ಸೋಮವಾರ, ಡಿಸೆಂಬರ್ 9, 2019
25 °C

ಪ್ರಮುಖ ಖಾತೆಗಳಿಗೆ ಜೆಡಿಎಸ್‌ನಲ್ಲಿ ಭಾರೀ ಪೈಪೋಟಿ

Published:
Updated:
ಪ್ರಮುಖ ಖಾತೆಗಳಿಗೆ ಜೆಡಿಎಸ್‌ನಲ್ಲಿ ಭಾರೀ ಪೈಪೋಟಿ

ಬೆಂಗಳೂರು: ಲೋಕೋಪಯೋಗಿ ಅಥವಾ ಇಂಧನ ಖಾತೆಗಳಲ್ಲಿ ಒಂದನ್ನು ನೀಡಲೇ ಬೇಕು ಎಂದು ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಪಟ್ಟು ಹಿಡಿದಿದ್ದಾರೆ.

ತಾವು ಹಿರಿಯ ಶಾಸಕರಾಗಿದ್ದು, ಸಿದ್ದರಾಮಯ್ಯ ಅವರನ್ನೇ ಅತಿ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿರುವುದರಿಂದ ಪ್ರಮುಖ ಖಾತೆಯನ್ನೇ ನೀಡಬೇಕು ಎಂಬುದು ಅವರ ಒತ್ತಾಯ. ಇದಕ್ಕೆ ಪೂರಕವಾಗಿ ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ಕೂಡ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಅವರಲ್ಲದೆ ಇನ್ನೂ ಹಲವು ಹಿರಿಯ ಶಾಸಕರು ಪ್ರಮುಖ ಖಾತೆಗಳಿಗೆ ಪರೋಕ್ಷವಾಗಿ ಒತ್ತಡ ಹೇರುತ್ತಿದ್ದಾರೆ. ಜೆಡಿಎಸ್‌ ಪಾಲಿಗೆ ಸಿಕ್ಕಿರುವ ಖಾತೆಗಳಲ್ಲಿ ಹಣಕಾಸು ಹೊರತುಪಡಿಸಿ, ಲೋಕೋಪಯೋಗಿ, ಇಂಧನ, ಅಬಕಾರಿ, ಸಾರಿಗೆ, ಸಹಕಾರ ಪ್ರಬಲ ಖಾತೆಗಳು ಎನಿಸಿವೆ. ಇದಕ್ಕಾಗಿ ಹಿರಿಯ ಶಾಸಕರಲ್ಲಿ ಪೈಪೋಟಿ ತಾರಕಕ್ಕೇರಿದೆ. ಅಲ್ಲದೆ, ಮೊದಲ ಬಾರಿಗೆ ಮಂತ್ರಿ ಸ್ಥಾನ ಗಿಟ್ಟಿಸುವ ಆಕಾಂಕ್ಷಿ ಶಾಸಕರು ಸಾಕಷ್ಟು ಇದ್ದಾರೆ. ಅಂತಹವರಲ್ಲಿ ಎರಡರಿಂದ ಮೂರು ಬಾರಿ ಗೆದ್ದು ಶಾಸಕರಾದವರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಗೆದ್ದು ಬಂದಿದ್ದಾರೆ. ಜಿಲ್ಲಾವಾರು ಎಷ್ಟು ಶಾಸಕರಿಗೆ ಪ್ರಾತಿನಿಧ್ಯ ಸಿಗುತ್ತದೆ ಎಂಬುದು ಮಾತ್ರ ಚಿದಂಬರ ರಹಸ್ಯ.  ಮುಖ್ಯಮಂತ್ರಿ ಹೊರತುಪಡಿಸಿ 11 ಶಾಸಕರು ಮಾತ್ರ ಜೆಡಿಎಸ್‌ನಿಂದ ಸಚಿವರಾಗಲು ಸಾಧ್ಯವಿದೆ. ಬಿಎಸ್‌ಪಿಯ ಒಬ್ಬ ಶಾಸಕರಿಗೆ ಅವಕಾಶ ನೀಡಿದರೆ, ಜೆಡಿಎಸ್‌ ಪಾಲಿಗೆ ಉಳಿಯುವುದು 10 ಸಚಿವ ಸ್ಥಾನಗಳು ಮಾತ್ರ. ಉಳಿದ ಶಾಸಕರಿಗೆ ನಿಗಮ–ಮಂಡಳಿಯಲ್ಲಿ ಅವಕಾಶ ಕಲ್ಪಿಸಬಹುದು ಎಂದು ಮೂಲಗಳು

ತಿಳಿಸಿವೆ.

ಎಚ್‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ, ಎಚ್.ವಿಶ್ವನಾಥ್, ಡಿ.ಸಿ.ತಮ್ಮಣ್ಣ, ರಾಜಾ ವೆಂಕಟಪ್ಪ ನಾಯಕ, ಕೆ.ಗೋಪಾಲಯ್ಯ, ಬಿ.ಎಂ.ಫಾರೂಕ್, ಎಸ್.ಆರ್.ಶ್ರೀನಿವಾಸ್, ಕೆ.ಎಂ.ಶಿವಲಿಂಗೇಗೌಡ, ಬಿ.ಸತ್ಯನಾರಾಯಣ, ಕೆ.ಶ್ರೀನಿವಾಸಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ ಮತ್ತು ಟಿ.ಎ. ಶರವಣ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳು. ಅಲ್ಲದೆ, ಇನ್ನೂ ಹಲವು ಶಾಸಕರು ವರಿಷ್ಠರ ಮೇಲೆ ಒತ್ತಡ ಹೇರುವ ಮೂಲಕ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

ಖಾತೆ ಹಂಚಿಕೆ ಸಂದರ್ಭದಲ್ಲಿ ಪ್ರದೇಶ ಮತ್ತು ಜಾತಿ ಸಮೀಕರಣವನ್ನೂ ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ಪಕ್ಷದ ಇಬ್ಬರು ಲಿಂಗಾಯತ ಶಾಸಕರಿಗೆ ಅವಕಾಶ ನೀಡದೇ ಇದ್ದರೆ, ಅವರು ಬಿಜೆಪಿಗೆ ಜಿಗಿದರೂ ಅಚ್ಚರಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಮಣೆ ಹಾಕಬೇಕು. ಶಾಸಕರಿಂದ ಹೆಚ್ಚುತ್ತಿರುವ ಒತ್ತಡದಿಂದಾಗಿ ದೇವೇಗೌಡರಿಗೆ ಆಪ್ತರಾಗಿರುವ ಕೆಲವು ಶಾಸಕರು ತ್ಯಾಗಕ್ಕೆ ಮುಂದಾಗುವ ಸ್ಥಿತಿ ಬರಬಹುದು ಎಂದು ಮೂಲಗಳು ತಿಳಿಸಿವೆ.

ದೇವೇಗೌಡರಿಗೆ ಆಪ್ತರಿರುವವರು ಅವರ ಸಂಪರ್ಕದಲ್ಲಿದ್ದರೆ, ಕುಮಾರಸ್ವಾಮಿ ಜತೆ ಒಡನಾಟ ಇರುವವರು ಅವರಿಗೆ ಒತ್ತಡ ಹೇರುತ್ತಿದ್ದಾರೆ.

ಗದರಿದ ತಮ್ಮ, ಮೌನವಾದ ಅಣ್ಣ!

ಬೆಂಗಳೂರು:
ಹಾಲಿನ ದರ ಏರಿಕೆ ಪ್ರಸ್ತಾವ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಸಹೋದರ, ಶಾಸಕ ಎಚ್‌.ಡಿ.ರೇವಣ್ಣ ಅವರ ಮಧ್ಯೆ ಸಿಟ್ಟು, ಸಿಡುಕಿಗೆ ಕಾರಣವಾಯಿತು.

ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಹಾಲಿನ ದರ ಏರಿಕೆ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ, ಈ ಬಗ್ಗೆ ಯಾವುದೇ ಒಕ್ಕೂಟದಿಂದಲೂ ಮನವಿ ಬಂದಿಲ್ಲ ಎಂದರು.

‘ಹಾಲಿನ ಉತ್ಪನ್ನಗಳಾದ ಬೆಣ್ಣೆ, ಹಾಲಿನಪುಡಿ, ತುಪ್ಪ ಸಮರ್ಪಕವಾಗಿ ವಿಲೇವಾರಿ ಆಗುತ್ತಿದೆ‘ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಎಚ್‌.ಡಿ.ರೇವಣ್ಣ ‘ಹಾಲು ಒಕ್ಕೂಟಗಳು ಸಂಕಷ್ಟದಲ್ಲಿವೆ, ಹಾಲಿನ ದರ ಜಾಸ್ತಿ ಮಾಡದಿದ್ದರೆ ರೈತರು ಹೇಗೆ ಬದುಕಬೇಕು. ಹಾಗಾಗಿ ಬೆಲೆ ಜಾಸ್ತಿ ಮಾಡಬೇಕು’ ಎಂದರು.

ಇದರಿಂದ ಮುಜುಗರಕ್ಕೆ ಒಳಗಾದ ಕುಮಾರಸ್ವಾಮಿ ಅವರು ‘ನೀನು ಕೆಎಂಎಫ್‌ ಬಗ್ಗೆ ಮಾತನಾಡುವುದಿದ್ದರೆ ಬೇರೆ ಪ್ರೆಸ್‌ಮಿಟ್‌ ಮಾಡು’ ಎಂದು ಕಡ್ಡಿ ಮುರಿದಂತೆ ಹೇಳಿದರು. ಈ ಸಂದರ್ಭದಲ್ಲಿ ರೇವಣ್ಣ ಮತ್ತೆ ಮಾತನಾಡಲು ಮುಂದಾದಾಗ ಸಿ.ಎಂ ಕುಮಾರಸ್ವಾಮಿ ಕೈಯಿಂದ ಸನ್ನೆಮಾಡಿ ‘ಸುಮ್ಮನಿರು‘ ಎಂದರು. ಆಗ ಅಣ್ಣ ರೇವಣ್ಣ ಗಪ್‌ಚುಪ್‌ ಕುಳಿತರು.

ಪ್ರತಿಕ್ರಿಯಿಸಿ (+)