ಶುಕ್ರವಾರ, ಏಪ್ರಿಲ್ 3, 2020
19 °C

ಚಿಕನ್‌ ಪ್ರಿಯೆ ಸುಪ್ರೀತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕನ್‌ ಪ್ರಿಯೆ ಸುಪ್ರೀತಾ

ನಾನು ಆಹಾರಪ್ರಿಯೆ, ಹಾಗಂತ ನಾನು ಅಡುಗೆ ರುಚಿರುಚಿಯಾಗಿ ಮಾಡುತ್ತೇನೆ ಎಂದುಕೊಳ್ಳಬೇಡಿ. ನನಗೆ ನಾನ್‌ವೆಜ್‌ನಲ್ಲಿ ಮೂರು– ನಾಲ್ಕು ಬಗೆಯ ಅಡುಗೆ ಗೊತ್ತು ಅಷ್ಟೇ. ಹಾಗೇ ಜಾಮೂನು, ರವೆ ವಡಾ ಇಂತಹ ಸರಳ ಅಡುಗೆ ಮಾಡಲು ನನಗಿಷ್ಟ. ಯಾರಾದರೂ ನನ್ನತ್ರ ವಿಶೇಷ ಅಡುಗೆಗಳ ಬಗ್ಗೆ ಹೇಳಿ ಎಂದರೆ ನಾನು ಅಲ್ಲಿಂದ ತಪ್ಪಿಸಿಕೊಂಡು ಬಿಡುತ್ತೀನಿ.

ನನ್ನ ಮೊದಲ ಅಡುಗೆ ಮಂಗಳೂರು ಬನ್ಸ್‌. ಪಿಯುಸಿಯಲ್ಲಿರುವಾಗ ಒಂದು ಬಾರಿ ಬೇರೆಯವರಿಂದ ಮಾಹಿತಿ ಪಡೆದು ನಾನು ಮಂಗಳೂರು ಬನ್ಸ್‌ ಮಾಡಿದ್ದೆ. ತಕ್ಕಮಟ್ಟಿಗೆ ಚೆನ್ನಾಗೇ ಬಂದಿತ್ತು. ಎಲ್ಲರೂ ಹೊಗಳಿದ್ದರು. ನಮ್ಮ ಮನೆಯಲ್ಲಿ ಅಮ್ಮನೇ ಅಡುಗೆ ಮಾಡುವುದು. ಅವರ ಕೈ ರುಚಿ ಅದ್ಭುತ. ಹಾಗಾಗಿ ನನಗೇ ಯಾವತ್ತೂ ಏನಾದರೂ ಅಡುಗೆ ಮಾಡಬೇಕು ಎಂಬುದೇ ಮನಸ್ಸಿಗೆ ಬಂದಿಲ್ಲ. ಅಮ್ಮನಿಗೆ ಒಂದಿಷ್ಟು ಅಡುಗೆಯಲ್ಲಿ ಸಹಾಯ ಮಾಡ್ತೀನಷ್ಟೇ. ಅಮ್ಮನ ಅಡುಗೆ ರುಚಿ ಮುಂದೆ ಸ್ಟಾರ್‌ ಹೋಟೆಲ್‌ಗಳ ಊಟವೂ ಸಪ್ಪೆ. ನಾನು ಹಾಗೂ ನನ್ನ ಮಗಳು ಇಬ್ಬನಿ ಇಬ್ಬರೂ ಚಿಕನ್‌ ಪ್ರಿಯರು. ಹೀಗಾಗಿ ಶೂಟಿಂಗ್‌ ಇಲ್ಲದೇ ಮನೆಯಲ್ಲಿ ಬಿಡುವಾಗಿದ್ದಾಗ, ಅಮ್ಮ ಮನೆಯಲ್ಲಿ ಇಲ್ಲದೇ ಇದ್ದರೆ ಚಿಕನ್‌ ತಿನ್ನಬೇಕು ಎನ್ನಿಸಿದಾಗ ನಾನೇ ಚಿಕನ್‌ ಸಾರು, ಜಿಂಜರ್‌ ಚಿಕನ್‌ ಮಾಡುತ್ತೇನೆ.  ನನ್ನ ಅಗತ್ಯಕ್ಕಾಗಿ, ಎಮರ್ಜೆನ್ಸಿಗಾಗಿ ಚಿಕನ್‌ನ ಮೂರು– ನಾಲ್ಕು ಬಗೆ ಅಡುಗೆಗಳನ್ನು ಕಲಿತುಕೊಂಡಿದ್ದೀನಿ.

ಗಂಡ ಪ್ರಮೋದ್‌ ಶೆಟ್ಟಿಗೆ ನಾನು ಮಾಡುವ ಬೇಳೆಸಾರು ಇಷ್ಟ. ಬೇಳೆಸಾರು ಮಾಡಿದ್ದಾಗ ‘ಇದೊಂದು ಅಡುಗೆಯನ್ನ ಇವಳು ಚೆನ್ನಾಗಿ ಮಾಡ್ತಾಳೆ’ ಎಂದು ರೇಗಿಸುತ್ತಿರುತ್ತಾರೆ. ಆಹಾರ ವಿಷಯದಲ್ಲಿ ನಾನು ಫುಡ್ಡಿ. ನಾನು ಡಯೆಟ್‌ ಆರಂಭಿಸಿದರೆ ಹೆಚ್ಚೆಂದರೆ 15 ದಿನ ಮಾಡ್ತೀನಷ್ಟೇ. ನನ್ನ ಸಹಕಲಾವಿದರು ಈ ವಿಷಯಕ್ಕೆ ನನ್ನನ್ನು ರೇಗಿಸುತ್ತಿರುತ್ತಾರೆ. 15 ದಿನ ಸ್ಟ್ರಿಕ್ಟಾಗಿ ಡಯೆಟ್‌ ಮಾಡಿದರೆ, 16ನೇ ದಿನ ಆಸಿಡಿಟಿ ಶುರುವಾಗಿರುತ್ತದೆ. ಎರಡು ದಿನ ಔಷಧ ತಗೋತೀನಿ, 18ನೇ ದಿನ ವಾಪಸ್‌ ನನಗೇನಿಷ್ಟವೋ ಅದನ್ನು ತಿನ್ನಲು ಆರಂಭಿಸುತ್ತೇನೆ. 

ಜಿಂಜರ್‌ ಚಿಕನ್‌

ಸಾಮಗ್ರಿಗಳು: ಎಣ್ಣೆ, ಈರುಳ್ಳಿ, ಜೀರಿಗೆ, ಕರಿಬೇವು, ಅರಿಶಿನ ಪುಡಿ, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌, ಚಿಕನ್‌, ಹಸಿಮೆಣಸು, ಖಾರದ ಪುಡಿ, ಚಿಕನ್‌ ಮಸಾಲ, ಕಾರ್ನ್‌ಫ್ಲೋರ್‌, ಕೊತ್ತಂಬರಿ ಸೊಪ್ಪು, ನಿಂಬೆಹಣ್ಣು, ಉಪ್ಪು

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಎಣ್ಣೆ, ಜೀರಿಗೆ, ಕರಿಬೇವು, ಅರಿಶಿನ ಪುಡಿ, ಈರುಳ್ಳಿ ಹಾಕಿ ಕೆಂಪು ಬಣ್ಣ ಬರುವವರೆಗೂ ಹುರಿಯಬೇಕು. ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಎರಡು ನಿಮಿಷದ ಹುರಿಯಬೇಕು. ನಂತರ ಅದಕ್ಕೆ ಚೆನ್ನಾಗಿ ತೊಳೆದ ಚಿಕನ್‌ ತುಂಡು, ಉಪ್ಪು, ಹಸಿಮೆಣಸನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕುಕ್ಕರ್‌

ಮುಚ್ಚಿ ಒಂದು ವಿಶಲ್‌ ಬರುವವರೆಗೂ ಬೇಯಿಸಿ. ಕುಕ್ಕರ್‌ ಆರಿದ ಮೇಲೆ ಮುಚ್ಚಳ ತೆಗೆದು ಖಾರದ ಪುಡಿ, ಚಿಕನ್‌ ಮಸಾಲ ಸೇರಿಸಬೇಕು. ಇದಕ್ಕೆ 2–3 ಚಮಚ ಕಾರ್ನ್‌ಫ್ಲೋರ್‌ ಹಾಕಿ, ಸ್ವಲ್ಪ ನೀರು ಹಾಕಿ. ನಂತರ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ, ಕೊನೆಗೆ ಸಣ್ಣದಾಗಿ ಹಚ್ಚಿದ ಕೊತ್ತಂಬರಿ

ಸೊಪ್ಪು, ನಿಂಬೆ ಹಣ್ಣಿನ ರಸ ಹಾಕಿ, ಕೆಳಗಿಳಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)