ಕುಷ್ಟಗಿ: ಮಾದರಿ ತಾಲ್ಲೂಕಿಗೆ ನೀಲನಕ್ಷೆ

7
ಸಾರ್ವಜನಿಕರ ಸಮಸ್ಯೆ ಆಲಿಸಿ, ಭರವಸೆ ನೀಡಿದ ಶಾಸಕ ಅಮರೇಗೌಡ ಬಯ್ಯಾಪುರ

ಕುಷ್ಟಗಿ: ಮಾದರಿ ತಾಲ್ಲೂಕಿಗೆ ನೀಲನಕ್ಷೆ

Published:
Updated:
ಕುಷ್ಟಗಿ: ಮಾದರಿ ತಾಲ್ಲೂಕಿಗೆ ನೀಲನಕ್ಷೆ

ಕುಷ್ಟಗಿ: ನೀರಾವರಿ, ಕೆರೆಗಳ ಸಮಗ್ರ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ ಸೇರಿ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿಯಲ್ಲಿ ತಾಲ್ಲೂಕನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸುವುದಾಗಿ ಶಾಸಕ ಅಮರೇಗೌಡ ಬಯ್ಯಾಪುರ ಇಲ್ಲಿ ಹೇಳಿದರು.

ಮಂಗಳವಾರ ಸಾರ್ವಜನಿರನ್ನು ಭೇಟಿ ಮಾಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ವಿಶ್ವಾಸ ಇರಿಸಿ ನನ್ನನ್ನು ಚುನಾಯಿಸಿದ್ದಾರೆ. ಜಾತಿ, ಪಕ್ಷ ಪಂಗಡಗಳನ್ನು ಬದಿಗಿರಿಸಿ ಸಮಷ್ಠಿಪ್ರಜ್ಞೆಯೊಂದಿಗೆ ಅವರ ಆಶಯಗಳನ್ನು ಈಡೇರಿಸಲು ಶ್ರಮಿಸುತ್ತೇನೆ ಎಂದರು.

ಪರಿಹಾರ ಕಾಣದ ಅನೇಕ ಜ್ವಲಂತ ಸಮಸ್ಯೆಗಳು ತಾಲ್ಲೂಕಿನಲ್ಲಿದ್ದು, ಎಲ್ಲವನ್ನೂ ತಕ್ಷಣ ಮತ್ತು ಶಾಶ್ವತವಾಗಿ ಬಗೆಹರಿಸುವುದು ಯಾರಿಗೂ ಸಾಧ್ಯವಿಲ್ಲ. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಶಾಸಕನ ಕರ್ತವ್ಯ ಎಂಬುದರ ಅರಿವಿದ್ದು ಅದಕ್ಕೆ ಜನರು, ಸಮಾಜದ ವಿವಿಧ ಕ್ಷೇತ್ರಗಳ ಅನುಭವಿಗಳ ಸಹಕಾರವೂ ತಮಗೆ ಅಗತ್ಯವಾಗಿದೆ ಎಂದರು.

ಐದು ವರ್ಷಗಳ ಅವಧಿಯಲ್ಲಿ ಆದ್ಯತೆಯ ಮೇಲೆ ಕೈಗೊಳ್ಳುವ ಅಭಿವೃದ್ಧಿ ಕೆಲಸಗಳ ಕುರಿತು ವಿವರಿಸಿ, ಪ್ರತಿವರ್ಷ ₹1 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಒಂದು ಕೆರೆ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದ್ದು, ಅದನ್ನು ಅನುಷ್ಠಾನಗೊಳಿಸಲಾಗುತ್ತದೆ. ಕೆರೆಗಳ ದುರಸ್ತಿ, ಹೂಳು ವಿಲೇವಾರಿ ಕೆಲಸಗಳು ವೈಜ್ಞಾನಿಕ ರೀತಿಯಲ್ಲಿ ನಡೆಯಬೇಕಿದೆ. ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಉದ್ಯಮ ಸ್ಥಾಪಿಸಬೇಕಿದೆ. ಆದರೆ, ಈ ಭಾಗದಲ್ಲಿ ಸಂಪನ್ಮೂಲ ಕೊರತೆ ಇದೆ ಎಂದು ಹೇಳಿದರು.

ಕೃಷ್ಣಾ ‘ಬಿ’ ಸ್ಕೀಂ ಪ್ರಮುಖ ನೀರಾವರಿ ಯೋಜನೆಯಾಗಿದ್ದು, ಒಟ್ಟು 9 ಯೋಜನೆಗಳ ಪೈಕಿ ಕೊಪ್ಪಳ ಏತ ನೀರಾವರಿಯೂ ಒಂದಾಗಿದೆ. ಹೆಚ್ಚಿನ ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಕೇಂದ್ರ ಸರ್ಕಾರದ ಸಹಭಾಗಿತ್ವವೂ ಅಗತ್ಯ. ಸಂಪುಟ ವಿಸ್ತರಣೆ ನಂತರ ಜಲಸಂಪನ್ಮೂಲ ಸಚಿವರ ಮೇಲೆ ಈ ಬಗ್ಗೆ ಒತ್ತಡ ತಂದು ಏತ ನೀರಾವರಿ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡುವುದಾಗಿ ವಿವರಿಸಿದರು.

ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ 24x7 ಯೋಜನೆ ಜಾರಿಗೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ತಿಂಗಳಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಒಳಚರಂಡಿ ನಿರ್ಮಾಣ, ಮಹಿಳಾ ಶೌಚಾಲಯಗಳ ನಿರ್ವಹಣೆ, ಶಾಲೆ, ಕಾಲೇಜುಗಳ ಅಭಿವೃದ್ಧಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವ ಅಗತ್ಯವಿದೆ ಎಂದರು.

ಚಂದಪ್ಪ ತಳವಾರ, ಸಂಗಯ್ಯ ವಸ್ತ್ರದ, ಹನುಮಂತಪ್ಪ ಚೌಡ್ಕಿ ಪರಸಪ್ಪ ಕತ್ತಿ, ಶಕುಂತಲಾ ಹಿರೇಮಠ, ಫಕೀರಪ್ಪ ಚಳಗೇರಿ, ಭಾರತಿ ನೀರಗೇರಿ, ವಸಂತ ಮೇಲಿನಮನಿ ಮಹಾಂತೇಶ ಅಗಸಿಮುಂದಿನ, ಬಸಣ್ಣ ಗೋನಾಳ, ಶಿವಶಂಕರಗೌಡ, ಲಾಡ್ಲೆಮಷಾಕ್‌, ಶೇಖರಗೌಡ, ಉದಯಾನಂದ ದಾವಣಗೆರೆ, ದೊಡ್ಡಯ್ಯ ಗದ್ದಡಕಿ, ಈರಣ್ಣ ಬಳಿಗಾರ ಇದ್ದರು.

‘ಹತಾಶಗೊಂಡಿರುವ ದೊಡ್ಡನಗೌಡ’

ಕುಷ್ಟಗಿ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಹೋರಾಟ ನಡೆಸುತ್ತೇವೆ, ಕಾಂಗ್ರೆಸ್ಸಿಗರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೊಡ್ಡನಗೌಡ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬಯ್ಯಾಪುರ, ‘ಹಿಂದೆ ನಾನು ಐದು ವರ್ಷ ಅಧಿಕಾರದಲ್ಲಿದ್ದಾಗಲೂ ದಬ್ಬಾಳಕೆ ನಡೆಸಿಲ್ಲ. ದೊಡ್ಡನಗೌಡ ಶಾಸಕರಾಗಿದ್ದಾಗ ತಮ್ಮದೇ ಜಾತಿಯ ಅಧಿಕಾರಿಗಳನ್ನು ತಾಲ್ಲೂಕಿನಲ್ಲಿ ನಿಯೋಜಿಸಿದ್ದರು’ ಎಂದರು.

ಬೇರೆಯವರ ತಪ್ಪು ಹುಡುಕುವ ಮೊದಲು ತಮ್ಮ ಅಧಿಕಾರದ ಅವಧಿಯನ್ನು ನೆನಪಿಸಿಕೊಳ್ಳುವುದು ಒಳ್ಳೆಯದು ಎಂದು ಕುಟುಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry