7
ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್‌, ಬಿಎಸ್‌ಸಿ ಅಗ್ರಿಯಲ್ಲಿ ಮೊದಲ ರ‍್ಯಾಂಕ್ ಪಡೆದ ವಿಜಯಪುರದ ಶ್ರೀಧರ ದೊಡಮನಿ

‘ಅಂಕಕ್ಕಿಂತ ಆಸಕ್ತಿ ಮುಖ್ಯ; ಭೌತ ವಿಜ್ಞಾನಿಯಾಗುವ ಹಂಬಲ...’

Published:
Updated:
‘ಅಂಕಕ್ಕಿಂತ ಆಸಕ್ತಿ ಮುಖ್ಯ; ಭೌತ ವಿಜ್ಞಾನಿಯಾಗುವ ಹಂಬಲ...’

ವಿಜಯಪುರ: ‘ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಬೇಕು ಎಂದು ಹಠಕ್ಕೆ ಬಿದ್ದು ಓದುವುದಕ್ಕಿಂತ; ಆಸಕ್ತಿಯಿಂದ ಅಧ್ಯಯನ ನಡೆಸಿದರೆ ನಿರೀಕ್ಷೆಗಿಂತ ಹೆಚ್ಚಿನ ಫಲಿತಾಂಶ ಪಡೆಯಬಹುದು..!’

ಸಿಇಟಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡ ಬೆನ್ನಿಗೆ ಎಂಜಿನಿಯರಿಂಗ್‌, ಬಿಎಸ್‌ಸಿ ಅಗ್ರಿ ವಿಭಾಗದಲ್ಲಿ ಮೊದಲ ರ‍್ಯಾಂಕ್ ಗಳಿಸಿದ ವಿಜಯಪುರದ ಎಕ್ಸಲೆಂಟ್‌ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಶ್ರೀಧರ ದೊಡಮನಿ ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದ ಅನಿಸಿಕೆಯಿದು.

‘ಜೆಇಇ ಪರೀಕ್ಷೆಯಲ್ಲಿ 928ನೇ ರ‍್ಯಾಂಕ್ ಗಳಿಸಿದ್ದೆ. ನೀಟ್‌ ಫಲಿತಾಂಶ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಸಿಇಟಿಯಲ್ಲಿ ಹತ್ತರೊಳಗಿನ ರ‍್ಯಾಂಕ್ ನಿರೀಕ್ಷಿಸಿದ್ದೆ. ಆದರೆ ಮೊದಲ ರ‍್ಯಾಂಕ್ ಆಶ್ಚರ್ಯದ ಜತೆ ಖುಷಿಯನ್ನು ಹೊತ್ತು ತಂದಿದೆ. ಬಿಎಸ್‌ಸಿ ಅಗ್ರಿಯಲ್ಲಿ ಯಾವ ನಿರೀಕ್ಷೆಯನ್ನೂ ಹೊಂದಿರಲಿಲ್ಲ...’ ಎಂದು ಶ್ರೀಧರ ಹೇಳಿದರು.

ಮನೆಪಾಠಕ್ಕೆ ಹೋಗಲಿಲ್ಲ...: ‘ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 585, ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 622 ಅಂಕ ಗಳಿಸಿದ್ದೆ. ಯಾವಾಗಲೂ ಅಂಕ ಗಳಿಸುವುದಕ್ಕೆ ಮಹತ್ವ ನೀಡಿ ಓದಲಿಲ್ಲ. ಪೋಷಕರು ಸಹ ಎಂದೂ ಒತ್ತಡವನ್ನು ನನ್ನ ಮೇಲೆ ಹಾಕಲಿಲ್ಲ. ಕಷ್ಟಪಟ್ಟು ಓದದೆ, ಇಷ್ಟಪಟ್ಟು ಅಧ್ಯಯನ ನಡೆಸಿದೆ. ಮನೆಪಾಠಕ್ಕೆ ಹೋಗಲಿಲ್ಲ. ತರಗತಿಗಳಲ್ಲಿ ಉಪನ್ಯಾಸಕರ ಬೋಧನೆಯನ್ನು ಲಕ್ಷ್ಯವಿಟ್ಟು ಕೇಳಿಸಿಕೊಳ್ಳುತ್ತಿದ್ದೆ. ಕಾಲೇಜಿನ ಅಧ್ಯಯನದ ಸಮಯದಲ್ಲಿ ಸ್ನೇಹಿತರೊಟ್ಟಿಗೆ ಗುಂಪು ಚರ್ಚೆ ನಡೆಸಿ, ಮನದಟ್ಟಾಗದಿದ್ದ ವಿಷಯವನ್ನು ಅರಿಯಲು ಯತ್ನಿಸುತ್ತಿದ್ದೆ. ಎಂದೆಂದೂ ಬೆಳಿಗ್ಗೆ ಓದಲಿಲ್ಲ. ಹಗಲಿನ ವೇಳೆ ಕಾಲೇಜಿನ ಚಟುವಟಿಕೆಗಳಿಗಷ್ಟೇ ಸೀಮಿತ

ವಾಗುತ್ತಿದ್ದೆ. ಸಂಜೆ 7ರಿಂದ ತಡರಾತ್ರಿ 12ರವರೆಗೂ ಆಸಕ್ತಿ, ಶ್ರದ್ಧೆಯಿಂದ ಓದುತ್ತಿದ್ದೆ. ನಡುವೆ ಊಟ ಸೇರಿದಂತೆ ಕೆಲ ಹೊತ್ತು ವಿಶ್ರಮಿಸಿಕೊಳ್ಳುತ್ತಿದ್ದೆ. ಈ ಸಂದರ್ಭ ಗೊಂದಲ ಮೂಡಿಸಿದ ವಿಷಯಗಳನ್ನು ಎಂಬಿಬಿಎಸ್‌ ಕಲಿಯುತ್ತಿರುವ ಅಣ್ಣನ ಜತೆ ಚರ್ಚಿಸಿ ಪರಿಹರಿಸಿಕೊಳ್ಳುತ್ತಿದ್ದೆ’ ಎಂದು ಶ್ರೀಧರ ತನ್ನ ಓದಿನ ಕ್ರಮವನ್ನು ವಿವರಿಸಿದರು.

ಸಾಮಾಜಿಕ ಜಾಲತಾಣ ಬಳಕೆ...: ‘ಸಾಮಾಜಿಕ ಜಾಲತಾಣ ಯೂಟ್ಯೂಬ್‌ ಅನ್ನು ಅಧ್ಯಯನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡೆ. ಪಠ್ಯಾಧಾರಿತ ಚಟುವಟಿಕೆಗಳ ಅನಿಮೇಷನ್ ವಿಡಿಯೊಗಳ ಮಹಾಪೂರವೇ ಯೂಟ್ಯೂಬ್‌ನಲ್ಲಿದೆ. ವಿಷಯಕ್ಕೆ ಸಂಬಂಧಿಸಿದ ಸರ್ಚ್‌ ನೀಡುತ್ತಿದ್ದಂತೆ, ಪಠ್ಯಾಧಾರಿತ ಅನಿಮೇಷನ್‌ ವಿಡಿಯೋ ಕ್ಲಿಪ್ಪಿಂಗ್‌ ಜಾಲತಾಣ ತೆರೆದುಕೊಳ್ಳುತ್ತಿತ್ತು. ಆಸಕ್ತಿಯಿಂದ ವೀಕ್ಷಿಸುತ್ತಿದ್ದೆ. ಇಡೀ

ಪಾಠವೇ ಮನನವಾಗುತ್ತಿತ್ತು’ ಎಂದು ಹೇಳಿದರು.

‘ನನ್ನ ತಂದೆ ಸಂಗನಬಸಪ್ಪ ಎಸ್‌ ದೊಡ್ಡಮನಿ ಇಟ್ಟಂಗಿಹಾಳದ ಎಕ್ಸಲೆಂಟ್‌ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರು. ತಾಯಿ ಪ್ರಭಾವತಿ ಚೈತನ್ಯ ಸಹಕಾರಿ ಬ್ಯಾಂಕ್‌ನ ಉದ್ಯೋಗಿ. ತಂದೆ ಆಗಾಗ್ಗೆ ಯಾವ ವಿಷಯವನ್ನು ಯಾವ ರೀತಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು’ ಎಂದು ಹೇಳಿದರು.

‘ಕಾಲೇಜಿನಲ್ಲಿ ಮುಕ್ತ ವಾತಾವರಣವಿತ್ತು. ಉಪನ್ಯಾಸಕರು ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಂಡು, ಬೋಧಿಸುತ್ತಿದ್ದರು. ಅರ್ಥವಾಗದಿದ್ದುದನ್ನು ಮನನ ಮಾಡಿಸಲು ಮುಂದಾಗುತ್ತಿದ್ದರು. ಪರೀಕ್ಷಾ ಭಯದ ವಾತಾವರಣವೇ ಇರಲಿಲ್ಲ. ಇದು ಸಹ ನನ್ನ ಸಾಧನೆಗೆ ಪೂರಕವಾಗಿದೆ’ ಎಂದರು.

ನಾವೂ ಮೊದಲು ಬರಬಹುದು...

‘ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನಗಳು ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿಗಷ್ಟೇ ಸೀಮಿತ ಎಂಬುದು ಈಚೆಗಿನ ದಿನಗಳಲ್ಲಿ ಬದಲಾಗಿದೆ. ಗುಣಮಟ್ಟದ ಶಿಕ್ಷಣ ದೊರೆತರೆ ಗ್ರಾಮೀಣ ಹುಡುಗರು ಮೊದಲ ರ‍್ಯಾಂಕ್ ಗಳಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿಯಾಗಿರುವೆ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿಯ ಶ್ರೀಧರ ದೊಡಮನಿ ಅಭಿಪ್ರಾಯಪಟ್ಟರು.

‘ಕಾಲೇಜಿನಲ್ಲಿ ವಾರಕ್ಕೆರೆಡು ಕಿರು ಪರೀಕ್ಷೆಗಳಿರುತ್ತಿದ್ದವು. ಈ ಪರೀಕ್ಷೆಗೆ ನಡೆಸಿದ ತಯಾರಿಯೇ ನನಗೆ ಭದ್ರ ಬುನಾದಿಯಾಗಿತ್ತು. ಈ ಕಿರು ಪರೀಕ್ಷೆಗಳೇ ನನ್ನ ಕೈ ಹಿಡಿದು ಮೊದಲ ಸ್ಥಾನ ತಂದುಕೊಟ್ಟಿವೆ’ ಎಂದು ಹೇಳಿದರು.

ಮೂರನೇ ಬಾರಿ...: ಸಿಇಟಿ ರ‍್ಯಾಂಕಿಂಗ್‌ನಲ್ಲಿ ವಿಜಯಪುರ ಜಿಲ್ಲೆ ಮೂರನೇ ಬಾರಿಗೆ ಮೊದಲ ಸ್ಥಾನ ಗಳಿಸಿದೆ. ಈ ಮೂವರು ಇಟ್ಟಂಗಿಹಾಳದ ಎಕ್ಸಲೆಂಟ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ವಿಷಯ.

ಪಿಡಿಜೆ ಕಾಲೇಜಿನ ಶರಣು ಇಜೇರಿ 2004ರಲ್ಲಿ ಎಂಜಿನಿಯರಿಂಗ್‌ ವಿಭಾಗ, 2008ರಲ್ಲಿ ಸುನೀಲ ಬಾದಾಮಿ ವೈದ್ಯಕೀಯ ವಿಭಾಗದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದರು. ಇದೀಗ ಎಕ್ಸಲೆಂಟ್‌ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಶ್ರೀಧರ ದೊಡಮನಿ ಎಂಜಿನಿಯರಿಂಗ್‌, ಬಿಎಸ್‌ಸಿ ಅಗ್ರಿಯಲ್ಲಿ ಮೊದಲ ರ‍್ಯಾಂಕ್ ಗಳಿಸಿ, ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

**

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಕಂಪ್ಯೂಟರ್‌ ವಿಭಾಗದ ಎಂಜಿನಿಯರಿಂಗ್‌ ಕೋರ್ಸ್‌ ಮಾಡುವೆ. ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವೆ

ಶ್ರೀಧರ ದೊಡಮನಿ, ಎಂಜಿನಿಯರಿಂಗ್‌ ವಿಭಾಗದ ಮೊದಲ ರ‍್ಯಾಂಕ್ ವಿದ್ಯಾರ್ಥಿ

**

ಮಗ ಸಾಧನೆ ಮಾಡುತ್ತಾನೆ ಎಂಬ ನಿರೀಕ್ಷೆ ಮೊದಲಿನಿಂದಲೂ ಇತ್ತು. ಭವಿಷ್ಯದಲ್ಲೂ ಮತ್ತಷ್ಟು ಸಾಧನೆಗೈಯಲಿದ್ದಾನೆ ಎಂಬ ವಿಶ್ವಾಸವಿದೆ – ಎಸ್‌.ಎಸ್‌.ದೊಡಮನಿ, ಶ್ರೀಧರ ತಂದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry