ಕೆಬಿಜೆಎನ್‌ಎಲ್‌ನಿಂದ 10 ಲಕ್ಷ ಸಸಿ ವಿತರಣೆ

7
ಸಜ್ಜು, ಜೂನ್‌ 2ರಿಂದ ಶಾಲೆಗೆ, ಜೂನ್‌ 5ರಿಂದ ರೈತರಿಗೆ

ಕೆಬಿಜೆಎನ್‌ಎಲ್‌ನಿಂದ 10 ಲಕ್ಷ ಸಸಿ ವಿತರಣೆ

Published:
Updated:
ಕೆಬಿಜೆಎನ್‌ಎಲ್‌ನಿಂದ 10 ಲಕ್ಷ ಸಸಿ ವಿತರಣೆ

ಆಲಮಟ್ಟಿ: ಮುಂಗಾರು ಹಂಗಾಮು ಆರಂಭಕ್ಕೂ ಮುಂಚೆ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ 10 ಲಕ್ಷದಷ್ಟು ಸಸಿಗಳ ವಿತರಣೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ಇಲಾಖೆ ಸಜ್ಜಾಗಿದೆ. ಇದೇ 2ರಿಂದ ಶಾಲೆಗಳಿಗೆ, 5ರಿಂದ ರೈತರು ಹಾಗೂ ಸಂಘ ಸಂಸ್ಥೆಗಳಿಗೆ ಸಸಿಗಳ ವಿತರಣೆ ಆರಂಭಗೊಳ್ಳಲಿದೆ.

ಈಗಾಗಲೇ ಆಲಮಟ್ಟಿಯ ಮೂರು ಕಡೆ, ವಿಜಯಪುರದ ಬೂತನಾಳ ಕೆರೆ ಬಳಿ, ಬೀಳಗಿ ತಾಲ್ಲೂಕಿನ ಕುಂದಾಪುರ ಬಳಿ ಸೇರಿ ಒಟ್ಟಾರೇ ಐದು ನರ್ಸರಿಗಳಲ್ಲಿ ಕಳೆದ ಆರು ತಿಂಗಳಿಂದ ಈ ಸಸಿಗಳ ಬೆಳೆಸುವ ಕಾರ್ಯ ನಡೆದಿದೆ. ಈಗ ಆ ಎಲ್ಲ ನರ್ಸರಿಗಳಲ್ಲಿ ಪ್ರತ್ಯೇಕವಾಗಿ ಸಸಿಗಳ ವಿತರಣೆ ನಡೆಯಲಿದೆ.

‘ಅರಣ್ಯ ಇಲಾಖೆಯ ಸಸಿಗಳೆಂದರೆ ಕೇವಲ ಬೇವು, ಆಲ ಎನ್ನುವ ಹಾಗಿಲ್ಲ. ಈ ಬಾರಿ ತೋಟಗಾರಿಕೆ, ಹಣ್ಣು, ಕೃಷಿ ಮತ್ತು ಅರಣ್ಯ, ವಾಣಿಜ್ಯ ಅರಣ್ಯ, ಧಾರ್ಮಿಕ ಪ್ರಾಮುಖ್ಯ, ಅಲಂಕಾರಿಕ, ಔಷಧ ಸಸಿಗಳೆಂಬ ಏಳು ವಿಭಾಗಗಳ 168 ತಳಿಗಳ ಸಸ್ಯಗಳು ಮಾರಾಟಕ್ಕೆ ಲಭ್ಯ ಇವೆ. ರೋಗಾಣು ರಹಿತ ಉತ್ತಮ ತಳಿಯ ಸಸಿಗಳ ಬೆಳೆಸಲು ಆದ್ಯತೆ ನೀಡಲಾಗಿದೆ. 8x12 ಇಂಚು ಎತ್ತರದ ಪ್ರತಿ ಸಸಿಗೆ ₹3, 10x16 ಇಂಚು ಹಾಗೂ 14x20 ಅಳತೆಯ ಪ್ರತಿ ಸಸಿಗೆ ₹5 ದರ ನಿಗದಿಗೊಳಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿದರು.

ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಜಾರಿಗೊಳಿಸಿದ್ದ ಐದು ವರ್ಷಗಳಲ್ಲಿ ಕೋಟಿ ವೃಕ್ಷ ಬೆಳೆಸುವ ಅಭಿಯಾನದಡಿ ಈ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತಿದೆ.

ವಿತರಣೆ: ಜೂನ್‌ 2ರಿಂದ ಶಾಲೆಗಳಿಗೆ, ಜೂನ್‌ 5ರಿಂದ ರೈತರಿಗೆ ಸಸಿಗಳ ವಿತರಣೆ ಕಾರ್ಯ ನಡೆಯಲಿದೆ. ರೈತರು ತಮ್ಮ ಹೊಲದ ಪಹಣಿ ಪತ್ರ ಜೊತೆಗೆ ಆಧಾರ ಕಾರ್ಡ್‌, ಶಾಲೆಗಾದರೆ ಆ ಶಾಲೆಯ ಮುಖ್ಯಸ್ಥರ ಪತ್ರ ಅವಶ್ಯ, ಶಾಲೆಗಳಿಗೆ, ಸಂಘ ಸಂಸ್ಥೆಗಳಿಗೆ, ರೈತರಿಗೆ ಎಲ್ಲರಿಗೂ ಒಂದೇ ದರ ನಿಗದಿಯಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಸಸಿಗಳ ವಿತರಣೆ ನಡೆಯುತ್ತಿದೆ ಎಂದು ಅರಣ್ಯ ರಕ್ಷಕ ಮಲ್ಲಿಕಾರ್ಜುನ ತಿಳಿಸಿದರು. ಇಲ್ಲಿಯ ಸಸಿಗಳ ಬೆಲೆ ಮಾರುಕಟ್ಟೆಯಲ್ಲಿ ₹30 ರಿಂದ ₹75ರವರೆಗೆ ಇದೆ ಎಂದರು.

400ಕ್ಕೂ ಹೆಚ್ಚು ದಿನಗೂಲಿಗಳು: 10 ಲಕ್ಷ ಸಸಿಗಳ ಬೆಳೆಸುವ ಕಾರ್ಯ ಸಾಮಾನ್ಯವಲ್ಲ. ಕಳೆದ ಆರು ತಿಂಗಳಿಂದ ಈ ಐದು ನರ್ಸರಿಗಳಲ್ಲಿ 400ಕ್ಕೂ ಅಧಿಕ ದಿನಗೂಲಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ಡಿಎಫ್‌ಒ ಪಿ.ಕೆ. ನಾಯಕ ತಿಳಿಸಿದರು.

ಸಸಿಗಳು ಎಲ್ಲೆಲ್ಲಿ ಲಭ್ಯ..?

ಆಲಮಟ್ಟಿ ಡ್ಯಾಂಸೈಟ್‌ ನರ್ಸರಿ: ಬಿ.ಮಲ್ಲಿಕಾರ್ಜುನ, ಮೊ– 9483800677.

ಆಲಮಟ್ಟಿ ಸಂಗೀತ ಕಾರಂಜಿ (ಎಂಡಿಎಫ್‌) ಹತ್ತಿರದ ನರ್ಸರಿ: ವಿಜಯಲಕ್ಷ್ಮಿ ರೆಡ್ಡಿ, ಮೊ– 8105338247.

ಆಲಮಟ್ಟಿ ಎಎಲ್‌ಬಿಸಿ ನರ್ಸರಿ: ಸತೀಶ ಗಲಗಲಿ, ಮೊ– 9916604399.

ವಿಜಯಪುರದ ಹತ್ತಿರದ ಭೂತನಾಳ ಕೆರೆ ನರ್ಸರಿ: ಎಚ್‌.ಕೆ. ಮಳ್ಳಿ, ಮೊ– 9686701786.

ಬೀಳಗಿ ತಾಲ್ಲೂಕು ಕುಂದರಗಿ ಗ್ರಾಮದ ನರ್ಸರಿ: ವಿ.ಡಿ. ಗಚ್ಚಿನಮಠ, ಮೊ– 9902368879.

ಲಭ್ಯವಿರುವ ಪ್ರಮುಖ ಸಸಿಗಳು

ತೋಟಗಾರಿಕಾ ಸಸಿಗಳು: ತೆಂಗು, ವಿವಿಧ ತಳಿಗಳ ಪೇರು, ದಾಳಿಂಬೆ, ಚಿಕ್ಕು, ನಿಂಬೆ (ಜವಾರಿ), ಕಿತ್ತಳೆ, ಮೋಸಂಬಿ.

ಹಣ್ಣಿನ ಮರಗಳು: ಜಂಬು ನೇರಳೆ ,ರಾಮಫಲ, ಅಂಜೂರು, ಹಲಸು , ಸೀತಾಫಲ, ಕಂಚಿ ಮರ, ಕಡಿಗೋಲ ನೆಲ್ಲಿ, ಸಿಹಿ ಹುಣಸೆ, ಗೇರು,, ಬಾರಿ ಗಿಡ, ಉಮ್ರಾನಿ, ಸ್ಟಾರ್ ಪ್ರೂಟ್, ಪನ್ನೇರಳೆ.

ಕೃಷಿ ಅರಣ್ಯ ಬೆಳೆಗಳು: ನುಗ್ಗೆ, ಕರಿಬೇವು, ಸೀಲ್ವರ್ ಓಕ್, ಗೊಬ್ಬರ ಗಿಡ, ತೋಗಚೆ.

ವಾಣಿಜ್ಯ ಅರಣ್ಯ ಬೆಳೆಗಳು: ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಸಾಗವಾನಿ.

ಧಾರ್ಮಿಕ ಪ್ರಾಮುಖ್ಯದ ಗಿಡಗಳು: ತುಳಸಿ, ಬನ್ನಿ, ಪತ್ರಿ, ನಂದಿಪಾದ (ಆರೆ), ನಾಗಲಿಂಗ ಪುಷ್ಪ, ದೇವಕನಗಲ.

ಅಲಂಕಾರಿಕ ಸಸಿಗಳು: ಗಾಳಿಮರ, ಕಣಗಲ, ನಂದಿ ಬಟ್ಲು, ಕ್ಯಾಲಿಯಂಡ್ರಾ, ಕ್ಯಾಶಿಯಾ ಬೈಪ್ಲೊರಾ, ಬೋಗನವಿಲ್ಲಾ,ರಾತ ಕಿ ರಾಣಿ, ದಿನ-ಕಾ-ರಾಜಾ.

ಔಷಧಿ ಗಿಡಗಳು: ಲೋಳಸರ, ಮದರಂಗಿ, ಅಶ್ವಗಂಧಾ, ಸರ್ಪಗಂಧಾ, ಬ್ರಹ್ಮ, ಮದುನಾಶಿನಿ, ಆಡಸೋಗೆ, ದೊಡ್ಡ ಪತ್ರಿ, ಅಮೃತ್ ಬಳ್ಳಿ, ಮುರಗಲ್ (ಕೊಕಂ), ಸರ್ವ ಸಾಂಬಾರ.

 

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry