ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೆಂಬ್ಲೀಲಿ ಯಂಗ್ ವಾಯ್ಸ್

Last Updated 7 ಜೂನ್ 2018, 15:01 IST
ಅಕ್ಷರ ಗಾತ್ರ

ಯುವಸಮೂಹವನ್ನು ನಿರ್ಲಕ್ಷಿಸಿ ರಾಜಕಾರಣ ಮಾಡುವುದು ಇಂದು ಅಸಾಧ್ಯವೇ ಸರಿ ಎನ್ನುವಷ್ಟರ ಮಟ್ಟಿಗೆ ಯುವಕರು ಇಂದು ರಾಜಕೀಯಕ್ಕೆ ಅನಿವಾರ್ಯವಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಮೂಹವು ಇಂದು ಬಹುದೊಡ್ಡ ‘ಮತಬ್ಯಾಂಕ್‌’ ಆಗಿದೆ.

53 ಲಕ್ಷ ಹೊಸ ಮತದಾರರು ಸೇರಿ ಒಟ್ಟು ಎರಡು ಕೋಟಿಗೂ ಹೆಚ್ಚು ಮತದಾರರು 40 ವರ್ಷದೊಳಗಿನವರು. ಈ ಸಮೂಹವನ್ನು ಸೆಳೆಯಲು ಪಕ್ಷಗಳು ಯುವ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿದವು. ಪರಿಣಾಮ, ಬಿಜೆಪಿ 104 ಶಾಸಕರ ಪೈಕಿ 22 ಜನ ಮೊದಲ ಬಾರಿಗೆ ಶಾಸಕರಾದರು. ಅದರಂತೆ, ಕಾಂಗ್ರೆಸ್‌ನಲ್ಲಿ 19 ಹಾಗೂ ಜೆಡಿಎಸ್‌ನಲ್ಲಿ ಎಂಟು ಶಾಸಕರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಚುನಾವಣೆಗೂ ಕೆಲವು ವರ್ಷಗಳ ಮೊದಲೇ ಸಮಾಜೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ಧುಮುಕಿದವರು ಕೆಲವರಾದರೆ, ರಾಜಕಾರಣದಲ್ಲಿರುವ ತಂದೆಯ ‘ಪ್ರಭಾವ’ ಬಳಸಿಕೊಂಡು ರಾಜಕೀಯ ಮೆಟ್ಟಿಲು ಹತ್ತಿದವರು ಹಲವರು. ಆದರೆ, ಪ್ರಮುಖವಾಗಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಗೆದ್ದು ಬಂದವರೇ ಅನೇಕ.

‘ಸೇವಾಕೇಂದ್ರಿತ ರಾಜಕೀಯಕ್ಕೆ ಸೋಲಿಲ್ಲ’
‘ಸೇವೆಯನ್ನೇ ಕೇಂದ್ರವಾಗಿಟ್ಟುಕೊಂಡು ರಾಜಕಾರಣ ಮಾಡಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ’ ಎನ್ನುತ್ತಾರೆ ಹಾಸನದ ಶಾಸಕ ಪ್ರೀತಂ ಗೌಡ. 1999ರ ನಂತರ ಹಾಸನದಲ್ಲಿ ಕಮಲ ಅರಳುವಂತೆ ಮಾಡಿದ ಸಾಧನೆ 37 ವರ್ಷದ ಪ್ರೀತಂ ಅವರದ್ದು.

ಸ್ವಚ್ಛ ಭಾರತ ಅಭಿಯಾನದ ಮೂಲಕ ಸೇವಾಕ್ಷೇತ್ರಕ್ಕೆ ಕಾಲಿರಿಸಿದ ಪ್ರೀತಂ, ನಾಲ್ಕು ವರ್ಷಗಳಿಂದ ನಿತ್ಯ 25 ಸಾವಿರ ಮನೆಗಳ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಿ ಜನರಿಗೆ ಹತ್ತಿರವಾದವರು. ಬರಗಾಲದ ಸಂದರ್ಭದಲ್ಲಿ ಟ್ಯಾಂಕರ್‌ ನೀರು ತರಿಸಿಕೊಡುವ ಮೂಲಕ ಅವರ ವಿಶ್ವಾಸ ಗಳಿಸಿದರು.

‘ಹಾಸನದಲ್ಲಿ ಒಂದು ಶಕ್ತಿ ಅಥವಾ ಒಂದು ಜಾತಿಯ ಮೇಲೆ ರಾಜಕೀಯ ನಡೆಯುತ್ತದೆ ಎಂಬ ಕಲ್ಪನೆ ಹೊರಗಿನವರಿಗಿದೆ. ಆದರೆ ಹೀಗೆ ಜಾತಿ ರಾಜಕೀಯ ಮಾಡದೆ, ಸಮಾಜ ಸೇವಾ ಕಾರ್ಯ ಕೈಗೊಂಡರೆ ಈ ಮನೋಭಾವ ಬದಲಿಸಬಹುದು ಎಂದುಕೊಂಡೆ. ಅದರಂತೆ ನಡೆದುಕೊಂಡಿದ್ದಕ್ಕೆ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ.  ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಿಂದ ಬಿಇ ಪದವಿ ಪಡೆದಿರುವ ಪ್ರೀತಂ, ಲೆವಿಸ್‌ ಕಂಪನಿಯ ಬಿಸಿನೆಸ್‌ ಹೆಡ್‌ ಆಗಿಯೂ ಕೆಲಸ ಮಾಡಿದ್ದಾರೆ.

‘ರಾಜಕಾರಣ ಎನ್ನುವುದು ಬಿಸಿನೆಸ್‌ ಅಲ್ಲ. ಅದೊಂದು ಸೇವಾ ಕಾರ್ಯ. ಈ ಕ್ಷೇತ್ರಕ್ಕೆ ಬರಲು ತ್ಯಾಗ ಮನೋಭಾವ ಇರಬೇಕು. ಕ್ಷೇತ್ರದ ಬಗ್ಗೆ ಸ್ಪಷ್ಟ ಕಲ್ಪನೆ ಮತ್ತು ಜನರ ಕೆಲಸ ಮಾಡುವ ಬದ್ಧತೆ ಇರಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ಸುಳ್ಳು ಆರೋಪಗಳಿಗೆ ಎದೆಗುಂದಬಾರದು’
‘ನೀವು ಎಷ್ಟೇ ಪ್ರಾಮಾಣಿಕರಾಗಿದ್ದರೂ, ರಾಜಕೀಯ ಪ್ರವೇಶಿಸಿದ ಕೂಡಲೇ ಎದುರಾಳಿಗಳು ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾರೆ. ಅಧೀರರನ್ನಾಗಿಸುತ್ತಾರೆ. ಅದಕ್ಕೆ ಎದೆಗುಂದಬಾರದು’ ಎಂದು ರಾಜಕೀಯ ಕ್ಷೇತ್ರಕ್ಕೆ ಬರಲು ಇಚ್ಛಿಸುವವರಿಗೆ ಕಿವಿಮಾತು ಹೇಳುತ್ತಾರೆ ಮೈಸೂರು ಜಿಲ್ಲೆಯ ಟಿ. ನರಸೀಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಅಶ್ವಿನ್‌ಕುಮಾರ್.

ಅನುಭವಿ ರಾಜಕಾರಣಿ ಡಾ. ಎಚ್.ಸಿ. ಮಹದೇವಪ್ಪನವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, ರಾಜಕಾರಣದಲ್ಲಿ ಸಂಘಟನಾ ಶಕ್ತಿಯೇ ಮುಖ್ಯ ಎಂದು ಅಭಿಪ್ರಾಯ ಪಡುತ್ತಾರೆ.

‘ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಅದಕ್ಕೂ ಮೊದಲು ಎಪಿಎಂಸಿ ಚುನಾವಣೆ, ಗ್ರಾಮ ಪಂಚಾಯ್ತಿ ಚುನಾವಣೆ ಮಾಡಿದ ಅನುಭವವಿತ್ತು. ಸಂಘಟನೆ ಮಾಡಿದರೆ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಅದರಂತೆ ನಡೆದುಕೊಂಡೆ’ ಎಂದು ಅಶ್ವಿನ್‌ಕುಮಾರ್ ಹೇಳುತ್ತಾರೆ.

‘ಸ್ಪಷ್ಟ ಗುರಿ ಇಟ್ಟುಕೊಂಡು ರಾಜಕೀಯ ಪ್ರವೇಶಿಸಬೇಕು. ಜನರೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿರಬೇಕು. ಎರಡು ದೋಣಿಗಳಲ್ಲಿ ಕಾಲಿಟ್ಟುಕೊಂಡು ಈ ಕ್ಷೇತ್ರಕ್ಕೆ ಬರಲೇಬಾರದು’ ಎಂದು ಹೇಳುತ್ತಾರೆ ಎಂ.ಟೆಕ್ ಪದವೀಧರ ಅಶ್ವಿನ್‌ಕುಮಾರ್.

‘ಉತ್ತಮ ಮನಸ್ಥಿತಿಯಲ್ಲಿ ರಾಜಕೀಯಕ್ಕೆ ಬನ್ನಿ’
‘ಉತ್ತಮ ಮನಸ್ಥಿತಿಯಲ್ಲಿ ರಾಜಕೀಯಕ್ಕೆ ಬನ್ನಿ’ – ರಾಜಕೀಯ ಕ್ಷೇತ್ರಕ್ಕೆ ಬರಲು ಇಚ್ಛಿಸುವವರಿಗೆ ಈ ರೀತಿಯಾಗಿ ಆಹ್ವಾನಿಸುತ್ತಾರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣಿಮಾ ಶ್ರೀನಿವಾಸ್. 41 ವರ್ಷದ ಪೂರ್ಣಿಮಾ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ತಂದೆ ಹಿರಿಯ ರಾಜಕಾರಣಿ ಎ. ಕೃಷ್ಣಪ್ಪ ಅವರ ಗರಡಿಯಲ್ಲಿ ಪಳಗಿರುವ ಪೂರ್ಣಿಮಾ, ಗ್ರಾಮ ಪಂಚಾಯ್ತಿ ಸದಸ್ಯರಾಗಿ,  ಬಿಬಿಎಂಪಿಯ ವಾರ್ಡ್‌ ಸಂಖ್ಯೆ 52ರ (ಕೆ.ಆರ್‌. ಪುರ) ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದವರು. ಸದ್ಯ ಹಿರಿಯೂರಿನಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ.

ಪೂರ್ಣಪ್ರಗತಿ ಮಹಿಳಾ ಸಂಸ್ಥೆಯನ್ನು ಕಟ್ಟಿಕೊಂಡು ಮಹಿಳೆಯರಿಗಾಗಿ ಟೈಲರಿಂಗ್‌ ತರಬೇತಿ, ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಅವರಿಗೆ ಹತ್ತಿರವಾದರು. ಉದ್ಯೋಗಮೇಳ ಆಯೋಜಿಸಿ 1500ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸುವ ಮೂಲಕ ಯುವಸಮೂಹದ ಗಮನ ಸೆಳೆದರು. ಯುಪಿಎಸ್‌ಸಿ–ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರವನ್ನು ಉಚಿತವಾಗಿ ಆಯೋಜಿಸುವ ಮೂಲಕ ಈ ಸಮುದಾಯಕ್ಕೆ ಸ್ಪಂದಿಸಿದ್ದು ಅವರ ಯಶಸ್ಸಿಗೆ ಕಾರಣವಾಯಿತು.

‘ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡುವುದರೊಂದಿಗೆ ಉದ್ಯೋಗ ಸೃಷ್ಟಿಗೂ ಕ್ರಮ ಕೈಗೊಳ್ಳುತ್ತೇನೆ ಎಂದು ಚುನಾವಣೆಯಲ್ಲಿ ಭರವಸೆ ನೀಡಿದ್ದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖಳಾಗುತ್ತೇನೆ’ ಎಂದು ಅವರು ಹೇಳುತ್ತಾರೆ.

‘ಏನು ಬೇಕಾದರೂ ಭಾಷಣ ಮಾಡಬಹುದು. ಆದರೆ, ಒಳಗೆ ಬಂದಾಗ ವ್ಯವಸ್ಥೆಯೇ ಬೇರೆ ಇರುತ್ತದೆ. ಯೋಜನೆಗಳ ಅನುಷ್ಠಾನದಲ್ಲಿ ಅನೇಕ ಅಡೆ–ತಡೆಗಳಿರುತ್ತವೆ. ಇವುಗಳನ್ನು ತಿಳಿದುಕೊಳ್ಳಬೇಕು. ಇಲ್ಲಿ ಏಳು–ಬೀಳು ಸಹಜ. ಯಾವುದಕ್ಕೂ ಎದೆಗುಂದದೆ ಮುಂದುವರಿದರೆ ಯಶಸ್ಸು ಸಾಧ್ಯ’ ಎಂದು ಅವರು ಯುವಕರಿಗೆ ಕಿವಿಮಾತು ಹೇಳುತ್ತಾರೆ.

‘ಜನರ ನಿರೀಕ್ಷೆ ಮೀರಬೇಕು’
‘ರಾಜಕೀಯದಲ್ಲಿ ಸೋಲಿಗೆ ಎದೆಗುಂದಬಾರದು, ಗೆಲುವಿಗೆ ಹಿಗ್ಗಬಾರದು. ಆಯ್ಕೆ ಮಾಡಿದ ಜನರ ನಿರೀಕ್ಷೆ ಮೀರಿ ಕೆಲಸ ಮಾಡಿದರೆ ಅವರ ಆಶೀರ್ವಾದ ಯಾವಾಗಲೂ ಇರುತ್ತದೆ’ ಎನ್ನುತ್ತಾರೆ ಕಾಂಗ್ರೆಸ್‌ ಶಾಸಕಿ, ಕೆಜಿಎಫ್‌ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಎಂ. ರೂಪಕಲಾ.

ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ಅವರ ಪುತ್ರಿಯಾದ ರೂಪಕಲಾ, ತಂದೆಯ ಪ್ರಭಾವಕ್ಕೂ ಮೀರಿ, ಕ್ಷೇತ್ರದಲ್ಲಿ ಕೆಲಸ ಮಾಡಿ ಜನರಿಗೆ ಹತ್ತಿರವಾದವರು. ಡಿಸಿಸಿ ಬ್ಯಾಂಕ್‌ ನಿರ್ದೇಶಕಿಯಾದ ನಂತರ ಬ್ಯಾಂಕ್‌ನಿಂದ ಮನೆ ಬಾಗಿಲಿಗೆ ಸಾಲ ನೀಡುವ ಯೋಜನೆ ರೂಪಿಸಿ, ಮಹಿಳೆಯರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡರು. ಅಲ್ಲದೆ, ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸಾಲವನ್ನು ಖುದ್ದಾಗಿ ವಿತರಿಸುವ ಮೂಲಕ ಮಹಿಳೆಯರಿಗೆ ಹತ್ತಿರವಾದರು.

ಮೈನಿಂಗ್ ಪ್ರದೇಶದಲ್ಲಿ ಮಹಿಳೆಯರೊಂದಿಗೆ ವ್ಯವಹರಿಸಲು ತಮಿಳು ಕಲಿತು, ಅದರಲ್ಲಿಯೇ ಭಾಷಣವನ್ನು ಕೂಡ ಮಾಡಲು ಶುರು ಮಾಡಿದ್ದು, ಅವರ ಜನಪ್ರಿಯತೆ ಹೆಚ್ಚಲು ಕಾರಣವಾಯಿತು. ‘ಯುವಕರಿಗೆ ಉದ್ಯೋಗ ಬೇಕಾಗಿದೆ. ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡುತ್ತೇನೆ. ದೊಡ್ಡ ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಹೇಳುತ್ತಾರೆ.

ಯುವಕರು ಕೈ ಹಿಡಿದರು...
‘ತಂದೆಯವರ ನಿಧನದ ನಂತರ, ಹಿರಿಯರು ಎಚ್‌.ಡಿ. ಕೋಟೆಯಿಂದ ನಿಮ್ಮ ಕುಟುಂಬದವರೇ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಕ್ಕೆ ನಿಂತಿದ್ದರಿಂದ ಗೆಲುವು ಸುಲಭವಾಯಿತು’ ಎಂದು ಹೇಳುತ್ತಾರೆ ಎಚ್.ಡಿ. ಕೋಟೆಯ ಕಾಂಗ್ರೆಸ್‌ ಶಾಸಕ ಸಿ. ಅನಿಲ್‌ಕುಮಾರ್.

ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅನಿಲ್‌ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ತಂದೆ ಚಿಕ್ಕಮಾದು ನಿಧನರಾದ ನಂತರ ಕಾಂಗ್ರೆಸ್‌ ಸೇರಿದ್ದ ಅವರು, ಮೊದಲ ಯತ್ನದಲ್ಲೇ ಅನುಭವಿ ರಾಜಕಾರಣಿ ಜೆಡಿಎಸ್‌ನ ಚಿಕ್ಕಣ್ಣ ಅವರನ್ನು ಸೋಲಿಸಿದ್ದಾರೆ.

‘ಚುನಾವಣೆಗೆ ಮುನ್ನ ಜನರ ಅಭಿಪ್ರಾಯ ಸಂಗ್ರಹ ಮಾಡಿದೆ. ನನ್ನ ಪರ ಒಲವು ವ್ಯಕ್ತವಾದ ನಂತರವಷ್ಟೇ ಸ್ಪರ್ಧೆಗೆ ಇಳಿದೆ’ ಎನ್ನುವ ಅವರು, ‘ಯುವಸಮೂಹಕ್ಕಾಗಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಬೇಕು, ಪ್ರವಾಸಿ ತಾಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ’ ಎಂದು ಹೇಳುತ್ತಾರೆ.

‘ಕೃಷಿ ಕಾಳಜಿಯೂ ಅಗತ್ಯ’
ರಾಜಕೀಯ ಕ್ಷೇತ್ರಕ್ಕೆ ಬರುವ ಯುವಕರು ಕೃಷಿ ಕ್ಷೇತ್ರದ ಬಗ್ಗೆಯೂ ಹೆಚ್ಚು ಕಾಳಜಿ ಹೊಂದಿರಬೇಕು. ರೈತರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುತ್ತಾರೆ ರಾಯಚೂರು ಜಿಲ್ಲೆ ಮಾನ್ವಿಯ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ.

‘ಕಳೆದ ಬಾರಿ ಮೂರೂ ಪಕ್ಷಗಳು ಒಗ್ಗೂಡಿ ನನ್ನನ್ನು ಸೋಲಿಸಿದ್ದವು. ಈ ಬಾರಿ ಸರಿಯಾಗಿ ಯೋಜನೆ ರೂಪಿಸಿಕೊಂಡು ಕಣಕ್ಕೆ ಇಳಿದಿದ್ದೆ. ಗೆಲುವು ಸಾಧ್ಯವಾಯಿತು’ ಎಂದು ಅವರು ಹೇಳುತ್ತಾರೆ. ‘ಯುವಕರು ರಾಜಕೀಯಕ್ಕೆ ಬರಬೇಕು. ಇಲ್ಲದಿದ್ದರೆ, ಭ್ರಷ್ಟರಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂಬ ಅಭಿಪ್ರಾಯ ಅವರದು.

ಇವರಷ್ಟೇ ಅಲ್ಲದೆ, 40 ಆಸುಪಾಸಿನ ಹಲವರು ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಆ ಮೂಲಕ ಸದನದಲ್ಲಿಯೂ ಯುವಶಕ್ತಿ ಪ್ರದರ್ಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ವರುಣಾದಿಂದ ಪ್ರಥಮ ಪ್ರಯತ್ನದಲ್ಲಿಯೇ ಶಾಸಕರಾಗಿದ್ದಾರೆ. ಎಂಬಿಬಿಎಸ್‌, ಎಂ.ಡಿ ವ್ಯಾಸಂಗ ಮಾಡಿರುವ 37 ವರ್ಷ ವಯಸ್ಸಿನ ಅವರು, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ಸೀನಿಯರ್ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಇನ್ನು, ಸದ್ಯ ಕರಾವಳಿಯಲ್ಲಿ ಅತಿ ಕಿರಿಯ ಶಾಸಕ ಎನಿಸಿರುವ ಬಿಜೆಪಿಯ ಹರೀಶ್‌ ಪೂಂಜಾ, ಐದು ಬಾರಿ ಶಾಸಕರಾಗಿದ್ದ ವಸಂತ ಬಂಗೇರ ಅವರನ್ನು ಪರಾಭವಗೊಳಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ‘ನವ ಬೆಳ್ತಂಗಡಿ’ ಕನಸು ಹುಟ್ಟುಹಾಕಿರುವ ಅವರು, ನವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೈಕೋರ್ಟ್‌ ವಕೀಲರಾಗಿದ್ದ ಹರೀಶ್‌, ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಟೀಕೆಗೆ ಇಳಿಯದೆ, ತಾವು ಮಾಡುವ ಕೆಲಸಗಳ ಬಗ್ಗೆ ಮಾತ್ರ ಹೇಳಿಕೊಂಡರು. ‘ಉದ್ಯೋಗಾವಕಾಶ ಸೃಷ್ಟಿಗೆ ಆದ್ಯತೆ ನೀಡುತ್ತೇನೆ’ ಎಂದು ಹೇಳುವ ಮೂಲಕ ಯುವಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಮಾಗಡಿಯ ಜೆಡಿಎಸ್‌ ಶಾಸಕ ಎ. ಮಂಜುನಾಥ, ನಂಜನಗೂಡಿನ ಬಿಜೆಪಿ ಶಾಸಕ ಬಿ. ಹರ್ಷವರ್ಧನ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಯುವಮುಖಗಳಾಗಿವೆ.

ಹಣ ಮತ್ತು ಜಾತಿಗಿಂತ ಹೊಸ ದೃಷ್ಟಿಕೋನ, ಹೊಸ ಕನಸು, ಕೆಲಸದೆಡೆಗಿನ ಬದ್ಧತೆ, ಜನರೊಂದಿಗಿನ ಒಡನಾಟ ಗೆಲುವು ತಂದು ಕೊಡುತ್ತದೆ ಎಂಬುದು ಈ ಯುವಶಾಸಕರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT