ಮೋದಿ, ಅಮಿತ್‌ ಶಾ ಪ್ರತಿಕೃತಿ ದಹನ

7
ಮಹದಾಯಿ ಯೋಜನೆ ಬಿಕ್ಕಟ್ಟು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ: ಜೆಡಿಎಸ್‌ ಆರೋಪ

ಮೋದಿ, ಅಮಿತ್‌ ಶಾ ಪ್ರತಿಕೃತಿ ದಹನ

Published:
Updated:
ಮೋದಿ, ಅಮಿತ್‌ ಶಾ ಪ್ರತಿಕೃತಿ ದಹನ

ಬೆಳಗಾವಿ: ‘ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹದಾಯಿ–ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಬಿಕ್ಕಟ್ಟು ಬಗೆಹರಿಸುವಲ್ಲಿ ಹಾಗೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ’ ಎಂದು ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ‘ಮಹದಾಯಿ ಬಿಕ್ಕಟ್ಟನ್ನು ಬಗೆಹರಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಮಾತಿನಂತೆ ನಡೆದುಕೊಳ್ಳಬೇಕು. ತಕ್ಷಣ ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದು ಇತ್ಯರ್ಥ ಪಡಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳಗಾವಿ, ಧಾರವಾಡ, ಗದಗ ರೈತರು ಮಹದಾಯಿ ನೀರಿನ ಮೇಲೆ ಅವಲಂಬನೆಯಾಗಿದ್ದಾರೆ. ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಮಹದಾಯಿ ನೀರೇ ಪರಿಹಾರ’ ಕೇಂದ್ರ ಸರ್ಕಾರ ಇದರತ್ತ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಈಗ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹80ಕ್ಕೆ ತಲುಪಿದೆ. ಇದು ಜನ ಸಾಮಾನ್ಯರ ಮೇಲೆ ಹೊರೆಯಾಗಿ ಪರಿಣಮಿಸಿದೆ. ಮೋದಿ ಅವರು ತಕ್ಷಣ ಬೆಲೆ ಇಳಿಸಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಇಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ ಮೇಲೆ ಗೋಲಿಬಾರ್‌ ಮಾಡಿಸಿದ್ದರು. ಇವತ್ತು ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗಿಂತ ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಅವರು ಏಕೆ ಮನ್ನಾ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ಮಹಾದೇವ ನಡುವಿನಮನಿ, ಚನ್ನಪ್ಪ ವಗ್ಗನ್ನವರ, ಫೈಜುಲ್ಲಾ ಮಾಡಿವಾಲೆ, ಮೇಘಾ ಕುಂದರಗಿ, ಅಶ್ಫಾಕ್‌ ಮಡಕಿ, ಶಾರದಾ ಡಾವಳಿ, ಅಖಿಲಾ ಪಠಾಣ, ಸುನೀತಾ ಲಾಟಕರ, ಶ್ರೀಶೈಲ ಫಡಗಲ್‌, ಸಂತೋಷ ಉಪಾಧ್ಯಾಯ, ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry