ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರದಲ್ಲಿ ನೌಕಾ ಬಂದರು

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಪ್ರಾಬಲ್ಯಕ್ಕೆ ಭಾರತ–ಇಂಡೊನೇಷ್ಯಾ ಸಡ್ಡು
Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಜಕಾರ್ತಾ: ಹಿಂದೂ ಮಹಾಸಾಗರದಲ್ಲಿ ಇಂಡೊನೇಷ್ಯಾದ ನೌಕಾಪಡೆ ಬಂದರು ನಿರ್ಮಾಣಕ್ಕೆ ಭಾರತ ಮತ್ತು ಇಂಡೊನೇಷ್ಯಾ ಮುಂದಾಗಿವೆ.

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾದ ಚಟುವಟಿಕೆ ಮತ್ತು ಪ್ರಾಬಲ್ಯದ ಹಿನ್ನೆಲೆಯಲ್ಲಿ ಈ ಒಪ್ಪಂದ ಭಾರಿ ಮಹತ್ವ ಪಡೆದುಕೊಂಡಿದೆ.

ವಿಶ್ವದ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ವಾಣಿಜ್ಯ ಜಲಮಾರ್ಗವಾಗಿರುವ ಮಲಾಕ್ಕಾ ಜಲಸಂಧಿ, ಸುಮಾತ್ರಾ ದ್ವೀಪದ ಸಬಂಗ್‌ ಮತ್ತು ಅಂಡಮಾನ್ ದ್ವೀಪದಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ವಲಯ ಸ್ಥಾಪನೆಗೂ ಎರಡೂ ದೇಶಗಳು ಕೈಜೋಡಿಸಲಿವೆ.

ಸಬಂಗ್‌ನಲ್ಲಿ ಬಂದರು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಗೆ ಭಾರತ ಹೂಡಿಕೆ ಮಾಡಲಿದೆ ಎಂದು ನಿಯೋಗದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಮುಕ್ತ ಜಲಗಡಿ– ಮಹತ್ವದ ಒಪ್ಪಂದ: ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೊನೇಷ್ಯಾ ಇಟ್ಟಿರುವ ಹೆಜ್ಜೆ ಭಾರಿ ಮಹತ್ವ ಪಡೆದಿದೆ. ಸೇನಾ ಸಹಕಾರ ಮತ್ತು ಸಾಗರ ಗಡಿ ಸುರಕ್ಷತೆ ಸೇರಿದಂತೆ ಬುಧವಾರ 15 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಇಂಡೊ–ಪೆಸಿಫಿಕ್‌ ಸಾಗರದಲ್ಲಿ ಸಂಚಾರಕ್ಕೆ ಪರಸ್ಪರರ ಜಲಗಡಿಗಳನ್ನು ಮುಕ್ತವಾಗಿಡುವ ಮಹತ್ವದ ನಿರ್ಧಾರವೂ ಇದರಲ್ಲಿ ಸೇರಿದೆ.

ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ, ರೈಲ್ವೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಲು ಒಪ್ಪಿಗೆ ಸೂಚಿಸಿವೆ.

ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ಮತ್ತು ಭಾರತದ ಪ್ರಧಾನಿ ನರೆಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.

ಉಭಯ ನಾಯಕರ ಚರ್ಚೆ: ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಪ್ರಾದೇಶಿಕ ಸ್ಥಿರತೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ, ಮುಕ್ತ ವಾಣಿಜ್ಯ ವಹಿವಾಟು ಮತ್ತು ಹೂಡಿಕೆ ಕುರಿತು ಮೋದಿ ಮತ್ತು ವಿಡೊಡೊ ಚರ್ಚಿಸಿದರು ಎಂದು ಜಂಟಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಎರಡೂ ರಾಷ್ಟ್ರಗಳ ನಡುವಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಾಮ್ಯ ಮತ್ತು ಸವಾಲು ಸೇರಿ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಉಭಯ ನಾಯಕರು ಚರ್ಚಿಸಿದರು.

ಇಂಡೊನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಚರ್ಚ್‌ಗಳ ಮೇಲಿನ ಭಯೋತ್ಪಾದನಾ ದಾಳಿ ಖಂಡಿಸಿದ ಮೋದಿ, ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಗಾಳಿಪಟ ಹಾರಿಸಿದರು

ಭಾರತ ಮತ್ತು ಇಂಡೊನೇಷ್ಯಾ ಜಂಟಿಯಾಗಿ ಆಯೋಜಿಸಿದ್ದ ರಾಮಾಯಣ ಮತ್ತು ಮಹಾಭಾರತ ಪರಿಕಲ್ಪನೆ ಆಧರಿತ ಗಾಳಿಪಟ ಉತ್ಸವಕ್ಕೆ ಮೋದಿ, ಜೋಕೊ ವಿಡೊಡೊ ಅವರು ಗಾಳಿಪಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಎರಡೂ ರಾಷ್ಟ್ರಗಳ ನಡುವಣ ನಾಗರಿಕತೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಗಾಳಿಪಟ ಉತ್ಸವ ಅನಾವರಣಗೊಳಿಸಿತು.

ರಾಮಾಯಣ ಮತ್ತು ಮಹಾಭಾರತದ ಪಾತ್ರಗಳ ಗಾಳಿಪಟಗಳನ್ನು ಕ್ರಮವಾಗಿ ಇಂಡೊನೇಷ್ಯಾ ಮತ್ತು ಭಾರತದ ಕಲಾವಿದರು ವಿನ್ಯಾಸಗೊಳಿಸಿದ್ದರು.

ಮೂರು ರಾಷ್ಟ್ರಗಳ ಪ್ರವಾಸ

* ಮೂರು ರಾಷ್ಟ್ರಗಳ ಪ್ರವಾಸಕ್ಕಾಗಿ ಮಂಗಳವಾರ ಜಕಾರ್ತಾಕ್ಕೆ ಬಂದಿಳಿದ ಪ್ರಧಾನಿ

* ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಂಡೊನೇಷ್ಯಾಕ್ಕೆ ಮೊದಲ ಅಧಿಕೃತ ಭೇಟಿ

* ಆಗ್ನೇಯ ಏಷ್ಯಾದ ಅತ್ಯಂತ ದೊಡ್ಡ ಇಸ್ಟಿಕ್‌ಲಾಲ್‌ ಮಸೀದಿ, ಅರ್ಜುನ ವಿಜಯರಥ ಸ್ಮಾರಕಕ್ಕೆ ಭೇಟಿ

* ಕಾಲಿಬಾಟಾದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಸಮಾಧಿಗಳಿಗೆ ನಮನ

* ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲು ಆಸಿಯಾನ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ

* ಇಂಡೊನೇಷ್ಯಾದಿಂದ ಮಲೇಷ್ಯಾ, ಸಿಂಗಪುರ ಪ್ರವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT