ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ, ಜನಸ್ನೇಹಿ ಆಡಳಿತಕ್ಕೆ ಬದ್ಧ; ಭ್ರಷ್ಟರಿಗೆ ಜಾಗವಿಲ್ಲ

ಕ್ಷೇತ್ರ ಎಲ್ಲ ಕೆರೆಗಳಿಗೂ ಆಲಮಟ್ಟಿ ಹಿನ್ನೀರು ತುಂಬಿಸುವೆ; ಶಾಸಕ ವೀರಣ್ಣ ಚರಂತಿಮಠ ಭರವಸೆ
Last Updated 2 ಜೂನ್ 2018, 8:17 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಚುಕ್ಕಾಣಿ ಹಾಗೂ ಸಾರ್ವಜನಿಕ ಬದುಕು ಎರಡರಲ್ಲೂ ಕಳೆದ ಎರಡೂವರೆ ದಶಕಗಳಿಂದ ಬದ್ಧತೆಯ ಹೆಜ್ಜೆ ಇಟ್ಟು ಯಶಸ್ಸು ಸಾಧಿಸಿದವರು ವೀರಣ್ಣ ಚರಂತಿಮಠ. ಈ ಹಿಂದೆ 2004 ಹಾಗೂ 2008ರಲ್ಲಿ ಸತತ ಎರಡು ಬಾರಿ ಬಿಜೆಪಿಯಿಂದ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ವೀರಣ್ಣ, ಕಳೆದ ಬಾರಿ (2013)ರಲ್ಲಿ ದಾಯಾದಿ ಕಲಹದಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದರು. ಐದು ವರ್ಷಗಳ ಬಿಡುವಿನ ನಂತರ ಇದೀಗ ಮೂರನೇ ಬಾರಿಗೆ ಭರ್ಜರಿ ಅಂತರದ ಗೆಲುವು ಸಾಧಿಸಿದ್ದಾರೆ.

‘ಬಾಯಿ ತುಸು ಬಿರುಸಾದರೂ ಹೃದಯ ಚಲೋ, ಕಟ್ಟುವ ಕಾಯಕದಲ್ಲಿ ವೀರಣ್ಣ ಸದಾ ಮುಂದು, ಅಚ್ಚುಕಟ್ಟು’ ಎಂಬುದು ಅವರನ್ನು ಟೀಕಿಸುವವರದ್ದೂ ಅಭಿಮತ.

‘ಕಳೆದ ಬಾರಿ ಸೋತರೂ ಜನರೊಡನೆ ಒಡನಾಟ ಬಿಟ್ಟಿರಲಿಲ್ಲ. ಅದೇ ಇಂದು ಮತ್ತೆ ಗೆಲುವಿನ ಹಾದಿಗೆ ಮರಳಿಸಿದೆ. ಅಧಿಕಾರಕ್ಕಿಂತ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಧ್ಯೇಯ. ಸ್ವಚ್ಛ ಆಡಳಿತ ನೀಡುವುದು ಗುರಿ’ ಎಂದು ಹೇಳಿದ ವೀರಣ್ಣ ಮುಂದಿನ ತಮ್ಮ ಐದು ವರ್ಷದ ಕನಸುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಬಳಿ ನೀಲನಕ್ಷೆ (ಬ್ಲ್ಯೂಪ್ರಿಂಟ್) ಏನಿದೆ?

ಆಲಮಟ್ಟಿ ಜಲಾಶಯದ ಎತ್ತರ 524.256 ಮೀಟರ್‌ಗೆ ಹೆಚ್ಚಳಗೊಂಡರೆ ಮುಳುಗಡೆಯಾಗಲಿರುವ 527 ಮೀಟರ್‌ವರೆಗಿನ ಪ್ರದೇಶದ ನಿವಾಸಿಗಳಿಗೆ ಸೂಕ್ತ ಪರಿಹಾರ ಕೊಡಿಸುವುದು ಮೊದಲ ಆದ್ಯತೆ. ಈ ವೇಳೆ ದ್ವೀಪಗಳಾಗಿ ಪರಿಣಮಿಸಲಿರುವ ಕಿಲ್ಲಾ ಹಾಗೂ ಜೈನಪೇಟೆಗಳನ್ನು ಸ್ಥಳಾಂತರಿಸಲಾಗುವುದು. ಜೊತೆಗೆ 525 ಮೀಟರ್‌ ವ್ಯಾಪ್ತಿಯವರೆಗಿನ ಜಮೀನುಗಳಿಗೆ ಪರಿಹಾರ ಕೊಡಿಸುವೆ.
ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳಿಗೂ ಆಲಮಟ್ಟಿ ಜಲಾಶಯದ ಹಿನ್ನೀರು ತುಂಬಿಸುವ ಕಾರ್ಯ ಕೈಗೊಳ್ಳುವೆ. ವರ್ಷಕ್ಕಿಷ್ಟು ಕೆರೆಗಳಂತೆ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ನೀರಾವರಿ ಪ್ರದೇಶ ವಿಸ್ತರಣೆಗೂ ಶ್ರಮ ವಹಿಸುವೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ನೀರು, ಚರಂಡಿ, ವಿದ್ಯುತ್‌ನಂತಹ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗುವುದು.

* ಕ್ಷೇತ್ರದಲ್ಲಿ ತಕ್ಷಣ ಅಭಿವೃದ್ಧಿಗಾಗಿ ನಿಮ್ಮ ಹೊಳಹುಗಳೇನು?

ಕ್ಷೇತ್ರದಲ್ಲಿ ಮೊದಲು ಸರ್ಕಾರಿ ಶಾಲೆ–ಕಾಲೇಜುಗಳ ಸುಧಾರಣೆಗೆ ಆದ್ಯತೆ ನೀಡುವೆ. ಶಿಕ್ಷಕರು, ಗುಣಮಟ್ಟದ ಶಿಕ್ಷಣ ಲಭ್ಯವಿರುವಂತೆ ಮಾಡುವೆ. ವಿದ್ಯಾಗಿರಿ, ನವನಗರದ ರಸ್ತೆಗಳು ಹಾಳಾಗಿವೆ. ಮೊದಲು ಅವುಗಳ ದುರಸ್ತಿಗೆ ಕ್ರಮ ವಹಿಸುವೆ. ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನೀರು ಇಲ್ಲದೇ ಅಲ್ಲಿನ ಮರ–ಗಿಡಗಳು ಒಣಗುತ್ತಿವೆ. ಹಾಗಾಗಿ 24x7 ಕುಡಿಯುವ ನೀರಿನ ಯೋಜನೆಯನ್ನು ತೋಟಗಾರಿಕೆ ವಿ.ವಿ ಆವರಣಕ್ಕೂ ವಿಸ್ತರಿಸಲಾಗುವುದು. ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ನವನಗರದ ಉದ್ಯಾನವನಗಳ ನಿರ್ವಹಣೆ ಜವಾಬ್ದಾರಿ ತೋಟಗಾರಿಕೆ ವಿ.ವಿ ಆಡಳಿತಕ್ಕೆ ವಹಿಸಿದ್ದೆ. ಆದರೆ ನಂತರ ಬಂದವರು ಅದನ್ನು ಹಿಂದಕ್ಕೆ ಪಡೆದರು. ಅದರಿಂದ ಬಹುತೇಕ ಉದ್ಯಾನವನಗಳಲ್ಲಿ ಮುಳ್ಳು–ಕಂಟಿ ಬೆಳೆದುನಿಂತಿದೆ. ಹಾಗಾಗಿ ಉದ್ಯಾನಗಳ ನಿರ್ವಹಣೆ ಜವಾಬ್ದಾರಿಯನ್ನು ಮತ್ತೆ ತೋಟಗಾರಿಕೆ ವಿ.ವಿಗೆ ವಹಿಸಲಾಗುವುದು.

* ಆಡಳಿತ ಬಿಗಿಗೊಳಿಸಲು ನಿಮ್ಮ ಆದ್ಯತೆಗಳೇನು?

ಒಳ್ಳೆಯ ಅಧಿಕಾರಿಗಳನ್ನು ಇಲ್ಲಿಗೆ ತರಲು ಮೊದಲ ಆದ್ಯತೆ ನೀಡುವೆ. ನಗರದಲ್ಲಿ ಅನಧಿಕೃತ ಇಸ್ಪೀಟ್, ಕೇರಂ, ಸ್ನೂಕರ್ ಕ್ಲಬ್‌ಗಳು ತಲೆ ಎತ್ತಿವೆ. ಅಕ್ರಮ ಮದ್ಯದ ಅಡ್ಡೆಗಳು ಇದ್ದು, ಮಾವಾ ಮಾರಾಟ ಅವ್ಯಾಹತವಾಗಿದೆ. ಕೂಡಲೇ ಅವುಗಳನ್ನು ಬಂದ್ ಮಾಡಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡುವೆ. ಬೆನ್ನತ್ತಿ ಕೆಲಸ ಮಾಡಿಸುವೆ. ಲಂಚ ತೆಗೆದುಕೊಳ್ಳದೇ ಜನರ ಕೆಲಸ ಮಾಡಿಕೊಡಲು ಸರ್ಕಾರಿ ನೌಕರರಿಗೆ ಕಟ್ಟುನಿಟ್ಟಾಗಿ ಸೂಚಿಸುವೆ.

* ಶಾಸಕರ ಅನುದಾನದಲ್ಲಿ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುವಿರಿ?

ಸರ್ಕಾರಿ ಶಾಲೆಗಳಲ್ಲಿ ಕೊಠಡಿ, ಹೆಣ್ಣು ಮಕ್ಕಳಿಗೆ ಶೌಚಾಲಯ, ಕಾಂಪೌಂಡ್ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡುವೆ.
ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಪಡೆದು ಎಲ್ಲರಿಗೂ ಮನೆ ಕಟ್ಟಿಕೊಡುವ ಕೆಲಸ ಮಾಡುವೆ. ಸ್ಲಂಗಳಲ್ಲಿ ವಾಸಿಸುವವರಿಗೆ ಮೊದಲ ಆದ್ಯತೆ ನೀಡುತ್ತೇನೆ. ಮನೆ ಕಟ್ಟಿಸಿಕೊಟ್ಟ ನಂತರ ಖಾಲಿ ಉಳಿಯುವ ಸ್ಲಂ ಪ್ರದೇಶದಲ್ಲಿ ಉದ್ಯಾನವನ ಬೆಳೆಸಲು ಒತ್ತು ನೀಡುವೆ.

* ಈ ಬಾರಿ ಗೆಲುವಿನ ಗುಟ್ಟೇನು?

ಬೂತ್‌ಮಟ್ಟದಿಂದಲೂ ಶ್ರಮವಹಿಸಿದ ಕಾರ್ಯಕರ್ತರು ನನಗೆ ಗೆಲುವಿನ ಹಾದಿ ಸುಗಮಗೊಳಿಸಿದರು. ಹಿಂದಿನವರ ಆಡಳಿತದ ವೈಖರಿಯಿಂದ ಜನ ಬೇಸತ್ತಿದ್ದರು. ಬದಲಾವಣೆ ಬಯಸಿದ್ದರು. ಹಾಗಾಗಿ ಎಲ್ಲ ಸಮುದಾಯದವರು ನನ್ನ ಬೆನ್ನ ಹಿಂದೆ ನಿಂತು ಗೆಲ್ಲಿಸಿದರು.

* ಆಡಳಿತ ಜನಸ್ನೇಹಿಯಾಗಿಸಲು ಕ್ರಮವೇನು?

ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಸಾಕಷ್ಟು ಕುಂಠಿತಗೊಂಡಿದೆ. ಭ್ರಷ್ಟಾಚಾರ ವ್ಯಾಪಕಗೊಂಡಿದೆ. ತಹಶೀಲ್ದಾರ್ ಕಚೇರಿಯಲ್ಲಿ ಉತಾರ ಪಡೆಯಬೇಕಾದರೂ ₹ 1500 ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಅದೆಲ್ಲಾ ಹಳಿಗೆ ಬರಬೇಕಾದರೆ ಕನಿಷ್ಠ ಮೂರು ತಿಂಗಳು ಬೇಕು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣ ಬಿಚ್ಚದೇ ಯಾವುದೇ ಕೆಲಸ ಆಗುವುದಿಲ್ಲ ಎಂಬ ಮನೋಭಾವ ಜನರಲ್ಲಿ ಬೇರುಬಿಟ್ಟಿದೆ. ಶೀಘ್ರ ಕಮಿಷನರ್ ನೇತೃತ್ವದಲ್ಲಿ ಸಭೆ ನಡೆಸಿ ಕಳೆದ ಅವಧಿಯಲ್ಲಿ ಎಷ್ಟು ಆದಾಯ ಬಂದಿದೆ. ಖರ್ಚು–ವೆಚ್ಚ, ಕಾಮಗಾರಿಯ ಪಟ್ಟಿ ಪಡೆದು ತನಿಖೆಗೆ ಒಳಪಡಿಸಲಾಗುವುದು. ಇನ್ನು ಮುಂದೆ ಜನರ ಕೆಲಸ ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವೆ. ಸಿಮೆಂಟ್ ಫ್ಯಾಕ್ಟರಿ ಕ್ವಾರಿಯಿಂದ ಬಾಗಲಕೋಟೆಗೆ ಕುಡಿಯುವ ನೀರು ಹಾಗೂ ನವನಗರಕ್ಕೆ 24x7 ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಜೂನ್‌ 4ರಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕ್ಷೇತ್ರವನ್ನು ಹಾಳು ಮಾಡಿರುವ ಅಧಿಕಾರಿಗಳು, ಅವರಾಗಿಯೇ ವರ್ಗಾವಣೆ ಮಾಡಿಸಿಕೊಂಡು ಹೋದರೆ ಸೂಕ್ತ. ಇನ್ನು ಮುಂದೆ ದುರಾಡಳಿತಕ್ಕೆ ಅವಕಾಶವಿಲ್ಲ.

* ಕ್ಷೇತ್ರದ ಜನರಿಗೆ ಸ್ಪಂದನೆ ಹೇಗೆ?

ಬೆಳಿಗ್ಗೆ 9.30ರವರೆಗೆ ಮನೆಯಲ್ಲಿಯೇ ಜನರ ಭೇಟಿಗೆ ಸಿಗುವೆ. 10 ಗಂಟೆಗೆ ಅಂಗಡಿಗೆ ಹೋಗುವೆ. ಅಲ್ಲಿಯೂ ಭೇಟಿ ಮಾಡಬಹುದು. ಇಡೀ ದಿನ ಸಂಘದ ಕಚೇರಿಯಲ್ಲಿ ಸಿಗುತ್ತೇನೆ. ಸಂಜೆ ಶಿವಾನಂದ ಜಿನ್‌ನಲ್ಲಿ ಇರುತ್ತೇನೆ. ಕ್ಷೇತ್ರದ ಜನ ಯಾವಾಗ ಯಾರು ಬೇಕಾದರೂ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಬಹುದು. ನೇರವಾಗಿ ಬಂದು ಭೇಟಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT