ಮಂಗಳೂರಿನ ನಾರಾಯಣ ಪೈಗೆ 2ನೇ ರ‍್ಯಾಂಕ್

7

ಮಂಗಳೂರಿನ ನಾರಾಯಣ ಪೈಗೆ 2ನೇ ರ‍್ಯಾಂಕ್

Published:
Updated:
ಮಂಗಳೂರಿನ ನಾರಾಯಣ ಪೈಗೆ 2ನೇ ರ‍್ಯಾಂಕ್

ಮಂಗಳೂರು: ಸಿಇಟಿಯ ಎಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಡೊಂಗರಕೇರಿಯ ನಾರಾಯಣ ಪೈ ಎರಡನೇ ರ‍್ಯಾಂಕ್‌ ಪಡೆದಿದ್ದಾರೆ.

ನಗರದ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ ಅವರು, ಜೆಇಇ ಮೇನ್ ಪರೀಕ್ಷೆಯಲ್ಲೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಿಬಿಎಸ್‍ಇ 10ನೇ ತರಗತಿಯಲ್ಲಿಯೂ ನಾರಾಯಣ 10 ಸಿಜಿಪಿಇ ಅಂಕಗಳನ್ನು ಪಡೆದಿದ್ದರು. ಎಕ್ಕೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಅವರು ಪ್ರೌಢಶಿಕ್ಷಣ ಪಡೆದಿದ್ದರು. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮುಂದುವರೆಸಲು ನಿರ್ಧರಿಸಿದ್ದಾರೆ.

ಅಪ್ಪ ಕೆನರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಸುರೇಂದ್ರ ಪೈ ಹಾಗೂ ಅಮ್ಮ ಸುಧಾ ಪೈ ಅವರು ಮಗನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

‘ಅವನು ಓದಿನತ್ತ ಹೆಚ್ಚು ಗಮನ ವಹಿಸುತ್ತಿದ್ದ. ಆದ್ದರಿಂದ ರ‍್ಯಾಂಕ್‌ ನಿರೀಕ್ಷೆ ಇತ್ತು. ದ್ವಿತೀಯ ರ‍್ಯಾಂಕ್‌ ಬಂದಿರುವುದು ಸಂತೋಷವಾಗಿದೆ’ ಎಂದು ಸುಧಾ ಪೈ ಹೇಳಿದರು.

‘ನನಗೆ ಭೌತವಿಜ್ಞಾನದಲ್ಲಿ ತುಂಬಾ ಆಸಕ್ತಿ. ಅಂದಿನ ಪಾಠಗಳನ್ನು ಅಂದೇ ಓದುವುದು ನನ್ನ ಅಭ್ಯಾಸ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಆಸೆ ಇದೆ’ ಎಂದು ನಾರಾಯಣ ಪೈ ಹೇಳಿದರು.

ಬೀದರ್ ವಿದ್ಯಾರ್ಥಿ ವಿನೀತ್‌ ಮೇಗೂರೆಗೆ ಮೊದಲ ರ‍್ಯಾಂಕ್

ಬೀದರ್‌:
‘ಪರೀಕ್ಷೆಯ ಸಿದ್ಧತೆ ಹೇಗೆ ನಡೆಸಬೇಕು. ಯಾವುದಕ್ಕೆ ಎಷ್ಟು ಆದ್ಯತೆ ಕೊಡಬೇಕು. ಸಮಯವನ್ನು ಹೇಗೆ ಸದ್ಬಳಕೆ ಮಾಡಿ

ಕೊಳ್ಳಬೇಕು ಎಂಬುವುದನ್ನು ಉಪನ್ಯಾಸಕರು ಹೇಳಿಕೊಟ್ಟರು. ಅದರಂತೆ ಸಿಇಟಿ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡೆ. ರಾಜ್ಯಕ್ಕೆ ಮೊದಲ ರ‍್ಯಾಂಕ್ ಬಂದಿರುವುದು ತುಂಬಾ ಅಚ್ಚರಿ ಉಂಟು ಮಾಡಿದೆ’ ಎಂದು ಪಶುವೈದ್ಯಕೀಯ ವಿಭಾಗದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿರುವ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿ ವಿನೀತ್ ದೀಪಕ ಮೇಗೂರೆ ಅವರು ಹೇಳಿದರು.

‘ಎಂಜಿನಿಯರಿಂಗ್‌ನಲ್ಲಿ 315ನೇ ರ‍್ಯಾಂಕ್ ಬಂದಿದೆ. ನೀಟ್‌ನಲ್ಲಿಯೂ ಉತ್ತಮ ರ‍್ಯಾಂಕ್ ದೊರೆಯುವ ನಿರೀಕ್ಷೆ ಇದೆ. ಭವಿಷ್ಯದಲ್ಲಿ ಉತ್ತಮ ವೈದ್ಯನಾಗಿ ಜನರ ಸೇವೆ ಮಾಡುವ ಬಯಕೆ ಇದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರ‍್ಯಾಂಕ್ ವಿಜೇತರ ಅಭಿಪ್ರಾಯ

ಭೌತ ವಿಜ್ಞಾನಿಯಾಗುವೆ...

ಹತ್ತರೊಳಗಿನ ರ‍್ಯಾಂಕ್‌ ನಿರೀಕ್ಷಿಸಿದ್ದೆ. ಮೊದಲ ರ‍್ಯಾಂಕ್‌ ಆಶ್ಚರ್ಯದ ಜತೆ ಖುಷಿಯನ್ನು ಹೊತ್ತು ತಂದಿದೆ. ಸುರತ್ಕಲ್‌ ಎನ್‌ಐಟಿಕೆಯಲ್ಲಿ ಕಂಪ್ಯೂಟರ್‌ ವಿಭಾಗದ ಎಂಜಿನಿಯರಿಂಗ್‌ ಕೋರ್ಸ್‌ ಮಾಡುವೆ. ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡುವೆ.

-ಶ್ರೀಧರ ದೊಡಮನಿ, ಎಂಜಿನಿಯರಿಂಗ್‌ ವಿಭಾಗದ ಮೊದಲ ರ‍್ಯಾಂಕ್‌ ವಿದ್ಯಾರ್ಥಿ, ವಿಜಯಪುರ

*

ಪೋಷಕರು, ಶಿಕ್ಷಕರಿಗೆ ಅರ್ಪಣೆ

ನಿರಂತರ ಪರಿಶ್ರಮ ಮತ್ತು ಅದೃಷ್ಟದಿಂದ ನನಗೆ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರನೇ ರ‍್ಯಾಂಕ್ ದೊರೆತಿದೆ. ಬೆಂಬಲ ನೀಡಿದ ಪೋಷಕರು ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ನನ್ನ ಈ ಸಾಧನೆ ಅರ್ಪಿಸುತ್ತೇನೆ. ಎಲೆಕ್ಟ್ರಿಕಲ್ ಅಥವಾ ಕಂಪ್ಯೂಟರ್‌ ಸೈನ್ಸ್ ಆಯ್ದುಕೊಳ್ಳುತ್ತೇನೆ.

-ದೇಬರ್ಷ್‌ ಸನ್ಯಾಸಿ, 3ನೇ ರ‍್ಯಾಂಕ್, ಎಂಜಿನಿಯರಿಂಗ್‌ ವಿಭಾಗ, ಬಳ್ಳಾರಿ

*

ಏಕಾಗ್ರತೆ ಸಹಾಯವಾಯಿತು

ಪೋಷಕರು ಮತ್ತು ಬೋಧಕರು ನಿರಂತರವಾಗಿ ನೀಡಿದ ಉತ್ತೇಜನವೇ ನನ್ನ ಇಂದಿನ ಸಾಧನೆಗೆ ಕಾರಣ ಮತ್ತು ಪ್ರೇರಣೆ. ಪ್ರತಿ ತರಗತಿಯೂ ಮುಖ್ಯ ಎಂಬ ಭಾವನೆ ನನ್ನದು. ಏಕಾಗ್ರತೆ ಮತ್ತು ಸತತ ಪುನರ್‌ಮನನವೇ ಹೆಚ್ಚು ಅಂಕ ಗಳಿಸಲು ಸಹಾಯವಾಯಿತು. ಪಶುವೈದ್ಯಕೀಯ ಹಾಗೂ ಕೃಷಿ ವಿಜ್ಞಾನ ಎರಡರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.

-ಎಸ್.ಆರ್.ಅಪರೂಪ, ಬಿ.ಎಸ್‌ಸ್ಸಿ ಪಶುವೈದ್ಯಕೀಯ 2ನೇ ರ‍್ಯಾಂಕ್, ಕೃಷಿ 4ನೇ ರ‍್ಯಾಂಕ್, ಬಳ್ಳಾರಿ

*

ಐಐಟಿ ಸೇರುವ ಆಸೆ

ಬಿಎಸ್ಸಿ ಕೃಷಿಯಲ್ಲಿ 2ನೇ ಹಾಗೂ ಬಿ.ಇ. ಎಂಜಿನಿಯರಿಂಗ್‌ನಲ್ಲಿ 10ನೇ ರ‍್ಯಾಂಕ್‌ ಬಂದಿರುವುದಕ್ಕೆ ಖುಷಿಯಾಗಿದೆ. ದಿನಕ್ಕೆ ಆರು ಗಂಟೆ ಓದುತ್ತಿದ್ದೆ. ನೀಟ್‌ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ವೈದ್ಯಕೀಯ ಅಥವಾ ಐಐಟಿ ಸೇರುವ ಆಸೆ ಇದೆ.

–ಸಾಯಿಕುಮಾರ ಸಾಧುನವರ, ಚೇತನ ಕಾಲೇಜು, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry