‘ಆರೋಪ ಸಾಬೀತಿಗೆ ಸೂಕ್ತ ಸಾಕ್ಷ್ಯ ನೀಡಿ’

7

‘ಆರೋಪ ಸಾಬೀತಿಗೆ ಸೂಕ್ತ ಸಾಕ್ಷ್ಯ ನೀಡಿ’

Published:
Updated:
‘ಆರೋಪ ಸಾಬೀತಿಗೆ ಸೂಕ್ತ ಸಾಕ್ಷ್ಯ ನೀಡಿ’

ದುಬೈ: ‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್‌ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ನೀಡಬೇಕು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೆವಿಡ್‌ ರಿಚರ್ಡ್‌ಸನ್‌ ಅವರು ಅಲ್‌ ಜಜೀರಾ ಸುದ್ದಿವಾಹಿನಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

‘ಮಾರುವೇಷದ ಕಾರ್ಯಾಚರಣೆಯ ವೇಳೆ ಸೆರೆ ಹಿಡಿದ ದೃಶ್ಯಾವಳಿಗಳಿಗೆ ಕತ್ತರಿ ಹಾಕದೇ ಐಸಿಸಿಗೆ ನೀಡಬೇಕು. ಈ ಬಗ್ಗೆ ಐಸಿಸಿ ಸಮಗ್ರವಾಗಿ ತನಿಖೆ ನಡೆಸುತ್ತದೆ. ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಹಾಗೂ ಫಿಕ್ಸಿಂಗ್‌ ನಡೆಸಿರುವುದು ಸಾಬೀತಾದರೆ ಖಂಡಿತ ಆ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ರಿಚರ್ಡ್‌ಸನ್‌ ಸ್ಪಷ್ಟಪಡಿಸಿದ್ದಾರೆ.

2017ರ ಜುಲೈ 26ರಿಂದ 29ರ ವರೆಗೆ ಗಾಲ್‌ನಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್‌ ಪಂದ್ಯದಲ್ಲಿ ತಮಗೆ ಅನುಕೂಲಕರ ಪಿಚ್ ಸಿದ್ಧಪಡಿಸುವಂತೆ ಮುಂಬೈನ ಹಿರಿಯ ಕ್ರಿಕೆಟಿಗ ರಾಬಿನ್‌ ಮಾರಿಸ್‌ ಆಮಿಷ ಒಡ್ಡಿದ್ದರು ಎಂದು ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಅಲ್‌ ಜಜೀರಾ ಸುದ್ದಿ ವಾಹಿನಿ ಹೇಳಿತ್ತು.

ಚೆನ್ನೈನಲ್ಲಿ 2016ರ ಡಿಸೆಂಬರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್‌ ಮತ್ತು ರಾಂಚಿಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯದಲ್ಲೂ ಫಿಕ್ಸಿಂಗ್ ನಡೆದಿದೆ ಎಂದು ಚಾನೆಲ್‌ ಅಭಿಪ್ರಾಯಪಟ್ಟಿತ್ತು.

ಅಲ್‌ ಜಜೀರಾ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗಳು ಖಾರವಾಗಿ ಪ್ರತಿಕ್ರಿಯಿಸಿ ಸೂಕ್ತ ದಾಖಲೆ ಒದಗಿಸುವಂತೆ ಒತ್ತಾಯಿಸಿದ್ದವು.

ಫಿಕ್ಸಿಂಗ್‌ ಸಂಬಂಧಿಸಿದ ದೃಶ್ಯಾವಳಿಗಳನ್ನು ಒದಗಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್‌ ಅವರು ಸುದ್ದಿವಾಹಿನಿಯ ಆಡಳಿತವನ್ನು ಕೋರಿದ್ದರು. ಐಸಿಸಿಯ ಜೊತೆಗೂಡಿ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿರುವುದಾಗಿ ಬಿಸಿಸಿಐ ವಕ್ತಾರರು ಈ ಹಿಂದೆ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry