ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೂ ಇನ್ನು ಮುಂದೆ ಜೈಲು ಊಟ

ಪಂಜಾಬ್‌ನ ಜೈಲುಗಳ ಹೊರಗೆ ಜಾರಿಗೆ ಬರಲಿದೆ ವಿನೂತನ ವ್ಯವಸ್ಥೆ
Last Updated 1 ಜೂನ್ 2018, 19:36 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನಲ್ಲಿ ‘ಜೈಲು ಊಟ’ ಎಂದು ಇನ್ನು ಮುಂದೆ ಮೂಗು ಮುರಿಯುವಂತಿಲ್ಲ. ಜತೆಗೆ ಜೈಲು ಊಟ ಬೇಕೆಂದರೆ ಜೈಲುವಾಸಿಗಳೇ ಆಗಬೇಕು ಎಂದೂ ಇಲ್ಲ. ಇಲ್ಲಿನ ಸರ್ಕಾರವೇ ಸಾರ್ವಜನಿಕರಿಗೆ ಜೈಲು ಊಟ ಒದಗಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಜೈಲಿನಲ್ಲಿರುವವರು ತಮ್ಮ ಮನೆಯಿಂದ, ಹೋಟೆಲ್‌ನಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿ ಎಂದು ನ್ಯಾಯಾಲಯಗಳ ಮೊರೆ ಹೋಗುವುದು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಇಂಥದ್ದರ ಮಧ್ಯೆ ಜೈಲು ಊಟವನ್ನು ಸಾರ್ವಜನಿಕರಿಗೆ ನೀಡಲು ಇಲ್ಲಿನ ಸರ್ಕಾರವೇ ಚಿಂತನೆ ನಡೆಸಿದೆ.

ಹೌದು, ಇಂಥದ್ದೊಂದು ಯೋಜನೆಯನ್ನು ಆರಂಭಿಸಲು ಪಂಜಾಬ್ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಏಕೆಂದರೆ ಪಂಜಾಬ್‌ನಲ್ಲಿ ಜೈಲು ಊಟಕ್ಕೆ ಸಾರ್ವಜನಿಕರಿಂದ ಬಾರಿ ಬೇಡಿಕೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ದಿನಗಳಲ್ಲಿ ಪಂಜಾಬ್‌ನ ಕಾರಾಗೃಹಗಳ ಎದುರು ಉಪಹಾರ ಮಳಿಗೆಗಳು ಆರಂಭವಾಗಲಿವೆ.

‘ಅದೃಷ್ಟ ಸರಿ ಇಲ್ಲದವರು ಒಮ್ಮೆ ಜೈಲು ಊಟ ಸೇವಿಸಿದರೆ, ಆ ಕಂಟಕ ನಿವಾರಣೆಯಾಗುತ್ತದೆ ಎಂದು ಇಲ್ಲಿನ ಜೋತಿಷಿಗಳು ತಮ್ಮ ಅನುಯಾಯಿಗಳಿಗೆ ಪರಿಹಾರ ಸೂಚಿಸುತ್ತಿದ್ದಾರೆ. ಇದನ್ನು ನಂಬಿಕೊಂಡಿರುವ ಜನ ಜೈಲು ಊಟಕ್ಕಾಗಿ ಹಾತೊರೆಯುತ್ತಿದ್ದಾರೆ. ಹೀಗೆ ಜೈಲು ಊಟಕ್ಕೆ ಹಾತೊರೆಯುತ್ತಿರುವವರಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡವರ ಸಂಖ್ಯೆಯೇ ಹೆಚ್ಚು’ ಎಂದು ಪಂಜಾಬ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಹಳ ಹಿಂದಿನಿಂದಲೂ ಇಲ್ಲಿನ ಜನರಲ್ಲಿ ಇಂತಹ ನಂಬಿಕೆ ಇದೆ. ಜೈಲಿನ ಹೊರಗಿರುವವರಿಗೆ ಜೈಲು ಊಟ ಬೇಕು ಎಂದಾದರೆ, ಅದಕ್ಕೆ ಜೈಲಿನ ಸಿಬ್ಬಂದಿಯ ‘ಕೃಪಕಟಾಕ್ಷ’ ಬೇಕೇಬೇಕು. ಆ ಅನುಕೂಲ ಪಡೆದವರಿಂದ ಸಿಬ್ಬಂದಿ ತಕ್ಕ ‘ಪ್ರತಿಫಲ’ ಪಡೆದೇ ಪಡೆಯುತ್ತಾರೆ. ಹೀಗಾಗಿ ಅಧಿಕೃತವಾಗಿಯೇ ಜೈಲು ಊಟವನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡುವ ಯೋಚನೆ ಬಂತು ಎಂದು ಅವರು ವಿವರಿಸಿದ್ದಾರೆ.

ಆರಂಭಿಕ ಹಂತದಲ್ಲಿ ರಾಜ್ಯದ ಐದಾರು ಜೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಜೈಲಿನ ಹೊರಗೆ ತೆರೆಯಲಾಗುವ ಮಳಿಗೆಗಳು ದಿನದಲ್ಲಿ ಕೆಲವು ಸಮಯ ಮಾತ್ರ ಕಾರ್ಯನಿರ್ವಹಿಸುತ್ತವೆ. ಜೈಲು ಊಟದ ದರ ₹ 100ರಿಂದ ₹ 200ರಷ್ಟಿರಲಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಕೈದಿಗಳ ಆಹಾರ ತಯಾರಿಸಲು ದಿನವೊಂದಕ್ಕೆ ಸರಾಸರಿ ₹52.32 ವ್ಯಯಿಸಲಾಗುತ್ತಿದೆ ಎಂದು ಸರ್ಕಾರದ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ನಾಗಾಲ್ಯಾಂಡ್‌ನಲ್ಲಿ ಕೈದಿಗಳ ಆಹಾರಕ್ಕಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿದ್ದು, ಪ್ರತಿ ಕೈದಿಯ ದಿನವೊಂದರ ಊಟಕ್ಕಾಗಿ ₹ 140 ಖರ್ಚು ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ₹ 76.75 ವ್ಯಯಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕೇವಲ ₹ 32 ಖರ್ಚು ಮಾಡುತ್ತಿವೆ.

ಮುಖ್ಯಾಂಶಗಳು

* ಜೈಲು ಊಟ ತಿಂದರೆ ಸೆರೆವಾಸ ಕಂಟಕ ನಿವಾರಣೆ ಎಂಬ ನಂಬಿಕೆ

* ಕಳ್ಳಮಾರ್ಗಗಳಿಂದ ಜೈಲು ಊಟ ತರಿಸಿಕೊಳ್ಳುತ್ತಿರುವ ಸಾರ್ವಜನಿಕರು

* ಸಾರ್ವಜನಿಕರಿಗೆ ಅಧಿಕೃತ ವಾಗಿಯೇ ಜೈಲು ಊಟ ಒದಗಿಸಲು ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT