ನಾಗರಾಳ್‌ ಜಲಾಶಯದ ಒಳಹರಿವು ಹೆಚ್ಚಳ

7
ರಟಕಲ್‌, ಚೆಂಗಟಾ, ಐನಾಪುರದಲ್ಲೂ ವರ್ಷಧಾರೆ; ಚಿಮ್ಮನಚೋಡ 75 ಮಿ.ಮೀ ಮಳೆ

ನಾಗರಾಳ್‌ ಜಲಾಶಯದ ಒಳಹರಿವು ಹೆಚ್ಚಳ

Published:
Updated:
ನಾಗರಾಳ್‌ ಜಲಾಶಯದ ಒಳಹರಿವು ಹೆಚ್ಚಳ

ಚಿಂಚೋಳಿ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಹಾಗೂ ಶನಿವಾರ ಧಾರಾಕಾರ ಮಳೆ ಸುರಿದಿದ್ದು, ಮುಲ್ಲಾಮಾರಿ ಯೋಜನೆಯ ನಾಗರಾಳ್‌ ಜಲಾಶಯದ ಒಳಹರಿವು ಒಂದೂವರೆ ಅಡಿಯಷ್ಟು ಹೆಚ್ಚಾಗಿದೆ.

ಮುಲ್ಲಾಮಾರಿ ನದಿ ನೀರಿನ ಹರವೂ ಹೆಚ್ಚಾಗಿದ್ದು, ಜಲಾಶಯದಲ್ಲಿ ಒಂದೇ ದಿನ ಒಂದೂವರೆ ಅಡಿ ನೀರು ಸಂಗ್ರಹವಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯ‍ನಿರ್ವಾಹಕ ಎಂಜಿನಿಯರ್‌ ಕೃಷ್ಣಾ ಅಗ್ನಿಹೋತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ವಿವಿಧೆಡೆ ನಿರ್ಮಿಸಿದ ಸಣ್ಣ ನೀರಾವರಿ ಇಲಾಖೆಯ ಬ್ಯಾರೇಜುಗಳಿಗೆ ಅಳವಡಿಸಿದ ಗೇಟುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಇಲಾಖೆಯ ಸಹಾಯಕ ಕಾರ್ಯ‍ನಿರ್ವಾಹಕ ಎಂಜಿನಿಯರ್‌ ಶಿವಶರಣಪ್ಪ ಕೇಶ್ವಾರ್‌ ತಿಳಿಸಿದ್ದಾರೆ.

ಚಿಮ್ಮಾಈದಲಾಯಿ ಮನೆಗಳಿಗೆ ನುಗ್ಗಿದ ನೀರು: ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದ ಪ್ರವಾಹದ ನೀರು ಮನೆಗಳಿಗೆ ನುಗ್ಗಿದೆ. ಮನೆಯ ಹಿಂದೆ, ಮುಂದೆ, ಬಚ್ಚಲು ಕೋಣೆಯ ಪೈಪುಗಳನ್ನೂ ಬಿಡದೇ ಎಲ್ಲೆಂದರಲ್ಲಿ ನೀರು ಒಳಹೊಕ್ಕಿದೆ.‌

ಬಡಿಗೇರ್‌ ಬಾವಿಯಿಂದ ಬರುವ ಹಣಾದಿಯ ನೀರು ಗ್ರಾಮದ ಒಳಗಡೆಯಿಂದ ಹರಿದು ಮುಂದೆ ಹೋಗುತ್ತದೆ. ಹೀಗೆ ಹರಿದುಬಂದ ನೀರು ಗ್ರಾಮದ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ ಚಿಂಚೋಳಿಕರ್‌ ತಿಳಿಸಿದ್ದಾರೆ.

ನೀರಿನ ವಿಷಜಂತುಗಳು ಹರಿದು ಬರುವುದರಿಂದ ಇಲ್ಲಿನ ನಿವಸಿಗಳಲ್ಲಿ ಭೀತಿ ಉಂಟು ಮಾಡಿದೆ. ಚಿಮ್ಮಾಈದಲಾಯಿ ಗ್ರಾಮದಲ್ಲಿ ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಕ್ತಿ ದೊರೆಯಬೇಕಾದರೆ ಹಣಾದಿಯಿಂದ ಬರುವ ನೀರಿನ ದಿಕ್ಕು ಬದಲಿಸಬೇಕು; ಇಲ್ಲವೇ ಗ್ರಾಮದಲ್ಲಿ ವಿಶಾಲವಾದ ಚರಂಡಿಗಳು ನಿರ್ಮಿಸಬೇಕು. ಆದರೆ, ಚರಂಡಿ ನಿರ್ಮಾಣಕ್ಕೆ ಸೂಕ್ತ ಸ್ಥಳದ ಅಭಾವ ಇರುವುದರಿಂದ ರಸ್ತೆ ಮೇಲಿನಿಂದಲೇ ನೀರು ಹರಿಯುತ್ತದೆ.

ಸಂಚಾರಕ್ಕೆ ಅಡ್ಡಿ: ತಾಲ್ಲೂಕಿನ ಸುಲೇಪೇಟ ಉಮ್ಮರ್ಗಾ ಮಾರ್ಗದ ರಾಜ್ಯ ಹೆದ್ದಾರಿ 32ರಲ್ಲಿ ಬರುವ ಕೊರವಿ ಬಳಿ ಮರವೊಂದು ರಸ್ತೆಗೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು. ಶುಕ್ರವಾರ ರಾತ್ರಿ ಉರುಳಿದ ಮರದ ಟೊಂಗೆಗಳನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ಶನಿವಾರ ಸಂಜೆ ವೇಳೆಗೆ ಮರವನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಲಾಗಿದೆ. ಗ್ರಾಮದ ಫಾರುಕ್‌, ಬುರಾನಸಾಬ್‌, ಮೊಗಲಪ್ಪ, ಮೋಹನ ಚಿಂಚೋಳಿಕರ್‌, ಸೂಲಗಿತ್ತಿ ನಾರಾಯಣ, ಲಕ್ಷ್ಮಿಕಾಂತ, ವಾಲಿನಾಥ ಅವರಾದಿ, ಮಾರುಫ್‌ ಬನ್ನೂರು, ಗುನ್ನಾಭಿ ಬುರ್ಲಿ, ಶರೀಫ್‌ ಬುರ್ಲಿ ಅವರ ಮನೆಗಳಿಗೆ ನೀರು ನುಗ್ಗಿವೆ ಎಂದರು.

ಬಿತ್ತನೆಗೆ ಸಿದ್ಧತೆ: ಉತ್ತಮ ವರ್ಷಧಾರೆಯಿಂದ ಖುಷಿಯಲ್ಲಿರುವ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಬೀಜ ಗೊಬ್ಬರ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ರಟಕಲ್‌ನಲ್ಲಿ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಉತ್ತಮ ಮಳೆ ಸುರಿದಿದೆ. ಅದರಂತೆ ಚೇಂಗಟಾ, ಐನಾಪುರದಲ್ಲೂ ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಚಿಂಚೋಳಿ ತಾಲ್ಲೂಕಿನ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ: ಚಿಮ್ಮನಚೋಡ –75 ಮಿ.ಮೀ, ಐನಾಪುರ –33.2 ಮಿ.ಮೀ, ಚಿಂಚೋಳಿ –23.2 ಮಿ.ಮೀ, ಸುಲೇಪೇಟ –17.2 ಮಿ.ಮೀ, ನಿಡಗುಂದಾ 11 ಮಿ.ಮೀ, ಕುಂಚಾವರಂ 10.5 ಮಿ.ಮೀ, ಕೋಡ್ಲಿ 5.8 ಮಿ.ಮೀ ಮಳೆಯಾಗಿದೆ.

ಚಿಮ್ಮನಚೋಡ ಮತ್ತು ಐನಾಪುರ ಸುತ್ತಲಿನ ತಾಂಡಾವಾಸಿಗಳು ಒಣ ಮಣ್ಣಿನಲ್ಲಿಯೇ ಮುಂಗಾರಿನ ಬೀಜಗಳ ಬಿತ್ತನೆ ನಡೆಸುವುದು ವಾಡಿಕೆ. ಆದರೆ, ಪ್ರಸಕ್ತ ವರ್ಷ ರೋಹಿಣಿ ಮಳೆ ಚೆನ್ನಾಗಿ ಸುರಿದಿದ್ದರಿಂದ ಇಲ್ಲಿನ ರೈತರು ಬೇಗ ಬಿತ್ತನೆ ಆರಂಭಿಸುವ ಸಾಧ್ಯತೆಯಿದೆ.

**

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ನಿರ್ಮಿಸಿದ ಸಣ್ಣ ನೀರಾವರಿ ಇಲಾಖೆಯ ಬ್ಯಾರೇಜುಗಳಿಗೆ ಅಳವಡಿಸಿದ ಗೇಟುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ

- ಶಿವಶರಣಪ್ಪ ಕೇಶ್ವಾರ್‌, ಸಹಾಯಕ ಕಾರ್ಯ‍ನಿರ್ವಾಹಕ ಎಂಜಿನಿಯರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry