ಗುಣಮಟ್ಟದ ಬಿತ್ತನೆ ಬೀಜ ಬಳಸಲು ಸಲಹೆ

7
ನೇಗಿಲು ಹಿಡಿದು ಬಿತ್ತನೆ ಮಾಡಿ ಸ್ಫೂರ್ತಿ ತುಂಬಿದ ಕೃಷಿ ಅಧಿಕಾರಿಗಳು

ಗುಣಮಟ್ಟದ ಬಿತ್ತನೆ ಬೀಜ ಬಳಸಲು ಸಲಹೆ

Published:
Updated:

ಹೊಳಲ್ಕೆರೆ: ರೈತರು ಕೃಷಿ ಇಲಾಖೆ ನಿಗದಿ ಪಡಿಸಿದ ಗುಣಮಟ್ಟದ ಬಿತ್ತನೆ ಬೀಜಗಳನ್ನೇ ಬಳಸಬೇಕು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಕೆ.ಎಸ್.ಶಿವಕುಮಾರ್ ಸಲಹೆ ನೀಡಿದರು.

ತಾಲ್ಲೂಕಿನ ಬಸಾಪುರ ಗ್ರಾಮದ ಬಳಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.‘ರೈತರು ಖಾಸಗಿ ವ್ಯಕ್ತಿಗಳಿಂದ ಬೀಜ ಖರೀದಿಸಬಾರದು. ರಾಣೆಬೆನ್ನೂರು, ಹಾವೇರಿ ಕಡೆ ಈರುಳ್ಳಿ, ಮೆಕ್ಕೆಜೋಳದ ಬಿಡಿ ಬೀಜಗಳನ್ನು ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಇದೆ. ಗುಣಮಟ್ಟ ಖಾತರಿ ಇಲ್ಲದ ಇಂತಹ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಇಳುವರಿ ಕಡಿಮೆ ಆಗುತ್ತದೆ. ಕಳಪೆ ಬೀಜ ಬಿತ್ತನೆ ಮಾಡಿ ಬೆಳೆ ನಾಶವಾದರೆ ಕೃಷಿ ಇಲಾಖೆ ಜವಾಬ್ದಾರಿ ಆಗುವುದಿಲ್ಲ. ಕಳಪೆ ಬೀಜದ ಬಗ್ಗೆ ಈಗಾಗಲೇ ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಇಲಾಖೆಯಿಂದ ಪ್ರಮಾಣೀಕರಿಸಿದ ಬೀಜಗಳನ್ನೇ ಖರೀದಿಸಿ ಬಿತ್ತನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಇಲಾಖೆ ನಿಗದಿಪಡಿಸಿರುವ ಅಧಿಕೃತ ಬೀಜ ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿಸಿ, ರಸೀದಿ ಪಡೆಯಬೇಕು. ಬೀಜದ ಪಾಕೆಟ್ ಹಾಗೂ ಬಿಲ್‌ಗಳನ್ನು ಬೆಳೆ ಬರುವವರೆಗೂ ಜೋಪಾನವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರಿಗೂ ಮೊದಲೇ ಉತ್ತಮ ಮಳೆಯಾಗಿದೆ. ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ. ರೈತರು ಬೀಜೋಪಚಾರ ಮಾಡಿದ ನಂತರವೇ ಬಿತ್ತನೆ ಮಾಡಬೇಕು. ಇದರಿಂದ ಮುಂದೆ ಬರಬಹುದಾದ ರೋಗಗಳನ್ನು ತಡೆಗಟ್ಟಬಹುದು. ಉತ್ತಮ ಇಳುವರಿಯನ್ನೂ ಪಡೆಯಬಹುದು. ಇಲಾಖೆ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲಿ ದೊರೆಯುವ ಬೀಜಗಳಿಗೆ ಮೊದಲೇ ಬೀಜೋಪಚಾರ ಮಾಡಲಾಗಿರುತ್ತದೆ’ ಎಂದರು.

‘ಬಿತ್ತನೆ ಸಂದರ್ಭದಲ್ಲಿ ಗಿಡದಿಂದ ಗಿಡಕ್ಕೆ ಕನಿಷ್ಠ ಅರ್ಧ ಅಡಿ ಅಂತರ ಕಾಯ್ದುಕೊಳ್ಳಬೇಕು. ಡಿಎಪಿ ಬಳಕೆ ಜೊತೆ ಎಕೆಗೆ 50 ಕೆ.ಜಿ. ಪೊಟ್ಯಾಷ್ ಬಳಸಬೇಕು. ಪ್ರತಿ ಎಕರೆಗೆ 10 ಕೆಜಿ ಜಿಂಕ್, 2 ಕೆಜಿ ಬೋರಾನ್ ನಂತಹ ಲಘು ಪೋಷಕಾಂಶ ಬಳಕೆ ಮಾಡುವುದರಿಂದ ಬೆಳೆಗೆ ಸಮಗ್ರ ಪೋಷಕಾಂಶ ದೊರೆಯುತ್ತದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry