ ದಾಖಲಾಗಿರುವುದರಿಂದ ಈಗಲೇ ಏನೂ ಹೇಳಲು ಆಗುವುದಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್‌ಪಿ ವಂಶಿಕೃಷ್ಣ, ‘ತಜ್ಞರ ತಂಡ ವರದಿ ನೀಡಿದ ಬಳಿಕವೇ ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದರು.

ಪಕ್ಷ ಭೇದ ಮರೆತು ಮಿಡಿದರು

ಬೆಳಗಿನ ಜಾವ ಅಪಘಾತದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಜಿಲ್ಲೆಯ ರಾಜಕಾರಣಿಗಳು ಪಕ್ಷ ಭೇದ ಮರೆತು ಸಂಕಷ್ಟಕ್ಕೆ ಮಿಡಿದರು. ಶಾಸಕರಾದ ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಜೆ.ಟಿ.ಪಾಟೀಲ, ಪಿ.ಎಚ್.ಪೂಜಾರ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ ಕೆರೂಡಿ ಆಸ್ಪತ್ರೆಗೆ ಧಾವಿಸಿದರು.

ಅಲ್ಲಿಂದ ಶವಾಗಾರ ಬಳಿ ಬಂದು ಅಲ್ಲಿ ವಿಧಿ–ವಿಧಾನಗಳು ಪೂರ್ಣಗೊಳ್ಳುವವರೆಗೂ ಇದ್ದು, ಸಿದ್ದು ನ್ಯಾಮಗೌಡರ ಪುತ್ರ ಆನಂದ್ ಅವರಿಗೆ ಸಾಂತ್ವನ ಹೇಳಿದರು.

ಬಂದ್ ಕರೆ ಹಿಂದಕ್ಕೆ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಂದ್‌ಗೆ ನೀಡಿದ್ದ ಕರೆಯನ್ನು ಬಿಜೆಪಿ ಜಿಲ್ಲಾ ಘಟಕ ಹಿಂದಕ್ಕೆ ಪಡೆಯಿತು. ಸಿದ್ದು ನ್ಯಾಮಗೌಡರ ಗೌರವಾರ್ಥ ಜಿಲ್ಲೆಯಾದ್ಯಂತ ಬಂದ್ ಕರೆ ಹಿಂದಕ್ಕೆ ಪಡೆದಿರುವುದಾಗಿ ಪಕ್ಷದ ಜಿಲ್ಲಾ ವಕ್ತಾರ ಜಯಂತ ಕುರಂದವಾಡ ಪ್ರಕಟಣೆ ನೀಡಿದರು.

**

ಸಿದ್ದು ನ್ಯಾಮಗೌಡ ವಿಶೇಷವಾಗಿ ಸೈಕ್ಲಿಂಗ್ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು. ಜಮಖಂಡಿಯಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದರು. ಇದು ಕ್ರೀಡಾಲೋಕಕ್ಕೆ ಆದ ನಷ್ಟ

ಭಾಸ್ಕರರಾವ್, ಕೆಎಸ್‌ಆರ್‌ಪಿ ಎಡಿಜಿಪಿ, ಸೈಕ್ಲಿಸ್ಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry