‘ಕೋಳಿ ಕೆರೆದಾಟ ಕಲೆಯಲ್ಲ’– ಕಲಾವಿದ ಎಂ.ಎಸ್‌. ಸೋಮವರದ

7

‘ಕೋಳಿ ಕೆರೆದಾಟ ಕಲೆಯಲ್ಲ’– ಕಲಾವಿದ ಎಂ.ಎಸ್‌. ಸೋಮವರದ

Published:
Updated:

ಶ್ರೀರಂಗಪಟ್ಟಣ: ‘ಕೋಳಿ ಕೆರೆದಾಟದಂತೆ ಅಲ್ಲೊಂದು ಇಲ್ಲೊಂದು ಚಿತ್ರ ಬರೆಯುವುದರಿಂದ ಕಲೆ ಉಳಿಯುವುದಿಲ್ಲ. ಸಾಂಪ್ರದಾಯಿಕ ಮತ್ತು ಆಧುನಿಕ ಕಲಾ ಪ್ರಕಾರಗಳ ನಡುವೆ ಸಮನ್ವಯ ಮೂಡಿಸುವ ಮೂಲಕ ಈ ನೆಲದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು’ ಎಂದು ಚಿತ್ರ ಕಲಾವಿದ ಎಂ.ಎಸ್‌.ಸೋಮವರದ ಹೇಳಿದರು.

ಇಲ್ಲಿನ ಮಯೂರ ರಿವರ್‌ ವ್ಯೂ ರೆಸಾರ್ಟ್‌ನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿರುವ 6 ದಿನಗಳ ರಾಜ್ಯ ಮಟ್ಟದ ಚಿತ್ರಕಲಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯ ಹೆಮ್ಮೆಯ ಕಲೆಯಾದ ತೊಗಲು ಗೊಂಬೆಯಾಟ ಸಂಪೂರ್ಣ ಕಣ್ಮರೆಯಾಗುತ್ತಿದೆ. ಚಲನಚಿತ್ರಗಳ ನಿರ್ಮಾಣಕ್ಕೆ ಪ್ರೇರಣೆ ಎನ್ನಲಾದ ಈ ಕಲೆಯ ಕಲಾವಿದರೇ ಇಲ್ಲದಂತಾಗಿದೆ. ಪ್ರಸಿದ್ಧ ಕಲಾವಿದ ಪಿಕಾಸೋನ ಚಿತ್ರಗಳು ಹಾಗೂ ರಾಮಾಯಣ ಗ್ರಂಥದ ಪ್ರಸಂಗಗಳಲ್ಲಿ ಕೂಡ ತೊಗಲು ಗೊಂಬೆಯಾಟದ ಛಾಪು ಇದೆ. ಅಳಿದುಳಿದ ಕಲೆ ಮ್ಯೂಸಿಯಂ ಸೇರಿಕೊಂಡಿದೆ. ದೇಶ, ವಿದೇಶಗಳಲ್ಲಿ ಕಲಾ ಪ್ರೌಢಿಮೆ ಮೆರೆದ ನಾಗಮಂಗಲ ತಾಲ್ಲೂಕಿನ ಹೊಂಬಯ್ಯ ಅವರ ಬಗ್ಗೆ ಯುವ ಪೀಳಿಗೆಗೆ ಪರಿಚಯವೇ ಇಲ್ಲ’ ಎಂದು ವಿಷಾದಿಸಿದರು.

‘ಗಂಜೀಫಾ ಕಲೆ, ಮಧುಬನಿ ಕಲೆ, ವರ್ಲಿ ಕಲಾ ಪ್ರಕಾರಗಳು ಕಾಣೆಯಾಗಿವೆ. ಪ್ರತಿ ಮನೆಗಳಲ್ಲಿ ಕಂಗೊಳಿಸುತ್ತಿದ್ದ ಹಸೆ ಚಿತ್ರಗಳನ್ನು ಬರೆಯುವವರೇ ಇಲ್ಲದಂತಾಗಿದೆ. ಶಿಲ್ಪಕಲಾವಿದರೂ ಕಾಣುತ್ತಿಲ್ಲ. ಪರಿಷತ್ತು, ಮಂಡಳಿ ಅಥವಾ ಅಕಾಡೆಮಿಗಳು ಚಿತ್ರಕಲೆ ಉಳಿಸಲು ಒಗ್ಗೂಡಿ ಶ್ರಮಿಸಬೇಕು. ಯುವ ಪೀಳಿಗೆಯನ್ನು ಸಾಂಪ್ರದಾಯಿಕ ಕಲೆಯತ್ತ ಆಕರ್ಷಿಸಬೇಕು’ ಎಂದು ಹೇಳಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ಕಾರ್ಯದರ್ಶಿ ಎಚ್‌.ವಿ.ಇಂದ್ರಮ್ಮ, ಪ್ರೊ.ಕೆ.ಎಸ್‌.ಅಪ್ಪಾಜಯ್ಯ ಮಾತನಾಡಿದರು. ಮಂಡ್ಯ ಯುವದನಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಕೃಷ್ಣ, ಬಸವರಾಜ ಉಪ್ಪಿನ್‌ ಕಲಬುರ್ಗಿ, ಶಾಂತಾಬಾಯಿ, ಅಭಿಷೇಕ್‌ ಇದ್ದರು. ತುಮಕೂರು, ಬೆಂಗಳೂರು, ಮೈಸೂರು, ಬೀದರ್‌ ಇತರ ಜಿಲ್ಲೆಗಳ ಕಲಾವಿದರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry