ರಾಜ್ಯದ ಶಶಾಂಕ್‌ಗೆ 496 ಅಂಕ

7
ಬೆಂಗಳೂರಿನ ಆರ್ಮಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ

ರಾಜ್ಯದ ಶಶಾಂಕ್‌ಗೆ 496 ಅಂಕ

Published:
Updated:
ರಾಜ್ಯದ ಶಶಾಂಕ್‌ಗೆ 496 ಅಂಕ

ಬೆಂಗಳೂರು: ನಗರದ ಆರ್ಮಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ಶಶಾಂಕ್‌, ಮಂಗಳವಾರ ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದಲ್ಲಿ 500ಕ್ಕೆ 496 ಅಂಕ ಪಡೆದಿದ್ದಾರೆ.

ಎಚ್‌ಬಿಆರ್‌ ಲೇಔಟ್‌ನ ಸಿಎಂಆರ್‌ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಆದಿತ್ಯ ಫಿಲಿಪ್ಸ್‌ 492 ಅಂಕ ಗಳಿಸಿದ್ದಾರೆ.

ಕಠಿಣವಾದ ವಿಷಯದಲ್ಲೇ ಹೆಚ್ಚು ಅಂಕ: ‘ನನಗೆ ವಿಜ್ಞಾನ ವಿಷಯ ಮೊದಲಿನಿಂದಲೂ ಕಠಿಣ ಎನಿಸಿತ್ತು. ಅದಕ್ಕಾಗಿ ಇದೇ ವಿಷಯವನ್ನು ಹೆಚ್ಚು ಓದಿದೆ. ದಿನಕ್ಕೆ ಹೆಚ್ಚಿನ ಅವಧಿಯನ್ನು ವಿಜ್ಞಾನಕ್ಕಾಗಿ ಮೀಸಲಿಟ್ಟಿದ್ದೆ. ಆದರೆ ಫಲಿತಾಂಶ ಬಂದಾಗ ಆಶ್ಚರ್ಯ ಆಯಿತು. ವಿಜ್ಞಾನದಲ್ಲಿ ನನಗೆ 100 ಅಂಕ ಸಿಕ್ಕಿದೆ’ ಎಂದು ಶಶಾಂಕ್‌ ಸಂತಸ ಹಂಚಿಕೊಂಡರು.

‘ಅಪ್ಪ, ಅಮ್ಮ ಇಬ್ಬರೂ ವೈದ್ಯರು. ನನ್ನ ಓದಿಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ದಿನದಲ್ಲಿ ಹೆಚ್ಚಿನ ಅವಧಿ ನಾನು ಓದುತ್ತಿದ್ದೆ. ಬೇರೆ ವಿಷಯಗಳಲ್ಲಿ ನನಗೆ ಅಷ್ಟೊಂದು ಆಸಕ್ತಿ ಇಲ್ಲ’ ಎಂದರು.

ಶಶಾಂಕ್‌ ಇಂಗ್ಲಿಷ್‌ನಲ್ಲಿ 99, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನ 98, ಕಂಪ್ಯೂಟರ್‌ ಸೈನ್ಸ್‌ 100 ಅಂಕ ಪಡೆದಿದ್ದಾರೆ.

ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್‌: ‘ದಿನಕ್ಕೆ 4ರಿಂದ 5 ತಾಸು ಓದುತ್ತಿದ್ದೆ. ಓದಿನ ಏಕತಾನತೆ ಕಳೆಯಲು ಕರಾಟೆ, ಫುಟ್‌ಬಾಲ್‌, ಬ್ಯಾಡ್ಮಿಂಟನ್ ಆಡುತ್ತಿದ್ದೆ. ಇದರಿಂದಾಗಿ ಕ್ರೀಡೆಯ ಮೇಲೂ ಆಸಕ್ತಿ ಬೆಳೆಯಿತು. ಕರಾಟೆಯಲ್ಲಿಯೂ ಬ್ಲ್ಯಾಕ್‌ ಬೆಲ್ಟ್‌ ಪಡೆದಿದ್ದೇನೆ’ ಎಂದು ಆದಿತ್ಯ ಫಿಲಿಪ್ಸ್‌ ತಮ್ಮ ಸಂತಸ ಹಂಚಿಕೊಂಡರು.

‘ನಾನು ಕ್ರೀಡೆ ಹಾಗೂ ಓದು ಎರಡಕ್ಕೂ ಸಮಾನವಾದ ಪ್ರಾಮುಖ್ಯತೆ ನೀಡಿದ್ದೆ. ಕೆಂಪೊ ಕರಾಟೆ ಶಾಲೆಯ ಪಂಜುಮೂರ್ತಿ ಅವರು ಮನೆಗೆ ಬಂದು ಕರಾಟೆ ಹೇಳಿಕೊಡುತ್ತಿದ್ದರು. ಶಿಕ್ಷಕರ ಸಹಾಯದಿಂದ ಉತ್ತಮವಾಗಿ ಓದಲು ಸಾಧ್ಯವಾಯಿತು. ಮೊದಲಿನಿಂದಲೂ ನನಗೆ ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ. ಆದ್ದರಿಂದ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ನಲ್ಲಿ ವ್ಯಾಸಂಗ ಮಾಡುವ ಕನಸಿದೆ’ ಎಂದು ಹೇಳಿದರು.

ಫಿಲಿಪ್ಸ್‌ ಅವರು ಇಂಗ್ಲಿಷ್‌ನಲ್ಲಿ 98, ಹಿಂದಿ 97, ಗಣಿತ 98, ವಿಜ್ಞಾನ 99, ಸಮಾಜ ವಿಜ್ಞಾನ 100 ಅಂಕ ಗಳಿಸಿದ್ದಾರೆ.

ಭಾಷೆ ವಿಷಯದಲ್ಲಿ ನಾನು ಹಿಂದೆ: ‘ಮೊದಲಿನಿಂದಲೂ ನನಗೆ ಹಿಂದಿ, ಇಂಗ್ಲಿಷ್‌ ಭಾಷೆಯ ವಿಷಯಗಳಲ್ಲೇ ಕಡಿಮೆ ಅಂಕ ಬರುತ್ತಿತ್ತು. ಅಂತಿಮ ಫಲಿತಾಂಶದಲ್ಲಿಯೂ ಹಾಗೆಯೇ ಆಗಿದೆ. ಗಣಿತದಲ್ಲಿ 98, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನ 98, ಹಿಂದಿ 95, ಇಂಗ್ಲಿಷ್‌ 91 ಅಂಕ ಬಂದಿದೆ’ ಎಂದು ಐಟಿಪಿಎಸ್‌ನ ಏಕ್ಯಾ ಶಾಲೆಯ ವಿದ್ಯಾರ್ಥಿ, ಒಟ್ಟು 482 ಅಂಕ ಗಳಿಸಿರುವ ಆದಿತ್ಯ ಕಾಂತಿ ಹೇಳಿದರು.

‘ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಓದಿದ್ದರಿಂದ ಹೆಚ್ಚು ಉಪಯೋಗ ಆಯಿತು. ಅಪ್ಪ, ಅಮ್ಮ ಎಲ್ಲಾ ಹಂತದಲ್ಲೂ ಸಹಾಯ ಮಾಡಿದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry